ಗೋಸಂತತಿ ಹೆಚ್ಚಿಸಲು ಯೋಜನೆ ಜಾರಿಗೊಳಿಸಬೇಕಿದೆ : ವಿಪಕ್ಷ ಉಪನಾಯಕ ಯು.ಟಿ ಖಾದರ್ ಹೇಳಿಕೆ

ಉಳ್ಳಾಲ: ಗೋಸಂತತಿ ಕಡಿಮೆಯಿದೆ. ಅದನ್ನು ಹೆಚ್ಚು ಮಾಡುವ ಕೆಲಸ ಆಗಬೇಕಿದೆ. ಗೋವುಗಳನ್ನು ಸಾಕುವವರಿಗೆ ಅದರ ಕಷ್ಟಗಳು ಗೊತ್ತಿದೆ ಹೊರತು ಭಾಷಣ ಮಾಡುವವರಿಗೆ ಕಷ್ಟದ ಬಗ್ಗೆ ಗೊತ್ತಿಲ್ಲ. ಗೋಸಾಕುವವರಿಗೆ ಶೇ.90 ಕ್ಕಿಂತ ಹೆಚ್ಚಿನ ಸಬ್ಸಿಡಿಯನ್ನು ಸರಕಾರ ನೀಡಿ ಗೋವುಗಳನ್ನು ಸಾಕಲು ಪ್ರೋತ್ಸಾಹಿಸಬೇಕು ಎಂದು ವಿಪಕ್ಷ ಉಪನಾಯಕ ಯು.ಟಿ ಖಾದರ್ ಹೇಳಿದರು.
ದ.ಕ ಜಿಲ್ಲಾ ಪಂಚಾಯತ್ , ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಳ್ಳಾಲ ತಾಲೂಕು ಇದರ 2021-22 ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಹಾಗೂ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಕೋಟೆಕಾರು ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ರಬ್ಬರ್ ನೆಲಹಾಸು ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಹಿಂದಿನ ಸರಕಾರದ ಅವಧಿಯಲ್ಲಿ ಹಸುಭಾಗ್ಯ ಯೋಜನೆಯನ್ನು ಜಾರಿಗೊಳಿಸಿ ರಾಜ್ಯಾದ್ಯಂತ ಅಲ್ಲದೆ ಉಳ್ಳಾಲ ಕ್ಷೇತ್ರದಲ್ಲೇ ಹಲವು ಕೃಷಿಕರಿಗೆ ಹಸುವನ್ನು ಉಚಿತವಾಗಿ ನೀಡಲಾಗಿತ್ತು. ಇದರಿಂದ ರಾಜ್ಯದಲ್ಲಿ ದಿನಕ್ಕೆ 8 ಲಕ್ಷ ಲೀ. ಹಾಲು ಉತ್ಪಾಧನೆ ಹೆಚ್ಚಾಗಿತ್ತು. ಹೆಚ್ಚುವರಿ ಹಾಲು ಇರುವುದನ್ನು ಕೆಎಂಎಫ್ ನವರು ಪ್ರಶ್ನಿಸಿದಾಗ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಹಾಲು ಕ್ಷೀರಭಾಗ್ಯ ಯೋಜನೆಯನ್ನು ಅಂದಿನ ಮುಖ್ಯಮಂತ್ರಿ ಜಾರಿಗೊಳಿಸಿದ್ದರು. ಪಶು ವೈದ್ಯಾಧಿಕಾರಿಗಳ ಕೊರತೆಯಿಂದ ಹಲವೆಡೆ ಕೃಷಿಕರಿಗೆ ತೊಂದರೆಯಾಗುತ್ತಿದೆ. ಇರುವ ವೈದ್ಯರು ಗ್ರಾ.ಪಂ.ಗಳನ್ನು ವಿಶ್ವಾಸಕ್ಕೆ ಪಡೆದುಕೊಂಡು ಎಲ್ಲಾ ಜಾನುವಾರು ಸಾಕುವವರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಿದೆ. ಭೂಮಿಯಲ್ಲಿ ಮನುಷ್ಯರ ಜೀವನದ ಹಕ್ಕಿನಷ್ಟೇ ಪ್ರಾಣಿಗಳಿಗೂ ಇದೆ. ವೈದ್ಯರಿಲ್ಲ ಅನ್ನುವ ಕಾರಣಕ್ಕೆ ಸರಕಾರ ಮೊಬೈಲ್ ಆಂಬ್ಯುಲೆನ್ಸ್ ಜ್ಯಾರಿಗೊಳಿಸಿ , ಇಡೀ ತಾಲೂಕಿಗೆ ಖರೀದಿಸಿಯೂ ಆಗಿದೆ ಎಂದರು.

ಈ ಸಂದರ್ಭ ಕೋಟೆಕಾರು ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಜುಬೈದಾ ಬಾವಾ, ಅಹಮ್ಮದ್ ಅಜ್ಜಿನಡ್ಕ, ಇಸಾಕ್ , ಮೊಹಮ್ಮದ್ ಪುಷ್ಠಿ, ಹಮೀದ್ ಮಾಡೂರು , ಜಿ.ಪಂ ಮಾಜಿ ಸದಸ್ಯ ಸಿದ್ದೀಖ್ ಕೊಳಂಗೆರೆ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ್ ಉಳ್ಳಾಲ್, ಮಾಜಿ ಅಧ್ಯಕ್ಷ ಈಶ್ವರ್ ಉಳ್ಳಾಲ್, ಹರ್ಷರಾಜ್ ಮುದ್ಯ, ಮಂಗಳೂರಿನ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಅಶೋಕ್, ತಲಪಾಡಿಯ ಹಿರಿಯ ಪಶು ವೈದ್ಯಾಧಿಕಾರಿ ಡಾ. ಸೆವ್ರಿನಾ ರಚನಾ ಡಿಸೋಜ, ಕೋಟೆಕಾರಿನ ಡಾ.ಗಜೇಂದ್ರ ಕುಮಾರ್, ಕುರ್ನಾಡು ಭಾಗದ ಪಶುವೈದ್ಯಾಧಿಕಾರಿ ಡಾ. ನಿಖಿಲ್ ರಾಜ್ ಉಪಸ್ಥಿತರಿದ್ದರು.
