ರಂಗಸಂಗಾತಿ ಪ್ರತಿಷ್ಟಾನದ ಹದಿನೈದನೇ ವಾರ್ಷಿಕೋತ್ಸವ ಮತ್ತು ರಂಗಭಾಸ್ಕರ-2023 ಕಾರ್ಯಕ್ರಮ

ಮಂಗಳೂರು ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ಹದಿನೈದನೇ ವಾರ್ಷಿಕೋತ್ಸವ, ರಂಗಭಾಸ್ಕರ-2023 ಪ್ರಶಸ್ತಿ ಪ್ರದಾನ ಹಾಗೂ ರಂಗ ಗೌರವ ಕಾರ್ಯಕ್ರಮವುಜೂನ್ 29 ಮತ್ತು 30 ರಂದು ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದ ಅಗರಿ ರಘುರಾಮ ವೇದಿಕೆಯಲ್ಲಿ ನಡೆಯಲಿದೆ.

rangasangathi

ಶ್ರೀ ಗುರುಲೀಲಾ ಮೋಟರ್ಸ್ ಡ್ರೈವಿಂಗ್ ಸ್ಕೂಲ್ ಮಂಗಳೂರು ಮತ್ತು ಶ್ರೀ ಶಾರದಾ ಸೇವಾ ಸಮಿತಿ ಸಹಯೋಗದೊಂದಿಗೆ ಎರಡು ದಿನದ ಕಾರ್ಯಕ್ರಮ ಆಯೋಜಿಸಲಾಗಿದೆ.ಜೂನ್ 29ರಂದು ಸಂಜೆ ಶ್ರೀ ಗುರುಲೀಲಾ ಮೋಟರ್ಸ್ ಡ್ರೈವಿಂಗ್ ಸ್ಕೂಲ್‍ನ ಹದಿನೈದನೇ ವಾರ್ಷಿಕ ದಿನಾಚರಣೆ ಪ್ರಯುಕ್ತ ರಂಗ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ಲೋಕಯ್ಯ ಶೆಟ್ಟಿಗಾರ್, ಜಗನ್ನಾಥ ಕಲ್ಲಾಪು ಮತ್ತು ಶಾಂತಾ ಕೆ ರಂಗಗೌರವ ಪಡೆಯಲಿದ್ದಾರೆ. ಶ್ರೀ ಗುರುಲೀಲಾ ಮೋಟರ್ಸ್ ಡ್ರೈವಿಂಗ್ ಸ್ಕೂಲ್ ಪ್ರಾಂಶುಪಾಲ ಮುರಳೀಧರ ಕಾಮತ್ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ.

ಡಾ.ಹರಿಕೃಷ್ಣ ಪುನರೂರು, ಕಾಸರಗೋಡು ಚಿನ್ನಾ, ಮೋಹನಚಂದ್ರ ಯು, ವಿಜಯ್‍ಕುಮಾರ್ ಕೊಡಿಯಾಲ್‍ಬೈಲ್, ಪ್ರಕಾಶ್ ಪಾಂಡೇಶ್ವರ್, ಅರವಿಂದ ಬೋಳಾರ್, ರಾಜೇಶ್ ಉರ್ವ, ರವಿಶಂಕರ್ ಬಿ ಮೊದಲಾದವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ನಂತರ ಶಶಿರಾಜ್ ಕಾವೂರು ರಚನೆ ಮತ್ತು ನಿರ್ದೇಶನದ ದಾಟ್ಸ್ ಆಲ್ ಯುವರ್ ಆನರ್ ಎಂಬ ಕನ್ನಡ ನಾಟಕವನ್ನು ರಂಗಸಂಗಾತಿ ಬಳಗದ ನಟರು ಪ್ರಸ್ತುತ ಪಡಿಸಲಿದ್ದಾರೆ.

ಜೂನ್ 30ರಂದು ಸಂಜೆ 6.00ಕ್ಕೆ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ಹದಿನೈದನೆ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಲಿದ್ದು ಹಿರಿಯ ನಟ, ನಿರ್ದೇಶಕ ಡಾ.ಎಂ.ಗಣೇಶ ಹೆಗ್ಗೋಡುರವರಿಗೆ ರಂಗಭಾಸ್ಕರ-2023 ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಹಿರಿಯ ನಟ, ನಿರ್ದೇಶಕ ದಿವಂಗತ ಜನಾರ್ಧನ ರಾವ್ ಪಣಂಬೂರು ಸ್ಮರಣಾರ್ಥ, ಕಲಾಪೋಷಕ ದಯಾನಂದ ರಾವ್ ಕಾವೂರರ ಶ್ರೀ ಶಾರದಾ ಸೇವಾ ಸಮಿತಿಯ ಸಹಯೋಗದೊಂದಿಗೆ ಹಿರಿಯ ನಟ ಎಂ. ಸುಬ್ರಮಣ್ಯ ರಾವ್ ಅವರಿಗೆ ದಿವಂಗತ ಪಿ.ಸಿ.ಜನಾರ್ಧನ ರಾವ್ ಸ್ಮಾರಕ ರಂಗ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ಈ ಕಾರ್ಯಕ್ರಮದಲ್ಲಿ ಡಾ.ಎಂ.ಮೋಹನ ಆಳ್ವ, ಶಾಸಕ ವೇದವ್ಯಾಸ ಕಾಮತ್, ಅಗರಿ ರಾಘವಂದ್ರ ರಾವ್, ಕಿಶೋರ್ ಡಿ.ಶೆಟ್ಟಿ, ನ್ಯಾಯವಾದಿ ಪದ್ಮರಾಜ್ ಆರ್., ದಯಾನಂದ ರಾವ್ ಕಾವೂರು, ನವೀನ್ ಡಿ ಪಡೀಲ್, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಬಿ, ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ.

ಸಭಾ ಕಾರ್ಯಕ್ರಮದ ನಂತರ ಲಂಕೇಶರ ಕತೆಗಳನ್ನಾಧರಿಸಿದ ಆಪ್ತ ರಂಗಭೂಮಿಯ ಕನ್ನಡ ನಾಟಕ- ರೊಟ್ಟಿಯ ಸಲುವಾಗಿ ಇಷ್ಟೆಲ್ಲ?! ಪ್ರದರ್ಶನ ನಡೆಯಲಿದೆ. ಈ ನಾಟಕವನ್ನು ಸತ್ಯಶೋಧನಾ ರಂಗ ತಂಡ, ಹೆಗ್ಗೋಡು ಪ್ರಸ್ತುತ ಪಡಿಸಲಿದ್ದು ಡಾ.ಎಂ.ಗಣೇಶ ಹೆಗ್ಗೋಡು ನಿರ್ದೇಶಿದ್ದಾರೆ.

ಎರಡೂ ದಿನದ ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದು, ಸರ್ವರೂ ಸಹಕರಿಸಬೇಕೆಂದು ರಂಗಸಂಗಾತಿಯ
ಅಧ್ಯಕ್ಷರಾದ ಗೋಪಾಲಕೃಷ್ಣ ಶೆಟ್ಟಿ ಮನವಿ ಮಾಡಿದ್ದಾರೆ.

Related Posts

Leave a Reply

Your email address will not be published.