ಪುತ್ತೂರಿನ ಪರ್ಲಡ್ಕ ಶಾಲೆಯಲ್ಲಿ ಕಲಿಕಾ ಹಬ್ಬ ಕಾರ್ಯಕ್ರಮಕ್ಕೆ ಚಾಲನೆ

ಪುತ್ತೂರು:ರಾಜ್ಯಾದ್ಯಂತ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ನಡೆಯುವ ಮಕ್ಕಳ ಕಲಿಕಾ ಹಬ್ಬ ಪುತ್ತೂರಿನ ಪರ್ಲಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಸಮೂಹ ಸಂಪನ್ಮೂಲ ಕೇಂದ್ರ ಹಾಗೂ ಪರ್ಲಡ್ಕ ಹಿರಿಯ ಪ್ರಾಥಮಿಕ ಶಾಲಾ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.ಕಲಿಕಾ ಹಬ್ಬದ ಅಂಗವಾಗಿ ಶಾಲಾ ವಠಾರವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು.

ಉದ್ಘಾಟನಾ ಕಾರ್ಯಕ್ರಮ ಮೊದಲು ಪರ್ಲಡ್ಕ ವೃತ್ತದಿಂದ ಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಬ್ಯಾಂಡ್ ಮೂಲಕ ಮೆರವಣಿಗೆಯಲ್ಲಿ ಅತಿಥಿಗಳನ್ನು ಸಮಾರಂಭ ವೇದಿಕೆಗೆ ಕರೆತಂದರು. ಉದ್ಘಾಟನಾ ಸಮಾರಂಭದಲ್ಲಿ ವಿಶೇಷವಾಗಿ ವಿಜ್ಞಾನ ಪ್ರಯೋಗದ ಮಾದರಿಯೊಂದನ್ನು ಪ್ರದರ್ಶಿಸಲಾಯಿತು. ಶಾಲಾ ಶಿಕ್ಷಕಿ ಯಶೋಧ ಅವರು ತೆಂಗಿನ ಗರಿಯಿಂದ ಟೋಪಿ ರಚಿಸಿದ್ದು ಎಲ್ಲರ ಗಮನ ಸೆಳೆಯಿತು. ಟೋಪಿಯನ್ನು ಅತಿಥಿಗಳಿಗೆ ತೊಡಿಸಲಾಯಿತು.

ಪುತ್ತೂರು ಶಾಸಕ ಸಂಜೀವ ಮಠಂದೂರು ಕಲಿಕಾ ಹಬ್ಬಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ, ಪ್ರಕೃತಿ ಜತೆಗೆ ಬದುಕಿ, ಬದುಕು ರೂಪಿಸುವ ಕುರಿತು ಇಂದಿನ ಕಲಿಕಾ ಹಬ್ಬದ ಉದ್ದೇಶವಾಗಿದ್ದು, ಶೈಕ್ಷಣಿಕವಾಗಿ ಜೀವನದ ಜತೆ ಬದುಕು ಹಸನು ಮಾಡುವ ಸಂದೇಶವನ್ನು ಇಂದಿನ ಕಾರ್ಯಕ್ರಮ ನೀಡಿದೆ. ಜತೆಗೆ ವಿಜ್ಞಾನವನ್ನು ಮೈಗೂಡಿಸಿಕೊಂಡು ಧಾರ್ಮಿಕ, ಸಾಂಸ್ಕøತಿಕ ಹಬ್ಬಗಳಿಗೆ ಯಾವ ರೀತಿಯ ಕೊಡುಗೆಗಳನ್ನು ನೀಡಬಹುದು ಎಂಬುದನ್ನು ಇಲ್ಲಿ ತೋರಿಸಿಕೊಟ್ಟಿದ್ದಾರೆ. ಶೈಕ್ಷಣಿಕ ಹಬ್ಬದ ಮೂಲಕ ಆಮೂಲಾಗ್ರ ಬದಲಾವಣೆ ಕಾಣಬಹುದು ಎಂದರು.

ವೇದಿಕೆಯಲ್ಲಿ ತಾಲೂಕು ಸಂಪನ್ಮೂಲ ವ್ಯಕ್ತಿ, ಸಂಜಯನಗರ ಶಾಲಾ ಮುಖ್ಯ ಶಿಕ್ಷಕ ರಮೇಶ್ ಉಳಯ,ಶಿಕ್ಷಣಾಧಿಕಾರಿ ಕಚೇರಿಯ ನವೀನ್ ವೇಗಸ್, ಸುಧಾಕರ್, ನವೀನ್, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಸನ್ನ ಭಟ್, ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ, ಶಿಕ್ಷಕ ರಾಮಣ್ಣ ರೈ, ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ವಾಣಿಶ್ರೀ, ಯಶೋಧ, ಅತಿಥಿ ಶಿಕ್ಷಕಿ ಸುಂದರಿ, ಜ್ಞಾನದೀಪ ಶಿಕ್ಷಕಿ ಪ್ರೀತಿ, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮಂಜುನಾಥ ಆಚಾರ್ಯ, ಜತೆಕಾರ್ಯದರ್ಶಿ ವಿಕ್ರಂ ಪರ್ಲಡ್ಕ, ಶಿಕ್ಷಕ, ಸಂಪನ್ಮೂಲ ವ್ಯಕ್ತಿ ಮುಖ್ಯ ಶಿಕ್ಷಕಿ ವತ್ಸಲಾ,ನಿತ್ಯಾನಂದ ಪಾಂಗಲಾಯಿ ಉಪಸ್ಥಿತರಿದ್ದರು.