ಕಾಸರಗೋಡು: ಬೇಕಲ ಕೋಟೆಯ ಸಮೀಪದ ಪಳ್ಳಿಕೆರೆ ಬೀಚ್‌ನಲ್ಲಿ ಸಮುದ್ರ ಸ್ನಾನಕ್ಕೆಂದು ತೆರಳಿದ್ದ ವೇಳೆ ಅಲೆಗಳ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹಗಳು ಇದೀಗ ಪತ್ತೆಯಾಗಿವೆ.

ಮೃತಪಟ್ಟವರನ್ನು ಕೊಟ್ಟಾಯಂ ಚಂಗನಾಶ್ಶೇರಿಯ ನಿವಾಸಿಗಳಾದ ಅಪ್ಪು ಟಿ. ಅಬ್ರಹಾಂ (20) ಮತ್ತು ಅವರ ಸ್ನೇಹಿತ ಅಂಗಿತಿ (20) ಎಂದು ಗುರುತಿಸಲಾಗಿದೆ.
ಘಟನೆಯ ವಿವರ:
ಭಾನುವಾರ ಸಂಜೆ ನಾಲ್ವರು ಸ್ನೇಹಿತರು ಪಳ್ಳಿಕೆರೆ ಕಡಲ ತೀರದಲ್ಲಿ ಸ್ನಾನ ಮಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಸಮುದ್ರದ ಅಲೆಗಳ ತೀವ್ರತೆಗೆ ಸಿಲುಕಿದ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಈ ವೇಳೆ ಜತೆಗಿದ್ದ ಉಳಿದ ಇಬ್ಬರು ಸ್ನೇಹಿತರು ಅಪಾಯದಿಂದ ಪಾರಾಗಿದ್ದಾರೆ.
ನಾಪತ್ತೆಯಾದವರ ಹುಡುಕಾಟಕ್ಕಾಗಿ ಸ್ಥಳೀಯರು ಮತ್ತು ರಕ್ಷಣಾ ಪಡೆ ನಡೆಸಿದ ಕಾರ್ಯಾಚರಣೆಯ ಫಲವಾಗಿ ಸೋಮವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಅಪ್ಪು ಟಿ. ಅಬ್ರಹಾಂ ಅವರ ಮೃತದೇಹ ಚಿತ್ತಾರಿ ಅಳಿವೆ ಬಾಗಿಲಿನಲ್ಲಿ ಪತ್ತೆಯಾಯಿತು. ಇದಾದ ಕೆಲವೇ ಹೊತ್ತಿನಲ್ಲಿ, ಸಮೀಪದ ಮುಟ್ಟುಂದಲ ಅಳಿವೆ ಬಾಗಿಲಿನಲ್ಲಿ ಇನ್ನೊಬ್ಬ ವಿದ್ಯಾರ್ಥಿ ಅಂಗಿತಿ ಅವರ ಮೃತದೇಹವನ್ನು ಸಾರ್ವಜನಿಕರು ಪತ್ತೆ ಹಚ್ಚಿದರು.
ಪ್ರಸ್ತುತ ಮೃತದೇಹಗಳನ್ನು ಕಾಞಂಗಾಡು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಮುಂದಿನ ಕಾನೂನು ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ. ಯುವಕರ ಅಕಾಲಿಕ ಮರಣವು ಅವರ ಕುಟುಂಬ ಮತ್ತು ಸ್ನೇಹಿತರಲ್ಲಿ ತೀವ್ರ ಶೋಕವನ್ನು ಉಂಟುಮಾಡಿದೆ.


