HomeFresh Newsಅರೆಭಾಷೆಯಂತಹ ಪ್ರಾದೇಶಿಕ ಭಾಷೆಗಳು ಕನ್ನಡವನ್ನು ಶ್ರೀಮಂತಗೊಳಿಸಿದೆ- ಸಿಎಂ ಸಿದ್ದರಾಮಯ್ಯ

ಅರೆಭಾಷೆಯಂತಹ ಪ್ರಾದೇಶಿಕ ಭಾಷೆಗಳು ಕನ್ನಡವನ್ನು ಶ್ರೀಮಂತಗೊಳಿಸಿದೆ- ಸಿಎಂ ಸಿದ್ದರಾಮಯ್ಯ

ಕನ್ನಡ ಭಾಷೆ ರಾಜ್ಯದ ಅಸ್ಮಿತೆಯ ತಳಹದಿಯಾಗಿದ್ದರೆ, ಅರೆಭಾಷೆಯಂತಹ ಪ್ರಾದೇಶಿಕ ಭಾಷೆಗಳು ಕನ್ನಡವನ್ನು ಶ್ರೀಮಂತಗೊಳಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಭಾನುವಾರ ಹೇಳಿದರು.

ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ 2024ನೇ ಸಾಲಿನ ಅರೆ ಭಾಷೆ ಅಕಾಡೆಮಿ ಗೌರವ ಪ್ರಶಸ್ತಿಯನ್ನು ಪ್ರದಾನ ಮಾಡಿ ಮಾತನಾಡಿದ ಮುಖ್ಯಮಂತ್ರಿ, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಅರೆಭಾಷೆ ಗೌಡರು ಹೆಚ್ಚಾಗಿ ವಾಸಿಸುತ್ತಿದ್ದು, ಇವರ ಜನಸಂಖ್ಯೆ ಮೂರು ಲಕ್ಷಕ್ಕೂ ಹೆಚ್ಚಿದೆ ಎಂದರು.

1882ನೇ ಗೆಜೆಟ್ ಬಂದಾಗ ಇವರು ಸಕಲೇಶಪುರದಲ್ಲಿದ್ದು, ಬರಗಾಲದ ಸಂದರ್ಭದಲ್ಲಿ ಹೇಮಾವತಿ ನದಿ ಬತ್ತಿದಾಗ ಪಕ್ಕದ ಜಿಲ್ಲೆ ಸುಳ್ಯಕ್ಕೆ ಬಂದು ನೆಲೆಯೂರುತ್ತಾರೆ. ತುಳು, ಕೊಂಕಣಿ ಜೊತೆಗೆ ಕನ್ನಡ ಸೇರಿ ಅರೆಭಾಷೆಯಾಗಿದೆ. ಹೋಗುತ್ತೇನೆ ಎನ್ನುವುದು ವೋನೆ, ಬರುತ್ತೇನೆ ಎನ್ನುವುದು ಬನೇ ಎಂದು ಹೇಳುತ್ತಾರೆ. ಹೀಗೆ ಕೆಲವು ಅಕ್ಷರಗಳು ಬಿಟ್ಟುಹೋಗಿ ಅರೆಭಾಷೆಯಾಗಿದೆ. ಮೂಲತ: ಗೌಡ ಸಮುದಾಯಕ್ಕೆ ಸೇರಿರುವ ಇವರನ್ನು ಅರೆಭಾಷೆ ಗೌಡರು ಎನ್ನುತ್ತಾರೆ. ಅರೆಭಾಷಿಕರದ್ದು ವಿಭಿನ್ನ ಸಂಸ್ಕೃತಿಯಾಗಿದೆ ಎಂದು ತಿಳಿಸಿದರು.

ಅರೆಭಾಷಿಕರಾಗಿದ್ದ ಕುರುಂಜಿ ವೆಂಕಟರಮಣ ಗೌಡರು ನನಗೆ ಪರಿಚಿತರು. ಕರ್ನಾಟಕದಲ್ಲಿ ಸುಮಾರು 230 ಸಣ್ಣ ಭಾಷೆಗಳಿವೆ. ಇವೆಲ್ಲವೂ ಕನ್ನಡದಿಂದಲೇ ಹುಟ್ಟಿದ್ದು, ಅರೆಭಾಷೆಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಅಕಾಡೆಮಿ ಮಾಡಲಿ ಎಂದು ಆಶಿಸುತ್ತೇನೆ. ಭಾಗಮಂಡಲದಲ್ಲಿ ನಾಡಗೌಡ ಸಮುದಾಯಕ್ಕೆ ಒಂದು ಕೋಟಿ ರೂ.ಗಳನ್ನು ಹಿಂದೆ ಒದಗಿಸಲಾಗಿತ್ತು. ಪ್ರಸ್ತುತ ಇರುವ 50 ಲಕ್ಷ ರೂ.ಬೇಡಿಕೆಯನ್ನು ಸಹ ಈಡೇರಿಸಲಾಗುವುದು. ಇತರೆ ಬೇಡಿಕೆಗಳನ್ನು ಪರಿಶೀಲಿಸಿ ಪರಿಹಾರ ಒದಗಿಸಲಾಗುವುದು ಎಂದು ಸಿಎಂ ಹೇಳಿದರು.

ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅರೆಭಾಷೆ ಗೌಡರಿಗೆ ಮಡಿಕೇರಿಯಲ್ಲಿ ಜಮೀನು ಕೊಡಬೇಕೆನ್ನುವ ಪ್ರಸ್ತಾವನೆ ಇದ್ದು, ಇದನ್ನು ಈಡೇರಿಸಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದರು. ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿಗೆ ಭಾಜನರಾದ ಕೆ.ಆರ್.ಗಂಗಾಧರ, ಯು.ಪಿ.ಶಿವಾನಂದ ಹಾಗೂ ಡಿ.ಎಸ್.ಆನಂದ ಅವರಿಗೆ ಸರ್ಕಾರದ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಸಚಿವ ಭೈರತಿ ಸುರೇಶ್, ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ, ಶಾಸಕ ಅಂತರಗೌಡ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಗಾಯತ್ರಿ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments