ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ : ಅತಿರುದ್ರ ಮಹಾಯಾಗ ದಿನ 2

ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 22, 2023 ರಂದು ಶುಭಾರಂಭಗೊಂಡ ಅತಿರುದ್ರ ಮಹಾಯಾಗದ, ಎರಡನೇ ದಿನ ಫೆಬ್ರವರಿ 23, 2023 ರ ಗುರುವಾರ ಬೆಳಗ್ಗೆ ಅತಿರುದ್ರ ಯಾಗಮಂಟಪದಲ್ಲಿ ಋತ್ವಿಜರಿಂದ ಮಹಾನ್ಯಾಸಪೂರ್ವಕ ಶ್ರೀ ರುದ್ರ ಪುರಶ್ಚರಣ, ಶ್ರೀ ನಾಗದೇವರ ಸನ್ನಿಧಿಯಲ್ಲಿ ಆಶ್ಲೇಷ ಬಲಿ, ತಿಲಹೋಮ, ಪವಮಾನ ಹೋಮ, ಕೂಷ್ಮಂಡ ಹೋಮ, ನವಕಪ್ರಧಾನ ಹೋಮಪುರಸ್ಸರ ನವಕಲಶ ಅಭಿಷೇಕ, ವಟು ಆರಾಧನೆ, ಪ್ರಸನ್ನಪೂಜೆ, ಶ್ರೀ ಕ್ಷೇತ್ರಪಾಲ ಸನ್ನಿಧಿಯಲ್ಲಿ ಏಕ ಕಲಶಾಭಿಷೇಕ ಮತ್ತು ಸಾಯಂಕಾಲ ಶ್ರೀ ರುದ್ರಕ್ರಮಪಾಠ, ಮಹಾಪೂಜೆ, ಅಷ್ಟಾವಧಾನ ಸೇವೆ ನೆರವೇರಿತು. ಮಧ್ಯಾಹ್ನ ಸ್ಥಳೀಯ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಎರಡನೇ ದಿನದ ಅತಿರುದ್ರ ಮಹಾಯಾಗಕ್ಕೆ ಸಹಸ್ರಾರು ಭಕ್ತಾದಿಗಳು ಆಗಮಿಸಿ, ಹೊರೆಕಾಣಿಕೆಯನ್ನು ನೀಡಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾದರು. ಮಧ್ಯಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ಭಕ್ತಾಭಿಮಾನಿಗಳು ಪ್ರಸಾದವನ್ನು ಸ್ವೀಕರಿಸಿದರು.

ಸಂಜೆ ನಡೆದ ಅತಿರುದ್ರ ಮಹಾಯಾಗದ ಎರಡನೇ ದಿನದ ಸಭಾಕಾರ್ಯಕ್ರಮವನ್ನು ಕೃಷ್ಣಪ್ಪ ಸಾಮಂತ ಸ್ಮಾರಕ ಸರಕಾರಿ ಮಾದರಿ ಹಿರಿಯ ಪ್ರಾರ್ಥಮಿಕ ಶಾಲೆಯ ಸಂಸ್ಥಾಪಕರಾದ ಶ್ರೀಧರ್ ಕೆ. ಸಾಮಂತ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಅತಿರುದ್ರ ಮಹಾಯಾಗ ಸಮಿತಿಯ ಅಧ್ಯಕ್ಷರಾದ ಶಾಸಕ ರಘುಪತಿ ಭಟ್, ಬೆಂಗಳೂರಿನ ಬಾಲ ವಾಗ್ಮಿ ಕು. ಹಾರಿಕಾ ಮಂಜುನಾಥ್, ಉಡುಪಿಯ ಶಿವಾನಿ ಡೈಗ್ನೋಸ್ಟಿಕ್ ಸೆಂಟರ್ ನ ಮಾಲೀಕರಾದ ಮತ್ತು ವಿಜ್ಞಾನಿಗಳಾದ ಡಾ. ಶಿವಾನಂದ ನಾಯಕ್, ಉಡುಪಿಯ ಸ್ವದೇಶಿ ಔಷಧ ಭಂಡಾರ ಇದರ ಉದ್ಯಮಿಯಾದ ಭರತ್ ಪ್ರಭು, ಉಡುಪಿ ಜಿಲ್ಲಾ ಕುಡಾಳ್ ದೇಶಸ್ಥ ಆದ್ಯಗೌಡ್ ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ರಾಧಾಕೃಷ್ಣ ಸಾಮಂತ್, ಶ್ರೀ ಉಮಾಮಹೇಶ್ವರ ದೇವಸ್ಥಾನದ ಉಪಾಧ್ಯಕ್ಷರಾದ ಅಶೋಕ್ ಪ್ರಭು, ದೇವಸ್ಥಾನದ ಶಾಶ್ವತ ಟ್ರಸ್ಟಿ ಯಾದ ದಿನೇಶ್ ಸಾಮಂತ್ ಉಡುಪಿಯ ಕೂಟ ಮಹಾಜಗತ್ತಿನ ಅಧ್ಯಕ್ಷರಾದ ಡಾ. ಎ. ಗಣೇಶ್, ಅತಿರುದ್ರ ಮಹಾಯಾಗದ ಸಂಚಾಲಕರಾದ ಡಾ. ನಾರಾಯಣ ಶೆಣೈ, ಅತಿರುದ್ರ ಮಹಾಯಾಗದ ಉಗ್ರಣ ಸಮಿತಿಯ ಸಂಚಾಲಕರಾದ ಪ್ರಕಾಶ್ ಪ್ರಭು, ಮಹಾಯಾಗದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ ಕಾರ್ಯಕರ್ತರ ಸಂಚಾಲಕರಾದ ಮಹಿಳೆ ಕಾರ್ಯಕರ್ತೆ ಡಾ. ಆಶಾ ಪಾಟೀಲ್, ದೇವಸ್ಥಾನದ ಮೊಕ್ತೇಸರಾದ ಸುಭಾಕರ್ ಸಾಮಂತ್ ಮತ್ತು ದಿನೇಶ್ ಪ್ರಭು ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಶ್ರೀ ಉಮಾಮಹೇಶ್ವರ ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರಾದ ಮಹೇಶ್ ಠಾಕೂರ್ ಎಲ್ಲರನ್ನು ಸ್ವಾಗತಿಸಿದರು. ನಂತರ ಬೆಂಗಳೂರಿನ ಬಾಲ ವಾಗ್ಮಿ ಕು. ಹಾರಿಕಾ ಮಂಜುನಾಥ್ ಅವರಿಂದ ಉಪನ್ಯಾಸ ಜರುಗಿತು. ಕು. ಹಾರಿಕಾ ಮಂಜುನಾಥ್ ಅವರು ತಮ್ಮ ಉಪನ್ಯಾಸದಲ್ಲಿ ಗೋಮಾತೆಯ ಮಹಿಮೆಯನ್ನು ಸಾರಿದರು. ನಂತರ ಪರ್ಕಳದ ಸರಿಗಮ ಭಾರತಿ ಸಂಗೀತ ವಿದ್ಯಾಲಯದ ವಿಧುಷಿ ಉಮಾಶಂಕರಿ ಉದಯಶಂಕರ್ ಮತ್ತು ಬಳಗದವರಿಂದ ಭಕ್ತಿ ಸಂಗೀತ ಮತ್ತು ಹರಿದಾಸರಾದ ಶ್ರೀಮತಿ ಪ್ರತಿಮಾ ಕೋಡೂರು ಮತ್ತು ಬಳಗದವರಿಂದ “ದಕ್ಷ ಯಜ್ಞ” ಹರಿಕಥೆ ನಡೆಯಿತು.


