ಎಸ್. ಡಿ. ಎಂ ಕಾಲೇಜಿನಲ್ಲಿ ರಾಜ್ಯ ಮಟ್ಟದ ಮಾಧ್ಯಮ ಹಬ್ಬ
ಉಜಿರೆ: ಜೀವನದಲ್ಲಿ ಅವಕಾಶಗಳು ಎಲ್ಲರನ್ನೂ ಕೈಬೀಸಿ ಕರೆಯುವುದಿಲ್ಲ. ಸಿಕ್ಕ ಅವಕಾಶಗಳನ್ನು ಕಳೆದುಕೊಳ್ಳದೆ ಉತ್ತಮ ರೀತಿಯಲ್ಲಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಟ್ರಸ್ಟಿ ವಿವೇಕ್ ಆಳ್ವಾ ಹೇಳಿದರು.ಉಜಿರೆಯ ಬಿ.ಎನ್.ವೈ.ಎಸ್ ಮೆಡಿಕಲ್ ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ಬಿ. ವೋಕ್ ಡಿಜಿಟಲ್ ಮೀಡಿಯಾ ಮತ್ತು ಫಿಲ್ಮ್ ಮೇಕಿಂಗ್ ವಿಭಾಗದ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ‘ಬಿ- ವೋಕ್ ಅಪೇಕ್ಸ್ – 2022’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಎಲ್ಲಾ ಕ್ಷೇತ್ರದಲ್ಲಿಯೂ ತುಂಬಾ ಕ್ರಿಯಾಶೀಲತೆಯಿಂದ ತೊಡಗಿಕೊಳ್ಳಬೇಕು. ನಮ್ಮನ್ನು ನಾವು ಕೇವಲ ಒಂದು ಕ್ಷೇತ್ರಕ್ಕೆ ಮಾತ್ರ ಸೀಮಿತಗೊಳಿಸಬಾರದು. ಹೊರಜಗತ್ತಿನಲ್ಲಿ ಆಗುತ್ತಿರುವ ನಿರಂತರ ಬದಲಾವಣೆಯ ಅರಿವು ವಿದ್ಯಾರ್ಥಿಗಳು ಹೊಂದಿರುವ ಅವಶ್ಯಕತೆ ಇದೆ ಎಂದು ಹೇಳಿದರು. ಇಂದಿನ ದಿನಮಾನಗಳಲ್ಲಿ ಕಾಲೇಜುಗಳಲ್ಲಿ ನಡೆಯುವ ಹಲವಾರು ಕಾರ್ಯಕ್ರಮಗಳು ಕೇವಲ ಮನೋರಂಜನೆಗೆ ಮಾತ್ರ ಸೀಮಿತವಾಗಿದೆ. ಹೀಗಾಗಿ ಕಾರ್ಯಕ್ರಮಗಳು ಕೇವಲ ಮನೋರಂಜನೆಗೆ ಮಾತ್ರ ಸೀಮಿತವಾಗದೆ, ಅಂತಿಮವಾಗಿ ಆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯ ತನ್ನನ್ನು ಹೇಗೆ ತೊಡಗಿಸಿಕೊಂಡ ಮತ್ತು ಏನನ್ನು ಕಲಿತ ಎಂಬುವುದು ಮುಖ್ಯವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಎಸ್. ಡಿ. ಎಂ ಶಿಕ್ಷಣ ಸಂಸ್ಥೆಗಳ ಮಾಜಿ ಕಾರ್ಯದರ್ಶಿ ದಿ. ಯಶೋವರ್ಮರ ಪುತ್ರ ಪೂರನ್ ವರ್ಮ ಮಾತನಾಡಿ ಶುಭ ಕಾರ್ಯಕ್ರಮಕ್ಕೆ ಹಾರಿಸಿದರು. ದೇಶದಲ್ಲಿ ಇಂದು ಯುವಸಮೂಹದ ಸಂಖ್ಯೆ ಹೆಚ್ಚಿದೆ. ಅವರಿಗೆ ಉತ್ತಮ ಕೌಶಲ್ಯದ ಜೊತೆ ಉತ್ತಮ ಮೌಲ್ಯಯುತವಾದ ಶಿಕ್ಷಣ ಸಿಗಬೇಕಾಗಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತು ತುಂಬಾ ವೇಗವಾಗಿ ಬೆಳೆಯುತ್ತಿರುವ ಕಾರಣ ವಿದ್ಯಾರ್ಥಿಗಳು ಆ ವೇಗಕ್ಕೆ ಹೊಂದಿಕೊಂಡು ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ನೈಜಶಕ್ತಿಯ ಅರಿವಾದರೆ ಸುಲಭವಾಗಿ ಸಾಧನೆ ಮಾಡಬಹುದು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್. ಡಿ. ಎಂ ಶಿಕ್ಷಣ ಸಂಸ್ಥೆಗಳ ರಿಜಿಸ್ಟ್ರಾರ್ ಡಾ. ಬಿ. ಪಿ ಸಂಪತ್ ಕುಮಾರ್ ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣದ ಜೊತೆಗೆ ಸೃಜನಶೀಲತೆಯನ್ನು ಹೊಂದುವ ಅಗತ್ಯವಿದೆ. ಪ್ರತಿಯೊಬ್ಬರಲ್ಲಿಯೂ ಒಂದು ಸಾಮಥ್ರ್ಯವಿದೆ, ಆದರೆ ಅದನ್ನು ವಿಭಿನ್ನವಾಗಿ ಯೋಚಿಸಿ ಕಾರ್ಯರೂಪಕ್ಕೆ ತಂದವರು ಯಶಸ್ಸು ಪಡೆಯುತ್ತಾರೆ. ಒಳ್ಳೆಯ ಗುಣನಡತೆಗಳು ಮತ್ತು ವರ್ತನೆಗಳು ಉತ್ತಮ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ್ ಹೆಗ್ಡೆ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ತೃತೀಯ ಬಿ. ವೋಕ್ ಡಿಜಿಟಲ್ ಮೀಡಿಯಾ ಮತ್ತು ಫಿಲ್ಮ್ ಮೇಕಿಂಗ್ ವಿಭಾಗದ ವಿದ್ಯಾರ್ಥಿ ನಂದನ್ ನಿರ್ದೇಶನದ ‘ತಂದೆ ನೀವು – ತಾಯಿ ನೀವು’ ಆಲ್ಬಮ್ ಸಾಂಗ್ ತಂಡದ ಸದಸ್ಯರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಬಿ. ವೋಕ್ ಡಿಜಿಟಲ್ ಮೀಡಿಯಾ ವಿಭಾಗದ ಉಪನ್ಯಾಸಕಿ ಮತ್ತು ಕಾರ್ಯಕ್ರಮ ಸಂಯೋಜನಕಿ ಅಶ್ವಿನಿ ಜೈನ್, ವಿದ್ಯಾರ್ಥಿ ಸಂಯೋಜಕ ಪ್ರತೀಶ್, ಹಿರಿಯ ವಿದ್ಯಾರ್ಥಿ ಕೆಯೂರ್ ವರ್ಮಾ, ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಪ್ರಸಾದ್ ಮತ್ತು ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬಿ. ವೊಕ್ ವಿಭಾಗದ ಸಂಯೋಜಕ ಸುವೀರ್ ಜೈನ್ ಪ್ರಾಸ್ತಾವಿಕ ಮಾತುಗಳನ್ನನಾಡಿ, ಸ್ವಾಗತಿಸಿದರು. ಬಿ. ವೋಕ್ ಡಿಜಿಟಲ್ ಮೀಡಿಯಾದ ಮುಖ್ಯಸ್ಥ ಮಾಧವ ಹೊಳ್ಳ ವಂದಿಸಿದರು. ಬಿ. ವೋಕ್ ಡಿಜಿಟಲ್ ಮೀಡಿಯಾ ವಿಭಾಗದ ಉಪನ್ಯಾಸಕ ಸ್ಮಿತೇಶ್ ಬಾರ್ಯ ಕಾರ್ಯಕ್ರಮ ನಿರೂಪಿದರು.