ಪುತ್ತೂರು ಜ್ಯೂಸ್ ಸೆಂಟರ್ ಗೆ ಬೆಂಕಿ

ಪುತ್ತೂರು: ಪುತ್ತೂರು ಬಸ್ ನಿಲ್ದಾಣದ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಜ್ಯೂಸ್ ಸೆಂಟರ್ ವೊಂದರಲ್ಲಿ ಅಡುಗೆ ಅನಿಲದಿಂದಾಗಿ ಸಂಭವಿಸಬಹುದಾದ ಭಾರಿ ಬೆಂಕಿ ದುರಂತವೊಂದು ಪೊಲೀಸ್ ಮತ್ತು ಗೃಹರಕ್ಷಕ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದಾಗಿ ತಪ್ಪಿದ ಘಟನೆ ಆ.1 ರ ನಸುಕಿನ ಜಾವ ನಡೆದಿದೆ. ಯೋಗೀಶ್ ರೈ ಮಾಲಕತ್ವದ ಜ್ಯೂಸ್ ಸೆಂಟರ್ ನೊಳಗೆ 3 ಗಂಟೆ ರಾತ್ರಿ ಸುಮಾರಿಗೆ ಬೆಂಕಿಯ ಜ್ವಾಲೆ ಅಂಗಡಿಯ ಸೊತ್ತುಗಳಿಗೆ ಹತ್ತಿ ಕೊಂಡಿತ್ತು. ಇದೇ ವೇಳೆ ರಾತ್ರಿ ಬಸ್ ನಿಲ್ಧಾಣದ ಪಾಯಿಂಟ್ ಕರ್ತವ್ಯದಲ್ಲಿದ್ದ ಪುತ್ತೂರು ನಗರ ಪೊಲೀಸ್ ಠಾಣೆ ಸಿಬ್ಬಂದಿ ಭೀಮ್ ಸೇನ್ ಮತ್ತು ಗೃಹರಕ್ಷಕದಳದ ಸಿಬ್ಬಂದಿ ಸುದರ್ಶನ್ ಅವರು ಕಟ್ಟಡ ತುಂಬಾ ಹೊಗೆ ಬರುವುದನ್ನು ಗಮನಿಸಿ ಪರಿಶೀಲಿಸಿದಾಗ ಜ್ಯೂಸ್ ಸೆಂಟರ್ ಅಂಗಡಿಗೆ ಬೆಂಕಿ ತಗಲಿರುವ ಮಾಹಿತಿಯನ್ನು ರಾತ್ರಿ ರೌಂಡ್ಸ್ ನಲ್ಲಿದ್ದ ಎ.ಎಸ್.ಐ ಚಕ್ರಪಾಣಿ ಅವರಿಗೆ ಮಾಹಿತಿ ನೀಡಿದರು. ಇದೇ ವೇಳೆ ಅಗ್ನಿಶಾಮಕ ದಳದವರಿಗೂ ಮಾಹಿತಿ ನೀಡಲಾಯಿತು. ಅಗ್ನಿಶಾಮಕದಳದವರು ಬಂದು ಜ್ಯೂಸ್ ಸೆಂಟರ್ ಶಟರ್ ಬೀಗ ಒಡೆದು ಒಳಗೆ ಬೆಂಕಿ ಹತ್ತಿಕೊಂಡಿದ್ದ ಅಡುಗೆ ಅನಿಲವನ್ನು ಸ್ಟೌವ್ ನಿಂದ ಪ್ರತ್ಯೇಕಗೊಳಿಸಿ ಬೆಂಕಿಯ ಜ್ವಾಲೆಯನ್ನು ನಂದಿಸಿದರು. ಒಟ್ಟಿನಲ್ಲಿ ಪೊಲೀಸರ ಸಮಯ ಪ್ರಜ್ಞೆಯಿಂದಾಗಿ ಭಾರಿ ದುರಂತವೊಂದು ತಪ್ಪಿದೆ.
