ಸಹಕಾರ ರತ್ನ ಡಾ| ಎಂ. ಎನ್. ರಾಜೇಂದ್ರ ಕುಮಾರ್‌ ಅವರಿಗೆ 74ನೇ ಹುಟ್ಟುಹಬ್ಬದ ಸಂಭ್ರಮ

ಮಂಗಳೂರು: ಸಹಕಾರ ರತ್ನ ಡಾ| ಎಂ. ಎನ್. ರಾಜೇಂದ್ರ ಕುಮಾರ್‌ ಅವರ 74ನೇ ಹುಟ್ಟುಹಬ್ಬದ ಪ್ರಯುಕ್ತ ಅಭಿವಂದನೆ ಹಾಗೂ ಸವಲತ್ತುಗಳ ವಿತರಣೆ ಕಾರ್ಯಕ್ರಮ ಶುಕ್ರವಾರ ಬೆಳಗ್ಗೆ ಬ್ಯಾಂಕ್ ಸಭಾಂಗಣದಲ್ಲಿ ಜರುಗಿತು.

ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತಾನ್ನಾಡಿದ ಐಕಳ ಬಾವ ದೇವಿಪ್ರಸಾದ್ ಶೆಟ್ಟಿ ಅವರು, “ನವೋದಯ ಸ್ವಸಹಾಯ ಸಂಘಗಳ ಮೂಲಕ ಗ್ರಾಮೀಣ ಭಾಗದ ಮಹಿಳೆಯರಲ್ಲಿ ಶಕ್ತಿ ತುಂಬಿರುವ ಡಾ. ಎಂ.ಎನ್ ರಾಜೇಂದ್ರ ಕುಮಾರ್ ಅವರು ತಮ್ಮ 74ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು ಸಹಕಾರಿ ಕ್ಷೇತ್ರದಲ್ಲಿನ ಅವರ ಸಾಧನೆ ನಿಜಕ್ಕೂ ಅಭಿನಂದನಾರ್ಹವಾದುದು. ಅವರು ಶತಾಯುಷಿಗಳಾಗಿ ದೇಶ ಕಂಡರಿಯದ ರೀತಿಯಲ್ಲಿ ಸಹಕಾರಿಗಳಿಗೆ ಶಕ್ತಿತುಂಬುವ ಮೂಲಕ ದೇಶದೆಲ್ಲೆಡೆ ಅಭೂತಪೂರ್ವ ಶಕ್ತಿಯಾಗಿ ಬೆಳಗಬೇಕು” ಎಂದು ಶುಭ ಹಾರೈಸಿದರು.


ಒಡಿಯೂರು ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಅವರು ದೀಪ ಪ್ರಜ್ವಲನೆ ಮಾಡಿ ಮಾತಾಡುತ್ತಾ, “ರಾಜೇಂದ್ರ ಕುಮಾರ್ ಅವರು 74ನೇ ವಯಸ್ಸಿನಲ್ಲೂ 47ರ ಯುವಕನಂತೆ ಇದ್ದಾರೆ. ಸಹಕಾರಿ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ರೀತಿ ಇತರರಿಗೆ ಮಾದರಿ. ಅವರಿಗೆ ಶಕ್ತಿ ತುಂಬುವ ಕೆಲಸವನ್ನು ನಾವೆಲ್ಲರೂ ಮಾಡಬೇಕು. ನಾವು ಏನು ಬೇಕಾದರೂ ಮತ್ತೆ ಪಡೆಯಬಹುದು. ಆದರೆ ಶರೀರವನ್ನು ಮತ್ತೆ ಪಡೆಯಲು ಸಾಧ್ಯವಿಲ್ಲ. ಸಾಧನೆ ಮಾಡದೇ ಸತ್ತರೆ ಅವಮಾನ. ಹೀಗಾಗಿ ನಾಯಕತ್ವಕ್ಕೆ ಇನ್ನೊಂದು ಹೆಸರೇ ರಾಜೇಂದ್ರ ಕುಮಾರ್ ಅವರು. ಅವರಿಗೆ ಹುಟ್ಟುಹಬ್ಬದ ಶುಭ ಸಂದರ್ಭದಲ್ಲಿ ನಾವೆಲ್ಲರೂ ಶುಭ ಹಾರೈಸೋಣ” ಎಂದರು.
ಅಭಿವಂದನಾ ಭಾಷಣ ಮಾಡಿದ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಅವರು, “ರಾಜೇಂದ್ರ ಕುಮಾರ್ ಅವರು ಸಾಧಕರ ಸಾಲಿನಲ್ಲಿ ಮೊದಲಿಗರು. ಅವರು ಎಂದಿಗೂ ಅಧ್ಯಕ್ಷ ಎಂಬ ಹಮ್ಮಿನಿಂದ ಮೆರೆಯಲಿಲ್ಲ. ಎಲ್ಲರೊಂದಿಗೆ ಬೆರೆತು ಸರಳತೆಯ ಪ್ರತೀಕವಾದವರು. ಸಮರ್ಥ ನಾಯಕತ್ವಕ್ಕೆ ಮಾದರಿಯಾಗಿ ತನ್ನ ಸಾಧನೆಯೊಂದಿಗೆ ಜನಪ್ರೇಮವನ್ನು ಹೊಂದಿರುವ ರಾಜೇಂದ್ರ ಕುಮಾರ್ ಅವರಿಗೆ ಹುಟ್ಟುಹಬ್ಬದ ಸಂದರ್ಭದಲ್ಲಿ ಭಗವಂತ ಅರೋಗ್ಯ ಭಾಗ್ಯ ಕೊಡಲಿ” ಎಂದು ಶುಭ ಹಾರೈಸಿದರು.

ಬಳಿಕ ಮಾತಾಡಿದ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಆವರು, “ನಾವು ಎಲ್ಲೋ ಹುಟ್ಟಿ ಎಲ್ಲೋ ದುಡಿದು ಇನ್ನೆಲ್ಲೋ ಬದುಕು ಕಟ್ಟಿಕೊಳ್ಳುತ್ತೇವೆ. ಆದರೆ ರಾಜೇಂದ್ರ ಕುಮಾರ್ ಅವರು ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿ ಮಹಾರಾಷ್ಟ್ರದಲ್ಲಿ ದುಡಿದು ಬಳಿಕ ಊರಿಗೆ ಬಂದು ಇಲ್ಲಿನ ಸಹಕಾರಿ ಕ್ಷೇತ್ರದಲ್ಲಿ ಸುಧಾರಣೆ ತಂದು ಜನರ ನಾಯಕನಾಗಿ ಬೆಳೆದವರು. ಸಹಕಾರಿ ರಂಗದಲ್ಲಿ ಜಿಲ್ಲೆ, ರಾಜ್ಯ, ದೇಶದುದ್ದಕ್ಕೂ ಅಹರ್ನಿಶಿ ದುಡಿದು ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರಲ್ಲಿ ಆರ್ಥಿಕ ಶಕ್ತಿ ತುಂಬಿದವರು. ರಾಜಕೀಯ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶವಿದ್ದರೂ ಅತ್ತ ಹೋಗದೆ ಜನರ ಪರವಾಗಿ ದುಡಿದು ಯಶಸ್ಸು ಕಂಡವರು” ಎಂದರು.

ವೇದಿಕೆಯಲ್ಲಿ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರನ್ನು ಮೈಸೂರು ಪೇಟ ತೊಡಿಸಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ 74 ಮಂದಿಗೆ ಹೊಲಿಗೆ ಯಂತ್ರ, ಪರಿಹಾರ ಧನ ಸಹಿತ ವಿವಿಧ ಸವಲತ್ತುಗಳನ್ನು ರಾಜೇಂದ್ರ ಕುಮಾರ್ ಅವರು ವಿತರಿಸಿದರು.

ಅಭಿವಂದನೆ ಸ್ವೀಕರಿಸಿ ಮಾತಾಡಿದ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು, “ಆ ಜಾತಿ ಈ ಜಾತಿ ಎನ್ನುವುದು ಮುಖ್ಯವಲ್ಲ, ಮಾನವ ಜಾತಿ ಮುಖ್ಯ. ನಾವು ಬದುಕುವುದು ಮುಖ್ಯವಲ್ಲ. ಸಮಾಜದ ದುರ್ಬಲರ ಸಂಕಷ್ಟಗಳಿಗೆ ನೆರವಾಗಿ ಅವರನ್ನೂ ಬದುಕಿಸುವುದು ಮುಖ್ಯ. ಅವರ ಆಶೀರ್ವಾದವೇ ನನಗೆ ಶ್ರೀರಕ್ಷೆ. ಮಹಿಳಾ ಶಕ್ತಿಯ ಮುಂದೆ ಯಾವ ಶಕ್ತಿಯೂ ಇಲ್ಲ ಎನ್ನುವುದನ್ನು ಸಹಕಾರಿ ಕ್ಷೇತ್ರದಿಂದ ನಾನು ಕಲಿತಿದ್ದೇನೆ. ಮಹಿಳೆಯರು ಸ್ವಾವಲಂಬಿಗಳಾಗಬೇಕು ಆಗಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ. ನನ್ನನ್ನು ಬೆಳೆಸಿದ್ದೇ ಈ ಸಮಾಜ. ಹೀಗಾಗಿ ಸಮಾಜಕ್ಕೆ ನನ್ನಿಂದ ಏನಾದರೂ ಕೊಡಬೇಕು ಎಂಬ ತುಡಿತ ಸದಾಕಾಲ ನನ್ನಲ್ಲಿ ಜಾಗೃತವಾಗಿರುತ್ತೆ. ನಾನು ನನ್ನದು ಎನ್ನದೆ ನಾನು ನಿಮ್ಮವನು ಎಂದುಕೊಂಡಾಗ ನಮ್ಮ ಬದುಕು ಸಾರ್ಥಕವಾಗುತ್ತದೆ” ಎಂದರು.

ವೇದಿಕೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಇದರ ಅಧ್ಯಕ್ಷ ಡಾ| ಎಂ. ಎನ್. ರಾಜೇಂದ್ರ ಕುಮಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ರವಿಕುಮಾರ್ ಎಂ. ಆರ್., ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮಾಜಿ ಸಚಿವ ಅಭಯಚಂದ್ರ ಜೈನ್, ಅದಾನಿ ಸಂಸ್ಥೆಯ ದಕ್ಷಿಣ ಭಾರತದ ಅಧಿಕಾರಿ ಕಿಶೋರ್ ಆಳ್ವ, ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು, ಪ್ರಕಾಶ್ ಪಿ. ಎಸ್., ಅಭಿವಂದನಾ ಸಮಿತಿ ಕಾರ್ಯಾಧ್ಯಕ್ಷ ಶಶಿಕುಮಾರ್ ರೈ ಬಾಲ್ಗೊಟ್ಟು, ಪ್ರಧಾನ ಕಾರ್ಯದರ್ಶಿ ಭಾಸ್ಕರ ಎಸ್. ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು. ನಿತೀಶ್ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು.

Related Posts

Leave a Reply

Your email address will not be published.