ಏ.10ರಿಂದ ಪುತ್ತೂರು ಜಾತ್ರೆ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹತ್ತಾರು ಮಾಸ್ಟರ್ ಪ್ಲಾನ್ ಅಭಿವೃದ್ದಿ ಕಾರ್ಯಗಳು ನಿರಂತರ ನಡೆಯುತ್ತಿದ್ದು, ಕೆರೆಯ ಅಭಿವೃದ್ಧಿ ಕಾರ್ಯಕ್ಕೆ ಸಂಬಂಧಿಸಿ ಶಿಲಾ ಕಟ್ಟೆಯ ಕಾಮಗಾರಿ ಜಾತ್ರೆ ಮುಂದೆ ಪೂರ್ಣಗೊಳ್ಳಲಿದೆ. ಇದರ ಜೊತೆಗೆ ಅನ್ನಛತ್ರ ಮೇಲಂತಸ್ತು ನಿರ್ಮಾಣ, ಸಭಾಭವನದ ನವೀಕರಣ, ಆವರಣಗೋಡೆ, ದೇವಳದ ಹೊರಾಂಗಣ ಚರಂಡಿ ಅಭಿವೃದ್ಧಿ, ಇಂಟರ್‍ಲಾಕ್ ಅಳವಡಿಕೆ, ರಥ ಮಂದಿರ ನಿರ್ಮಾಣ ಸಹಿತ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ದೇವಳದ ವ್ಯವಸ್ಥಾಪನಾ ಸಮಿತಿ ಕೈಗೆತ್ತಿಗೊಂಡಿದೆ.

ಪುತ್ತೂರು ಜಾತ್ರೆ ಸಹಿತ ದೇವಳದಿಂದ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಮಾತನಾಡಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ 10 ದಿನದ ಜಾತ್ರೆ ಸಂಭ್ರಮ ಬ್ರಹ್ಮಕಲಶದ ಮಾದರಿಯಲ್ಲಿ ನಡೆಯಲಿದೆ. ಹತ್ತೂರಿನಲ್ಲಿ ನೆಲೆಸಿರುವ ಊರ ಪರವೂರಿನ ಭಕ್ತರು ಜಾತ್ರೆಯ ಸಂದರ್ಭ ಭಾಗವಹಿಸುವುದು ವಿಶೇಷ ಎಂದು ಅವರು ಹೇಳಿದರು.

ಜಾತ್ರೆಯ ಸಿದ್ದತೆಯ ನಿಟ್ಟಿನಲ್ಲಿ ಮಾ.25ಕ್ಕೆ ಸಾರ್ವಜನಿಕ ಭಕ್ತರ ಪೂರ್ವ ಭಾವಿ ಸಭೆ ನಡೆಯಲಿದೆ. ಅದೇ ದಿನ ಬೆಳಿಗ್ಗೆ ದರ್ಬೆಯಿಂದ ಪೇಟೆಯಲ್ಲಿ ಆಮಂತ್ರಣ ಪತ್ರ ವಿತರಣೆ ನಡೆಯಲಿದೆ. ವಿಶೇಷವಾಗಿ ಜಾತ್ರೆಯ ಸಂದರ್ಭ 11 ದಿನ ಸಾಂಸ್ಕೃತಿಕ ಕಾರ್ಯಕ್ರಮ, 11 ದಿನ ಮಹಾರುದ್ರಯಾಗ ಮತ್ತು ಅನ್ನಸಂತರ್ಪಣೆ ನಡೆಯಲಿದೆ. ಅನ್ನ ಸಂತರ್ಪಣೆಗೆ ದಾನಿಗಳು ಅನ್ನದಾನ ಸೇವೆಗೆ ಅವಕಾಶ ಕಲ್ಪಿಸಲಾಗಿದೆ ಎಂದ ಕೇಶವಪ್ರಸಾದ್ ಮುಳಿಯ ಅವರು ಸ್ವಚ್ಛತೆ ಸಹಿತ ಹಲವಾರು ಕಾರ್ಯಗಳಿಗೆ ಜಾತ್ರೆಯ ಸಂದರ್ಭ ಸ್ವಯಂ ಸೇವಕರ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಆದಷ್ಟು ತಮ್ಮ ತಮ್ಮ ಹೆಸರನ್ನು ದೇವಳಕ್ಕೆ ನೀಡಿ ಸಹಕಾರ ನೀಡಬೇಕು. ಮಮ ಪರಿವಾರದ ಮೂಲಕವು ಸದಸ್ಯರು ವಿವಿಧ ಸೇವಾ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ ಎಂದರು.

ಏ.9ಕ್ಕೆ ದೇವಸ್ಥಾನಕ್ಕೆ ಹೊರೆಕಾಣಿಕೆ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ. ಅಂದು ಮಧ್ಯಾಹ್ನ ದರ್ಬೆಯಿಂದ ಮತ್ತು ಬೊಳುವಾರಿನಿಂದ ಹೊರೆಕಾಣಿಕೆ ಮೆರವಣಿಗೆ ದೇವಳಕ್ಕೆ ಆಗಮಿಸಲಿದೆ. ಇದರ ಜೊತೆಗೆ ಧಾರ್ಮಿಕ ಶ್ರದ್ದಾಕೇಂದ್ರಗಳಿಂದಲೂ ಪ್ರತ್ಯೇಕವಾಗಿ ಅದೇ ದಿನ ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ ಎಂದು ಕೇಶವಪ್ರಸಾದ್ ಮುಳಿಯ ಹೇಳಿದರು.

ಆನಂತರ ಕೇಶವಪ್ರಸಾದ್ ಮುಳಿಯ ಮಾತನಾಡಿ, ದೇವಸ್ಥಾನಕ್ಕೆ ಗೋ ಸಂವರ್ಧನ ಕೇಂದ್ರ ಆಗಬೇಕೆಂಬ ಅಪೇಕ್ಷೆಯಂತೆ ಸಂಸದ ನಳಿನ್ ಕಮಾರ್ ಕಟೀಲ್ ಮತ್ತು ಶಾಸಕ ಸಂಜೀವ ಮಠಂದೂರು ಅವರ ಮಾರ್ಗದರ್ಶನ ಮತ್ತು ಕಾಳಜಿಯಿಂದ ದೇವಸ್ಥಾನಕ್ಕೆ ಕುರಿಯ ಗ್ರಾಮದ ನೈತ್ತಾಡಿ ಡಿಸಿಆರ್‍ಬಿ ಪಕ್ಕದಲ್ಲೇ ಸುಮಾರು 19.10 ಎಕ್ರೆ ಜಾಗವನ್ನು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಮಂಜೂರುಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ದೇವಳದ ಅಡಳಿತ ಮಂಡಳಿ ಪರವಾಗಿ ಸಂಸದರಿಗೆ ಮತ್ತು ಶಾಸಕರಿಗೆ ಹಾಗು ಸಾಮಾಜಿಕ ಕಾರ್ಯಕರ್ತ ರಂಜಿತ್ ಜೈನ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮಾ.27ಕ್ಕೆ ಗೋ ಸಂವರ್ಧನ ಕೇಂದ್ರವನ್ನು ಹಸ್ತಾಂತರ ಕಾರ್ಯಕ್ರಮ ನಡೆಸಲಾಗುವುದು. ಬೆಳಿಗ್ಗೆ ಗೋ ಸಂವರ್ಧನ ಜಾಗದಲ್ಲೇ ಗಣಪತಿ ಹೋಮ ನಡೆದು ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವೀಣಾ ಬಿ.ಕೆ, ರಾಮದಾಸ್ ಗೌಡ, ಶೇಖರ್ ನಾರಾವಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.