ತೋಕೂರು : ಜೀವನದಲ್ಲಿ ಉತ್ತಮ ರೀತಿಯಲ್ಲಿ ಬದುಕುವುದೇ ಧರ್ಮ : ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ
ಜೀವನದಲ್ಲಿ ಉತ್ತಮವಾಗಿ ಬದುಕುವುದೇ ಧರ್ಮ. ಪ್ರತಿಯೊಂದು ಜೀವರಾಶಿಗೂ ಬದುಕುವ ಹಕ್ಕು ಇದೆ. ಧರ್ಮ ಮತ್ತು ಸಂಸ್ಕಾರವನ್ನು ಉಳಿಸಿ ಬೆಳೆಸುವ ಕಾರ್ಯ ನಮ್ಮಿಂದ ನಡೆಯಬೇಕು ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಹಳೆಯಂಗಡಿ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಧಾನದ ಅಷ್ಟಬಂಧ ಬ್ರಹ್ಮಕುಂಭಾಭೀಷೇಕದ ಅಂಗವಾಗಿ ಸ್ಕಂದ ಮಂಟಪದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಅವರು ಇಂದಿನ ಯುಗದಲ್ಲಿ ಸಂಸ್ಕಾರವನ್ನು ಮರೆಯುತ್ತಿದ್ದೇವೆ. ಭಾರತೀಯ ಸಂಸ್ಕೃತಿ ನೀರಿನಂತೆ ಪರಿಶುದ್ಧವಾಗಿರುತ್ತದೆ. ಮಕ್ಕಳನ್ನು ದೇವಸ್ಧಾನಕ್ಕೆ ಕರೆದುಕೊಂಡು ಬರುವ ಮೂಲಕ ಅವರಿಗೆ ಭಾರತೀಯ ಸಂಸ್ಕೃತಿ ಮತ್ತು ಜೀವನ ಸಂಸ್ಕಾರದ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದರು.
ವೆ.ಮೂ.ಕೊಲಕಾಡಿ ವಾದಿರಾಜ ಉಪಾಧ್ಯಾಯ ನಾಗಮಂಡಲ-ನಾಗರಾಧನೆ ಬಗ್ಗೆ ಧಾರ್ಮಿಕ ಉಪನ್ಯಾಸ ನೀಡಿದರು. ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹಿಂದೂ ಸಂಘಟನೆಯ ನಾಯಕ ಅರುಣ್ ಕುಮಾರ್ ಪುತ್ತಿಲ ಅವರನ್ನು ಸ್ವಾಮೀಜಿ ಗೌರವಿಸಿದರು. ದೇವಸ್ಧಾನದ ಜೀರ್ಣೋದ್ಧಾರಕ್ಕೆ ಶ್ರಮಿಸಿದ ದಾನಿಗಳನ್ನು ಗೌರವಿಸಲಾಯಿತು.
ಉಡುಪಿ ವಾಸುಕಿ ಶ್ರೀ ಸುಬ್ರಹ್ಮಣ್ಯ ದೇವಸ್ಧಾನದ ಸಗ್ರಿ ಗೋಪಾಲಕೃಷ್ಣ ಸಾಮಗ, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ನ್ಯಾಯವಾದಿ ಶಶಿರಾಜ್ ಕಾವೂರು, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ, ಉದ್ಯಮಿ ರವಿ ದೇವಾಡಿಗ, ಮುಂಬೈ ಕಬಡ್ಡಿ ಕ್ರೀಡಾ ಪಟು ರಿಷಾಂಕ್ ಕೆ ದೇವಾಡಿಗ, ವ್ಯವಸ್ಧಾಪನ ಸಮಿತಿ ಅಧ್ಯಕ್ಷ ಹರಿದಾಸ್ ಭಟ್, ಸಮಿತಿಯ ಸದಸ್ಯರಾದ ಭುವನಾಭಿರಾಮ ಉಡುಪ, ಕಾರ್ಯದರ್ಶಿ ರಾಮಣ್ಣ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು