ಆದಿವಾಸಿ ಯುವಕನೊಬ್ಬನ ದಾರುಣ ಕತೆ
ಇದು ಶ್ರೀನಿವಾಸ್ ಗೌಡ್ಲು (ಮಲೆಕುಡಿಯ) ಎಂಬ ಆದಿವಾಸಿ ಯುವಕನೊಬ್ಬನ ದಾರುಣ ಕತೆ ಮಾತ್ರ ಅಲ್ಲ. ಆರೋಗ್ಯ ಕ್ಷೇತ್ರ ವ್ಯಾಪಾರೀಕರಣ ಗೊಂಡಿರುವ ಸಂದರ್ಭದಲ್ಲಿ ಬಡವರು, ಆರ್ಥಿಕವಾಗಿ ಸಬಲರಲ್ಲ ಎಲ್ಲರ ವ್ಯಥೆ.
ಶ್ರೀನಿವಾಸ ಗೌಡ್ಲು ಎಂಬ ಆದಿವಾಸಿ ಮಲೆಕುಡಿಯ ಸಮುದಾಯಕ್ಕೆ ಸೇರಿದ ಶೃಂಗೇರಿ ಸಮೀಪದ ಹೊರನಾಡು ನಿವಾಸಿ ತೋಟಗಳಲ್ಲಿ ದುಡಿಯುವ ಕೂಲಿಯಾಳು. 34 ವರ್ಷದ ಇವರು ಕುಟುಂಬದ ಸಂಕಷ್ಟಗಳ ಕಾರಣಕ್ಕಾಗಿ ಇನ್ನೂ ಮದುವೆಯಾಗಿಲ್ಲ.ಮನೆಯಲ್ಲಿ ಕೂಲಿ ಕೆಲಸ ಮಾಡುವ ವೃದ್ದ ತಂದೆ., ಅಂಗವಿಕಲ ಅಣ್ಣ ಹಾಗೂ ತಾಯಿ ಇದ್ದಾರೆ.
ಆಗಸ್ಟ್ ತಿಂಗಳ 11 ರಂದು ಮನೆ ಸಮೀಪ ವಿದ್ಯುತ್ ತಂತಿಗಳಿಗೆ ತಾಗುತ್ತಿದ್ದ ಮರದ ಗೆಲ್ಲುಗಳನ್ನು ಕಡಿಯುವಾಗ ಮರದಿಂದ ಬಿದ್ದು ಸೊಂಟ, ಬೆನ್ನು ಮೂಳೆಗೆ ಗಂಭೀರ ಪೆಟ್ಟು ಬಿದ್ದಿದೆ. ದೊಡ್ಡ ಸರ್ಜರಿ ಅಗತ್ಯ ಬಿದ್ದುದರಿಂದ ಹತ್ತಿರದ ಸರಕಾರಿ ಆಸ್ಪತ್ರೆಗಳು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಓಡಾಡಲು ಕುಟುಂಬದಲ್ಲಿ ಯಾರೂ ಇಲ್ಲದ ಇವರನ್ನು ಕಳೆದ ತಿಂಗಳು ಆಗಸ್ಟ್ 12 ರಂದು ನೆರಕರೆಯವರು ಮಂಗಳೂರಿನ ಸರಕಾರಿ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸೊಂಟ ಮುರಿದು ಎದ್ದು ನಿಲ್ಲಲು ಅಸಾಧ್ಯವಾದ ಇವರನ್ನು ನೆರೆಕರೆಯ ಒಂದಿಬ್ಬರು ಹುಡುಗರು ಅಲ್ಲಿಂದ ಇಲ್ಲಿಯವರಗೆ ಪಾಳಿಯಲ್ಲಿ ನೋಡಿಕೊಳ್ಳುತ್ತಿದ್ದಾರೆ.
ವೆನ್ ಲಾಕ್ ಆಸ್ಪತ್ರೆಯವರು ದೊಡ್ಡ ಸರ್ಜರಿ ಆಗಿರುವುದರಿಂದ ಉಚಿತ ಚಿಕಿತ್ಸೆಗಾಗಿ ಬಿಪಿಎಲ್ ರೇಷನ್ ಕಾರ್ಡ್ ಹಾಜರು ಪಡಿಸಿ, ಇಲ್ಲದಿದ್ದರೆ ಸರ್ಜರಿಗೆ ಬೇಕಾಗುವ ರಾಡು, ಸ್ಕ್ರೂ, ದಾರ, ಔಷಧಿಗಳಿಗಾಗಿ ತಕ್ಷಣಕ್ಕೆ 40 ಸಾವಿರ ರೂಪಾಯಿ ಪಾವತಿಸಿ, ಉಳಿದದ್ದನ್ನು ನಂತರ ಪಾವತಿಸಿ ಅಂದಿದ್ದಾರೆ. ಖಾಲಿ ಜೇಬಿನ ಆದಿವಾಸಿ ಕುಟುಂಬ ಇದರಿಂದ ಕಂಗಾಲಾಗಿದೆ. ಇವರ ದುರದೃಷ್ಟಕ್ಕೆ ಕುಟುಂಬದ ಬಿಪಿಎಲ್ ರೇಷನ್ ಕಾರ್ಡ್ ನಲ್ಲಿ ಯಾವುದೋ ತಾಂತ್ರಿಕ ಕಾರಣಕ್ಕೆ ಶ್ರೀನಿವಾಸ್ ಗೌಡ್ಲು ಹೆಸರು ಅಳಿಸಿ ಹೋಗಿತ್ತು.
ಕೊನೆಗೆ ಪರಿಚಿತರ ಮೂಲಕ ಶೃಂಗೇರಿಯ ಸಾಮಾಜಿಕ ಕಾರ್ಯಕರ್ತರಾದ ಮಣಿಶೇಖರ್ ಮಂಗಳೂರಿನ ಡಿವೈಎಫ್ಐ ಕಚೇರಿಯನ್ನು ಸಂಪರ್ಕಿಸಿದರು. ಅಷ್ಟೊತ್ತಿಗೆ ಶ್ರೀನಿವಾಸ್ ವೆನ್ ಲಾಕ್ ಆಸ್ಪತ್ರೆಯಲ್ಲಿ ಕೈಕಾಲು ಅಲುಗಾಡಿಸದೆ ಅಗಾಂತ ಮಲಗಿ ಐದಾರು ದಿನ ಕಳೆದು ಹೋಗಿತ್ತು. ಡಿವೈಎಫ್ಐ ಕಾರ್ಯಕರ್ತರು ವೆನ್ ಲಾಕ್ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಬಿಪಿಎಲ್ ಇಲ್ಲದವರಿಗೆ ಆಪರೇಷನ್ ಗೆ ಬೇಕಾದ ಔಷಧಿಗಳನ್ನು ಹೊರಗಡೆಯಿಂದ ತರಿಸಬೇಕಾದ ನಿಯಮಗಳನ್ನು ವಿವರಿಸಿ 40 ಸಾವಿರ ಕಟ್ಟಲೇ ಬೇಕು ಆ ನಂತರ ಯಾವುದೇ ಪಾವತಿ ಇರುವುದಿಲ್ಲ ಎಂಬುದನ್ನು ವಿವರಿಸಿದರು. ಅದರಂತೆ ಬಿಡಿಗಾಸು ಇಲ್ಲದ ಶ್ರೀನಿವಾಸ್ ಗಾಗಿ 40 ಸಾವಿರ ಹೊಂದಿಸಲು ಅವರ ನೆರೆಕರೆಯವರು ಪ್ರಯತ್ನದಲ್ಲಿ ತೊಡಗಿದರು. ಇನ್ನೊಂದೆಡೆ ಕುಟುಂಬದ ಬಿಪಿಎಲ್ ಕಾರ್ಡ್ ನಲ್ಲಿ ಶ್ರೀನಿಚಾಸ್ ಹೆಸರು ಸೇರಿಸುವ ಯತ್ನವೂ ನಡೆಸತೊಡಗಿದರು.
ಕೊನೆಗೂ ಸೆಪ್ಟಂಬರ್ 1 ನೇ ತಾರೀಖಿಗೆ ಬಿಪಿಎಲ್ ರೇಷನ್ ಕಾರ್ಡ್ ಗೆ ಶ್ರೀನಿವಾಸ್ ಹೆಸರು ಸೇರ್ಪಡೆಗೊಂಡಿತು. ಆಯುಷ್ಮಾನ್ ಕಾರ್ಡೂ ರೆಡಿ ಆಯ್ತು. ಇನ್ನು ಉಚಿತವಾಗಿ ಸರ್ಜರಿ ನಡೆಸಿ ಎಂದು ಬಿಪಿಎಲ್ ಕಾರ್ಡ್ ಹಾಜರು ಪಡಿಸಿದರೆ, ಬಿಪಿಎಲ್ ಕಾರ್ಡ್ ನಲ್ಲಿ ಹೊಸತಾಗಿ ಹೆಸರು ಸೇರ್ಪಡೆಗೊಂಡಿರುವುದರಿಂದ ಅದು ಕಂಪ್ಯೂಟರ್ ನಲ್ಲಿ ಸ್ವೀಕಾರಗೊಳ್ಳುತ್ತಿಲ್ಲ ಎಂದು ಆಸ್ಪತ್ರೆಯವರ ವಾದ. 40 ಸಾವಿರ ದುಡ್ಡು ಕಟ್ಟಿ, ಇಲ್ಲವೆ ಮನೆಗೆ ಕರೆದು ಕೊಂಡು ಹೋಗಿ ಎಂಬ ಕಟ್ಟುನಿಟ್ಟಿನ ಸೂಚನೆ ಆಸ್ಪತ್ರೆಯ ವೈದ್ಯರ ಕಡೆಯಿಂದ ಶ್ರೀನಿವಾಸ್ ಜೊತೆಗಿದ್ದವರಿಗೆ ನೀಡಲಾಯಿತು. ಕೊನೆಗೆ ಹೇಗೆ ಹೇಗೊ ದುಡ್ಡು ಹೊಂದಿಸಿದರೂ 20 ದಿನಗಳಿಂದ ಆಸ್ಪತ್ರೆಯ ವಾಟರ್ ಬೆಡ್ ನಲ್ಲಿ ಅಗಾಂತ ಮಲಗಿರುವ ಶ್ರೀನಿವಾಸ್ ನನ್ನು ಈಗ ಮನೆಗೆ ಕರೆದೊಯ್ಯಿರಿ, ಎರಡು ತಿಂಗಳು ಕಳೆದ ಮೇಲೆ ಕರೆದು ಕೊಂಡು ಬನ್ನಿ ಎಂದು ಹೇಳಲಾಯ್ತಂತೆ.
ಮತ್ತೆ ವಿಷಯ ಮಂಗಳೂರಿನ ಡಿವೈಎಫ್ಐ ನವರ ಗಮನಕ್ಕೆ ಬಂದು ವೆನ್ ಲಾಕ್ ಆಸ್ಪತ್ರೆಯ ಅಧೀಕ್ಷಕರ ಜೊತೆ ಮಾತನಾಡಲಾಯ್ತು. ಆ ನಂತರ ಸರ್ಜರಿಗೆ ಬೇಕಾಗುವ ದುಡ್ಡು ತಕ್ಷಣ ಕಟ್ಟುವಂತೆ ಹೇಳಲಾಯ್ತು. ನಂತರ ಒಂದೆರಡು ದಿನಗಳಲ್ಲಿ ಸರ್ಜರಿ ಮಾಡುವುದಾಗಿ ಮಾಹಿತಿ ಬಂದು. (ಇಂದು ದುಡ್ಡು ಕಟ್ಟಲು ಸಿದ್ದತೆಗಳು ನಡೆದಿದೆ)
ಇಷ್ಟೆಲ್ಲಾ ಆಗುವಾಗ ಭರ್ತಿ 23 ದಿನಗಳು ಕಳೆದು ಹೋದವು. ಇನ್ನೆಷ್ಟು ದಿನ ಮುಂದುವರಿಯುತ್ತದೋ ಗೊತ್ತಿಲ್ಲ. ಸೊಂಟ ಮುರಿದು ಯಾರದೋ ಸಹಾಯದಿಂದ ಆಸ್ಪತ್ರೆಯಲ್ಲಿ ಅಲುಗಾಡದ ಸ್ಥಿತಿಯಲ್ಲಿ ಮಲಗಿದ ಆದಿವಾಸಿ ಸಮುದಾಯಕ್ಕೆ ಸೇರಿದ ತೀರಾ ಬಡ ಕುಟುಂಬದ ಶ್ರೀನಿವಾಸ ಎಂಬ ಯುವಕನ ದಾರುಣ ಕತೆ ಇದು. ದುಡ್ಡಿದ್ದವರು ಐಷಾರಾಮಿ ಆಸ್ಪತ್ರೆಗಳ ಡೀಲಕ್ಸ್ ಕೊಠಡಿಗಳಲ್ಲಿ ದಾಖಲಾಗುತ್ತಾರೆ. ಘಟಾನುಘಟಿ ವೈದ್ಯರು ಮದ್ಯರಾತ್ರಿಯಲ್ಲೂ ಧಾವಿಸಿ ಬಂದು ಚಿಕಿತ್ಸೆ ನೀಡುತ್ತಾರೆ. ಅವರ ಕುಟುಂಬಸ್ಥರು ಬಯಸಿದಾಗಲೆಲ್ಲ ರೋಗಿಯ ಆರೋಗ್ಯದ ಅಪ್ಡೇಟ್ ಅವರ ಮುಂದೆ ಹಾಜರಿರುತ್ತದೆ. ಐಷಾರಾಮಿ ಹೊಟೇಲ್ ನ ರೀತಿಯ ವಾತಾವರಣದಲ್ಲಿ ಎಲ್ಲವೂ ನಡೆಯುತ್ತದೆ.
ಬಡವರಾದರೆ, ಆರ್ಥಿಕವಾಗಿ ಸಬಲರಲ್ಲದಿದ್ದರೆ ಶ್ರೀನಿವಾಸ ಮಲೆಕುಡಿಯನಂತೆ ನಿರ್ಗತಿಕನಂತೆ ಸರಕಾರಿ ಆಸ್ಪತ್ರೆಯ ಬೆಡ್ ನಲ್ಲಿ ಮಲಗಬೇಕು. ಸರಿಯಾದ ಮಾಹಿತಿಗಾಗಿ ಪರದಾಡಬೇಕು. ಸರಕಾರಗಳ ಖಾಸಗೀಕರಣ ನೀತಿಗಳಿಂದ ಸರಿಯಾದ ವೈದ್ಯರ ಸಹಿತ ಮೂಲಭೂತ ಸೌಲಭ್ಯಗಳ ದೊಡ್ಡ ಕೊರತೆ ಎದುರಿಸುತ್ತಿರುವ ಸರಕಾರಿ ಆಸ್ಪತ್ರೆಗಳಲ್ಲೂ ಬಿಪಿಎಲ್ ಅಲ್ಲದವರಿಗೆ ಉಚಿತ ಚಿಕಿತ್ಸೆ ರದ್ದುಗೊಂಡಿರುವುದರಿಂದ “ದುಡ್ಡಿಲ್ಲದಿದ್ದರೆ ಚಿಕಿತ್ಸೆಯೂ ಇಲ್ಲ, ಬದುಕುವ ಹಕ್ಕೂ ಇಲ್ಲ” ಎಂಬ ಹೀನಾಯ ಸ್ಥಿತಿ ಜನ ಸಾಮಾನ್ಯರದ್ದು. ಆಸ್ಪತ್ರೆಯ ವೆಚ್ಚಕ್ಕಾಗಿ ಚಂದಾ ಎತ್ತುವ ದೈನೇಸಿ ಸ್ಥಿತಿಯಂತು ಎಂತವರ ಆತ್ಮಗೌರವವನ್ಜೂ ಮೂರು ಕಾಸಿಗೆ ಹರಾಜು ಹಾಕಿ ಬಿಡುತ್ತದೆ.
ಇದು ಆರೋಗ್ಯದ ವ್ಯಾಪಾರೀಕರಣದ ಸಂದರ್ಭದ ಸ್ಥಿತಿ. ಧರ್ಮ, ಜಾತಿ ಅಸ್ಮಿತೆಗಳ ಚರ್ಚೆಯಲ್ಲಿ ಆರೋಗ್ಯ, ಶಿಕ್ಷಣ, ಉದ್ಯೋಗದಂತಹ ಮೂಲಭೂತ ಪ್ರಶ್ನೆಗಳು ಯಾರಿಗೂ ಬೇಡ. ಮಂಗಳೂರಿನಲ್ಲಿ ಎಂಟು ಖಾಸಗಿ ಮೆಡಿಕಲ್ ಕಾಲೇಜುಗಳಿವೆ. ತಲೆ ಎತ್ತಿ ನೋಡಿದಲ್ಲೆಲ್ಲ ಖಾಸಗಿ ಹೈಟೆಕ್ ಆಸ್ಪತ್ರೆಗಳೆಂಬ ವ್ಯಾಪಾರಿ ಕೇಂದ್ರಗಳೇ ಕಾಣುತ್ತವೆ. ಖಾಸಗಿ ಆಸ್ಪತ್ರೆಗಳನ್ನು ಬಲಪಡಿಸಿ, ಜಿಲ್ಲೆಗೊಂದು ಸರಕಾರಿ ಆಸ್ಪತ್ರೆ ಕೊಂಡಿ ಎಂದು ಡಿವೈಎಫ್ಐ ಎಷ್ಟು ಸಲ ಧ್ವನಿ ಎತ್ತಿದರೂ ಧರ್ಮಯುದ್ದದಲ್ಲಿ ಕಳೆದು ಹೋಗಿರುವ ಇಲ್ಲಿನ ಜನರಿಗೆ ಇದು ತಟ್ಟುವುದೇ ಇಲ್ಲ. ವೆನ್ ಲಾಕ್ ಸೇರಿದಂತೆ ಸರಕಾರಿ ಆಸ್ಪತ್ರೆಗಳು ಖಾಸಗಿ ಮೆಡಿಕಲ್ ಕಾಲೇಜು ತಿಮಿಂಗಲಗಳ ಉದರ ಸೇರುತ್ತಿದೆ. ಈಗ ಇನ್ನೊಂದು ಖಾಸಗಿ ಮೆಡಿಕಲ್ ಕಾಲೇಜು ಕರಾವಳಿ ಶಿಕ್ಷಣ ಸಂಸ್ಥೆಗೆ ದೊರಕಿದೆ. ಯಾರಿಗೇಳಣ ನಮ್ಮ ಪ್ರಾಬ್ಲಂ ಇದೆಲ್ಲಾ ಅರ್ಥವಾಗದ ಯಾರಿಗಾಗಿ ನಾವು ಮಾತಾಡೋಣ ಹೇಳಿ ?
ಈಗ ಶ್ರೀನಿವಾಸ ಗೌಡ್ಲು ಎಂಬ ಅದಿವಾಸಿ ಯುವಕನಿಗೆ ಉಚಿತ, ಉತ್ತಮ ಚಿಕಿತ್ಸೆಗಾಗಿ ನಾವೆಲ್ಲ ಧ್ವನಿ ಎತ್ತಬೇಕಿದೆ. ಜೊತೆಗೆ ಆರೋಗ್ಯ/ ಆಸ್ಪತ್ರೆ ಕ್ಷೇತ್ರದ ಸುಧಾರಣೆಗಾಗಿ, ಸರಕಾರಿ ಆಸ್ಪತ್ರೆಗಳಲ್ಲಿ ಎಲ್ಲರಿಗೂ ಉಚಿತ ಚಿಕಿತ್ಸೆಗಾಗಿ ಧ್ಬನಿ ಎತ್ತಬೇಕಿದೆ ಅದಕ್ಕೆ ಇದು ಸಕಾಲ. ಜಿಲ್ಲಗೊಂದು ಸರಕಾರಿ ಮೆಡಿಕಲ್ ಕಾಲೇಜು ದೊರಕಬೇಕು, ವೆನ್ ಲಾಕ್ ಮಲ್ಟಿ ಸ್ಪೆಷಾಲಿಟಿ ಉಚಿತ ಚಿಕಿತ್ಸೆಯ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಬೇಕು. ಆರ್ಥಿಕವಾಗಿ ದುರ್ಬಲರು ಎರಡನೇ ದರ್ಜೆಯ ಪ್ರಜೆಗಳೋ, ಪ್ರಾಣಿಗಳೊ ಅಲ್ಲ. ಅವರಿಗೂ ಸಮಾನ ಹಕ್ಕುಗಳಿವೆ