ಸಂವೇದನೆಗಳು ಮತ್ತು ಸಂಘರ್ಷಗಳ ನಡುವೆ ನಿರಾಳವಾಗಿ  ಬದುಕಿದವರು ಸಾರಾ ಅಬೂಬಕ್ಕರ್ : ಮುದ್ದು ಮೂಡುಬೆಳ್ಳೆ

‘ಲೇಖಕಿ ಸಾರಾ ಅಬೂಬಕ್ಕರ್ ಅವರು ತನ್ನ ಧರ್ಮಕ್ಕೆ ನಿಷ್ಠರಾಗಿದ್ದರು ಮತ್ತು ಬೇರೆ ಧರ್ಮಗಳ ಜೊತೆಗೂ ಒಳ್ಳೆಯ ಒಡನಾಟ ಇಟ್ಟು ಕೊಂಡಿದ್ದರು. ಮುಸ್ಲಿಂ ಸಮುದಾಯದ ಆಚಾರಗಳು ಮತ್ತು ಆಚರಣೆಯ ಸಂಧಿಗ್ಧತೆಗಳ ತುಂಬಾ ಅಧ್ಯಯನ ಮಾಡಿ ತಮ್ಮ ಕಾದಂಬರಿಗಳಲ್ಲಿ ಕಣ್ಣಿಗೆ ಕಟ್ಟುವಂತೆ ಬರೆಯುತ್ತಿದ್ದರು. ಸ್ತ್ರೀವಾದಿಯಾಗಿದ್ದ ಸಾರಾ ಅವರು ಮಾನವತಾವಾದಿಯೂ ಆಗಿದ್ದರು.

ಸಂವೇದನೆಗಳು ಮತ್ತು ಸಂಘರ್ಷಗಳ ನಡುವೆ ನಿರಾಳವಾಗಿ  ಬದುಕಿದ ಗಟ್ಟಿ ಮನಸಿನ ಶಕ್ತಿಯಾಗಿದ್ದರು’ ಎಂದು ಮಂಗಳೂರು ಆಕಾಶವಾಣಿಯ ವಿಶ್ರಾಂತ ಕಾರ್ಯಕ್ರಮ ನಿರ್ವಹಕರಾದ ಸಾಹಿತಿ ಮುದ್ದು ಮೂಡುಬೆಳ್ಳೆಯವರು ಹೇಳಿದರು.

ಅವರು ಭಾನುವಾರ ಚುಟುಕು ಸಾಹಿತ್ಯ ಪರಿಷತ್ತು ಮೈಸೂರು ಇದರ ಮಂಗಳೂರು ತಾಲೂಕು ಘಟಕ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಹೋಟೆಲ್ ವುಡ್ಲ್ಯಾಂಡ್ಸ್ ಸಭಾಭವನದಲ್ಲಿ ನಡೆದ ಕಾದಂಬರಿಗಾರ್ತಿ ದಿವಂಗತ ಸಾರಾ ಅಬೂಬಕ್ಕರ್ ಅವರ ನೆನಪಿಗಾಗಿ ಆಯೋಜಿಸಿದ್ದ ‘ಸಾರ ಸಾಗರ ಸಾರಾ’ ಉಪನ್ಯಾಸ ನೀಡಿ ಮಾತನಾಡಿದರು.

‘ಮುಸ್ಲಿಂ ಸಮುದಾಯದಲ್ಲಿ ಸಾಹಿತ್ಯ ಲೋಕಕ್ಕೆ ಬಂದ ಕೆಲವೇ ಕೆಲವು ಅಪರೂಪದ ಬರಹಗಾರ್ತಿಗಳಲ್ಲಿ ಸಾರಾ ಅಬೂಬಕ್ಕರ್ ಒಬ್ಬರು. ಚಂದ್ರಗಿರಿಯ ತೀರದಲ್ಲಿ ಕಾದಂಬರಿಯ ಬಳಿಕ ಅವರ ಸಾಧನೆ ಶಿಖರವೇರಿತು’ ಎಂದರು.

ಪ್ರಸ್ತಾವಿಕವಾಗಿ ಮಾತನಾಡಿದ ಗೋವಿಂದ ದಾಸ ಕಾಲೇಜಿನ ಪ್ರಾಚಾರ್ಯರಾದ ಪ್ರೊಫೆಸರ್ ಪಿ. ಕೃಷ್ಣಮೂರ್ತಿಯವರು ‘ಬಂಡಾಯ ಸಾಹಿತ್ಯದ ಉದಯಿಸಿದ್ದ ಕಾಲ ಘಟ್ಟದಲ್ಲಿ ಸಾರಸ್ವತ ಲೋಕಕ್ಕೆ ಸಿಕ್ಕ ಲೇಖಕಿ ಸಾರಾ ಅವರು. ಸ್ತ್ರೀ ಸಮುದಾಯದ ದುಃಖಗಳನ್ನು ಬರೆಯುವ ಪ್ರಯತ್ನ ಮಾಡಿದವರು. ಪ್ರತಿರೋಧಗಳ ನಡುವೆ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡು ಯಶಸ್ವಿಯಾದವರು’ ಎಂದು ಅಭಿಪ್ರಾಯ ಪಟ್ಟರು. ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚುಟುಕು ಸಾಹಿತ್ಯ ಪರಿಷತ್ತಿನ ದ. ಕ ಜಿಲ್ಲಾ ಗೌರವಧ್ಯಕ್ಷ ಇರಾ ನೇಮು ಪೂಜಾರಿ ವಹಿಸಿದ್ದರು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಪತ್ರಕರ್ತ ಕವಿ ರೇಮಂಡ್ ಡಿಕೂನ ತಾಕೊಡೆ ವಹಿಸಿದ್ದರು. ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಾ. ವೀ.ಕೃಷ್ಣದಾಸ್ ಕಾರ್ಯಕ್ರಮ ಸಂಯೋಜಿಸಿ ನಿರೂಪಿಸಿದರು.

ಕವಿಗೋಷ್ಠಿಯನ್ನು ಜನಪ್ರಿಯ ಕವಿ ರಘು ಇಡ್ಕಿದು ಉದ್ಘಾಟಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಸಾರಾ ಅಬೂಬಕ್ಕರ್ ಅವರ ಭಾವಚಿತ್ರಕ್ಕೆ ಗಣ್ಯರಿಂದ ಮತ್ತು ಕವಿಗಳಿಂದ ಪುಷ್ಪಾರ್ಚನೆ ನಡೆಯಿತು.

ಕವಿಗೋಷ್ಠಿಯಲ್ಲಿ ಬದ್ರುದ್ದೀನ್ ಕೂಳೂರು, ಅರುಣಾ ನಾಗರಾಜ್,ಸೌಮ್ಯ ಆರ್ ಶೆಟ್ಟಿ,

ನಳಿನಾಕ್ಷಿ ಉದಯರಾಜ್,ಗೋಪಾಲಕೃಷ್ಣ ಶಾಸ್ತ್ರಿ,ಬಿ ಸತ್ಯವತಿ ಭಟ್,ಎಸ್ ಕೆ ಗೋಪಾಲಕೃಷ್ಣ ಭಟ್,ಆಕೃತಿ ಐ ಎಸ್ ಭಟ್,ವ. ಉಮೇಶ್ ಕಾರಂತ್,ಗೀತಾ ಲಕ್ಷ್ಮೀಶ್,ಹೇಮಂತ್ ಕುಮಾರ್ ಡಿ, ಹಿತೇಶ್ ಕುಮಾರ್ ಎ.,ಸುಮಂಗಲಾ ದಿನೇಶ್ ಶೆಟ್ಟಿ ಕುಂಪಲ, ಪರಿಮಳ ಮಹೇಶ್, ಉರ್ಬನ್ ಡಿಸೋಜಾ, ಜೂಲಿಯಟ್ ಫೆರ್ನಾಂಡಿಸ್, ಚಂದ್ರಿಕಾ ಕೈರಂಗಳ,ಡಾ. ಸುರೇಶ್ ನೆಗಳಗುಳಿ ಭಾಗವಹಿಸಿದರು.

Related Posts

Leave a Reply

Your email address will not be published.