ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ : ಗೋವು ಆಲಿಂಗನ ಕಾರ್ಯಕ್ರಮ

ಗೋವುಗಳ ಸಂರಕ್ಷಣೆ ಹಾಗೂ ಗೋ ಸಂತತಿ ಉಳಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮಣಿಪಾಲದ ಶಿವಪಾಡಿಯಲ್ಲಿರುವ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 14, 2023 ರ ಮಂಗಳವಾರದಂದು ಗೋವು ಆಲಿಂಗನ ವಿಶೇಷ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಆಂಧ್ರದ ನಲ್ಲೂರು ಜಿಲ್ಲೆಯ ಪುಂಗನೂರು ರಾಜಮನೆತನದವರು ಬೆಳಸಿದ ಪುಂಗನೂರು ತಳಿಯ ಐದು ಹಸುಗಳಿಗೆ ಶಾಸಕ ಕೆ. ರಘುಪತಿ ಭಟ್ ಅವರ ತಾಯಿ ಸರಸ್ವತಿ ಬಾರಿತ್ತಾಯ ಅವರು ಮೇವು ನೀಡಿ ಆಲಿಂಗನ ಮಾಡಿದರು. ತದನಂತರ ದೇವಸ್ಥಾನದ ಅರ್ಚಕ ಕೃಷ್ಣರಾಯ ಪಾಟೀಲ್ ಅವರು ಗೋ ಪೂಜೆ ನೆರವೇರಿಸಿದರು.

ಈ ಸುಸಂದರ್ಭದಲ್ಲಿ ಉಮಾಮಹೇಶ್ವರ ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷ ಮಹೇಶ್ ಠಾಕೂರ್ ಮಾತನಾಡಿ, ಪುಂಗನೂರು ಗೋ ತಳಿಗೆ ವಿಶೇಷವಾದ ಮಹತ್ವವಿದೆ. ತಿರುಪತಿಯಲ್ಲಿ ದೇವರಿಗೆ ಈ ತಳಿಯ ಹಸುಗಳ ಹಾಲಿನ ಅಭಿಷೇಕ ಮಾಡಲಾಗುತ್ತದೆ. ಅತಿರುದ್ರ ಮಹಾಯಾಗದ ಸಂದರ್ಭ ಗೋವುಗಳ ಸಂರಕ್ಷಣೆ ಮತ್ತು ಜಾಗೃತಿಯ ಕುರಿತು ಅರಿವು ಮೂಡಿಸುವ ಕಾರ್ಯವೂ ಆಗಲಿದೆ ಎಂದರು. ಅತಿರುದ್ರ ಮಹಾಯಾಗ ಸಮಿತಿಯ ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ ಮಾತನಾಡಿ, ದೇಶಿಯ ಗೋ ತಳಿಗಳು ವೈಜ್ಞಾನಿಕವಾಗಿ ಆರೋಗ್ಯ ಹಾಗೂ ಪರಿಸರಕ್ಕೂ ಪೂರಕವಾಗಿವೆ. ದೇಶಿಯ ಗೋ ತಳಿಗಳನ್ನು ಉಳಿಸುವ ನಿಟ್ಟಿನಲ್ಲಿ ದೊಡ್ಡಮಟ್ಟದ ಆಂದೋಲನ ನಡೆಯಬೇಕಾಗಿದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಸಮಿತಿ ಕಾರ್ಯದರ್ಶಿ ರತ್ನಾಕರ ಇಂದ್ರಾಳಿ, ದೇಗುಲದ ಮೊಕ್ತೇಸರರಾದ ಶುಭಕರ ಸಾಮಂತ್, ದಿನೇಶ್ ಪ್ರಭು, ಕಾರ್ಯದರ್ಶಿ ಸುರೇಶ್ ಶ್ಯಾನುಭಾಗ್, ಪ್ರಮುಖರಾದ ರಮಾನಂದ ಸಾಮಂತ್, ಶಿಲ್ಪಿ ರಘುಪತಿ ಭಟ್, ಅಶ್ವಿನಿ ಮಹೇಶ್ ಠಾಕೂರ್ ಉಪಸ್ಥಿತರಿದ್ದರು. ಪುಂಗನೂರು ತಳಿಯ 5 ಹಸುಗಳು ಅತಿರುದ್ರ ಮಹಾಯಾಗದ ಪೂರ್ಣಾಹುತಿಯವರೆಗೂ ದೇವಸ್ಥಾನದ ವಠಾರದಲ್ಲೇ ಇರಲಿದ್ದು, ಸಾರ್ವಜನಿಕರು ಗೋವುಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮತ್ತು ಆಲಿಂಗನಕ್ಕೆ ಅವಕಾಶವಿದೆ ಎಂದು ಟ್ರಸ್ಟ್ ಅಧ್ಯಕ್ಷ ಮಹೇಶ್ ಠಾಕೂರ್ ತಿಳಿಸಿದರು