HomeFresh Newsಕ್ರೀಡೆ ಕೇವಲ ಆಟವಲ್ಲ, ಬದುಕಿನ ಪಾಠ: ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ

ಕ್ರೀಡೆ ಕೇವಲ ಆಟವಲ್ಲ, ಬದುಕಿನ ಪಾಠ: ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ

ಮಂಗಳೂರು: ಜೀವನದಲ್ಲಿ ಗೆಲುವು ಎಷ್ಟು ಮುಖ್ಯವೋ, ಸೋತಾಗ ಧೃತಿಗೆಡದೆ ಮತ್ತೆ ಎದ್ದು ಮುನ್ನಡೆಯುವ ಮನೋಭಾವವೂ ಅಷ್ಟೇ ಮುಖ್ಯ. ಕ್ರೀಡೆ ನಮಗೆ ಸೋಲನ್ನು ಸ್ವೀಕರಿಸುವುದರ ಜೊತೆಗೆ ಸವಾಲುಗಳನ್ನು ಧೈರ್ಯದಿಂದ ಎದುರಿಸುವ ಜೀವನಪಾಠವನ್ನು ಕಲಿಸುತ್ತದೆ ಎಂದು ವಿಶ್ವವಿದ್ಯಾನಿಲಯ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ನಿಕಟಪೂರ್ವ ಅಧ್ಯಕ್ಷ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ ಹೇಳಿದರು.

ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ, ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ ಹಾಗೂ ಹಳೆ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ ಕಾಲೇಜು ಪುರುಷರ ವಾಲಿಬಾಲ್ ಮತ್ತು ಮಹಿಳೆಯರ ಥ್ರೋಬಾಲ್ (ಮಂಗಳೂರು ವಲಯ) ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

“ಆಟ ನಮಗೆ ಬೀಳುವುದನ್ನು ಮಾತ್ರವಲ್ಲ, ಬಿದ್ದ ಮೇಲೆ ಮತ್ತೆ ಎದ್ದು ಓಡುವುದನ್ನೂ ಕಲಿಸುತ್ತದೆ. ಸವಾಲುಗಳನ್ನು ಧೈರ್ಯದಿಂದ ಎದುರಿಸುವುದು, ಸೋಲಿನ ನಿರಾಸೆಯಿಂದ ಬೇಗನೆ ಚೇತರಿಸಿಕೊಳ್ಳುವುದು, ಶಿಸ್ತು ಮತ್ತು ಸಮಯಪಾಲನೆಯನ್ನು ರೂಢಿಸಿಕೊಳ್ಳುವುದು ಸೇರಿದಂತೆ ಬದುಕಿಗೆ ಅಗತ್ಯವಾದ ಅನೇಕ ಮೌಲ್ಯಗಳನ್ನು ಕ್ರೀಡೆ ಬೆಳೆಸುತ್ತದೆ,” ಎಂದು ಅವರು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಜೆರಾಲ್ಡ್ ಸಂತೋಷ್ ಡಿಸೋಜ ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಮತೋಲನದಿಂದ ತೊಡಗಿಸಿಕೊಳ್ಳಬೇಕು. ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೂ ಆದ್ಯತೆ ನೀಡಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯವಂತ ನಾಯಕ್ ಮಾತನಾಡಿ, “ಸೋಲೇ ಗೆಲುವಿನ ಸೋಪಾನ. ಪ್ರತಿ ಹಿನ್ನಡೆಯೂ ನಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುವ ಮೆಟ್ಟಿಲಾಗಬಲ್ಲದು. ಇಂದು ಸೋಲನ್ನು ಅನುಭವಿಸುವ ಕ್ರೀಡಾಪಟುಗಳು ಅದರಿಂದ ನಿರಾಶರಾಗದೆ, ಅದನ್ನೇ ಮುಂದಿನ ಯಶಸ್ಸಿಗೆ ಪ್ರೇರಣೆಯನ್ನಾಗಿ ಮಾಡಿಕೊಳ್ಳಬೇಕು. ಗೆಲುವು ಸಾಧಿಸುವುದಷ್ಟೇ ಕ್ರೀಡೆಯ ಉದ್ದೇಶವಲ್ಲ; ಉದಾತ್ತ ಕ್ರೀಡಾ ಮನೋಭಾವವನ್ನು ಬೆಳೆಸಿಕೊಳ್ಳುವುದೂ ಅಷ್ಟೇ ಮುಖ್ಯ. ಕ್ರೀಡಾ ಸ್ಫೂರ್ತಿಯಿಂದ ಮೈದಾನದಲ್ಲಿ ಕಳೆಯುವ ಪ್ರತಿಕ್ಷಣವನ್ನೂ ಆನಂದಿಸಿ,” ಎಂದು ಕ್ರೀಡಾಪಟುಗಳಿಗೆ ಸಲಹೆ ನೀಡಿದರು.

ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮದಾಸ ಗೌಡ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಕ್ರೀಡೆ ಮಹತ್ವದ ಪಾತ್ರ ವಹಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ದೈಹಿಕ ಸಾಮರ್ಥ್ಯ, ಮಾನಸಿಕ ಸ್ಥೈರ್ಯ, ನಾಯಕತ್ವ ಗುಣ ಹಾಗೂ ತಂಡದೊಂದಿಗೆ ಕಾರ್ಯನಿರ್ವಹಿಸುವ ಕೌಶಲಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಡಿ. ಶ್ರೀನಿವಾಸ್ ನಾಯಕ್, ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಕಾಲೇಜು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಎವರೆಸ್ಟ್ ರೋಡ್ರಿಗಸ್, ವಿಶ್ವವಿದ್ಯಾನಿಲಯ ಕಾಲೇಜಿನ ದೈಹಿಕ ಶಿಕ್ಷಣ ಉಪನಿರ್ದೇಶಕ ಡಾ. ಹರಿದಾಸ್ ಕುಳೂರು, ಸಂಘಟನಾ ಜಂಟಿ ಕಾರ್ಯದರ್ಶಿ ಡಾ. ಸೌಮ್ಯ ಟಿ. ಎನ್. ಸೇರಿದಂತೆ ವಿವಿಧ ವಿಭಾಗಗಳ ಉಪನ್ಯಾಸಕರು, ಕ್ರೀಡಾಪಟುಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Swarna jewellery - 3
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments