ಮನಾಮಾ: ಬದುಕನ್ನು ಕಟ್ಟಿಕೊಳ್ಳಲು, ಕನಸುಗಳನ್ನು ನನಸಾಗಿಸಿಕೊಳ್ಳಲು ಹಾಗೂ ಭವಿಷ್ಯಕ್ಕೆ ಹೊಸ ದಿಕ್ಕು ಕಂಡುಕೊಳ್ಳಲು ಅವಕಾಶ ನೀಡಿದ ಕರ್ಮಭೂಮಿ ಬಹರೈನ್‌ಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ‘Tribute to Bahrain’ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಬಹರೈನ್ ಬಿಲ್ಲವಾಸ್ ಹಾಗೂ ಶ್ರೀ ನಾರಾಯಣ ಗುರು ಕಲ್ಚರಲ್ ಅಸೋಸಿಯೇಷನ್ ವತಿಯಿಂದ ಶ್ರೀ ನಾರಾಯಣ ಗುರು ಜಯಂತಿ ಅಂಗವಾಗಿ ಆಯೋಜಿಸಲಾಗಿರುವ ಈ ಕಾರ್ಯಕ್ರಮವು ಅಕ್ಟೋಬರ್ 9ರಂದು ಸಂಜೆ 6 ಗಂಟೆಗೆ ಸಗಯ್ಯದಲ್ಲಿರುವ ಬಹರೈನ್ ಕೇರಳೀಯ ಸಮಾಜದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶ್ರೀ ವಿಶುದ್ಧಾನಂದ ಸ್ವಾಮೀಜಿಯವರು ಉದ್ಘಾಟಿಸಲಿದ್ದಾರೆ. ಅವರ ಸಾನ್ನಿಧ್ಯ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಲಿದೆ.

ಬಹರೈನ್ ಕೇವಲ ಉದ್ಯೋಗ ಹಾಗೂ ಬದುಕಿನ ಅವಕಾಶಗಳನ್ನು ನೀಡಿದ ನೆಲವಲ್ಲ; ಅನೇಕ ಭಾರತೀಯರ ಪಾಲಿಗೆ ಇದು ಎರಡನೇ ಮನೆಯಂತಾಗಿದೆ. ತಮ್ಮ ಬದುಕಿನ ಮಹತ್ವದ ವರ್ಷಗಳನ್ನು ಈ ನೆಲದಲ್ಲಿ ಕಳೆದಿರುವ ಅನಿವಾಸಿ ಭಾರತೀಯರು, ಈ ನಾಡು ನೀಡಿದ ಅವಕಾಶಗಳು, ಸುರಕ್ಷತೆ ಮತ್ತು ಆತ್ಮೀಯತೆಗೆ ಕೃತಜ್ಞತೆ ಸಲ್ಲಿಸುವ ಸಂಕೇತವಾಗಿ ‘Tribute to Bahrain’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ನಾಡಿನ ಜನಪ್ರಿಯ ಕಲಾವಿದರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ ಮತ್ತು ಮನರಂಜನೆಯ ವಿಶೇಷ ಪ್ರಸ್ತುತಿಗಳು ನಡೆಯಲಿವೆ.

ಕಾರ್ಯಕ್ರಮಕ್ಕೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ಬಿಲ್ಲವ ಸಮುದಾಯದ ಹಿರಿಯ ನಾಯಕ ಶ್ರೀ ಬಿ. ಕೆ. ಹರಿಪ್ರಸಾದ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಪ್ರವೇಶ ಸಂಪೂರ್ಣ ಉಚಿತವಾಗಿದ್ದು, ಸಾರ್ವಜನಿಕರು ಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ. ಸಮಯಕ್ಕೆ ಸರಿಯಾಗಿ ಆಗಮಿಸುವವರಿಗೆ Early Bird ಬಹುಮಾನ ಗೆಲ್ಲುವ ಅವಕಾಶವೂ ಇರಲಿದೆ.
‘Tribute to Bahrain’ ಕೇವಲ ಒಂದು ಸಾಂಸ್ಕೃತಿಕ ಕಾರ್ಯಕ್ರಮವಲ್ಲ. ನಮ್ಮ ಬದುಕಿಗೆ ದಾರಿ ತೋರಿದ, ಸಾವಿರಾರು ಕುಟುಂಬಗಳ ಕನಸುಗಳಿಗೆ ರೆಕ್ಕೆ ನೀಡಿದ ಕರ್ಮಭೂಮಿ ಬಹರೈನ್‌ಗೆ ಭಾರತೀಯ ಸಮುದಾಯದ ಪರವಾಗಿ ಸಲ್ಲಿಸುವ ಪ್ರೀತಿ, ಗೌರವ ಮತ್ತು ಕೃತಜ್ಞತೆಯ ಹೃದಯಸ್ಪರ್ಶಿ ನಮನವಾಗಿದೆ.
ಕಾರ್ಯಕ್ರಮದ ವಿವರ
ದಿನಾಂಕ: ಅಕ್ಟೋಬರ್ 9
ಸಮಯ: ಸಂಜೆ 6 ಗಂಟೆ
ಸ್ಥಳ: ಬಹರೈನ್ ಕೇರಳೀಯ ಸಮಾಜ, ಸಗಯ್ಯ, ಬಹರೈನ್
ಪ್ರವೇಶ: ಉಚಿತ


