ಮಳೆಗಾಲದಲ್ಲಿ ಜನರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು-ಶಾಸಕ ಖಾದರ್ ಆದೇಶ

ಉಳ್ಳಾಲ: ಮಳೆಗಾಲದಲ್ಲಿ ಜನರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಅಧಿಕಾರಿಗಳು ತಕ್ಷಣದಿಂದ ಕ್ರಮಕೈಗೊಳ್ಳಬೇಕು, ಉಳ್ಳಾಲ ನಗರಸಭೆಯಾದ್ಯಂತ 8 ಟ್ಯಾಂಕರ್ಗಳ ಮೂಲಕ ಸರಬರಾಜು ಆಗುತ್ತಿರುವ ಕುಡಿಯುವ ನೀರು ಸಮರ್ಪಕವಾಗಿ ಎಲ್ಲರ ಉಪಯೋಗಕ್ಕೆ ಬರಬೇಕು. ಕಡಲ್ಕೊರೆತದಿಂದ ಹಾನಿಗೊಳಗಾದ ಮುಕ್ಕಚ್ಚೇರಿ ಸೀಗ್ರೌಂಡ್ ಮತ್ತು ಉಚ್ಚಿಲ ಸೋಮೇಶ್ವರದಲ್ಲಿ ಅನುದಾನ ಮಂಜೂರುಗೊಳಿಸಿದ ತಕ್ಷಣ ಕಾಮಗಾರಿ ಆರಂಭಿಸಿ ಮುಗಿಸಬೇಕು ಎಂದು ಶಾಸಕ ಯು.ಟಿ ಖಾದರ್ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

ಉಳ್ಳಾಲ ನಗರಸಭೆ ಕಚೇರಿ ಸಭಾಂಗಣದಲ್ಲಿ ನಡೆದ ಮಳೆ ಮುಂಜಾಗ್ರತಾ ಸಭೆ ಹಾಗೂ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ಉಳ್ಳಾಲ ನಗರಸಭೆ ಅತ್ಯುತ್ತಮ ನಗರಸಭೆ ಆಗಿದೆ. ಇಲ್ಲಿ ಉತ್ತಮ ಯೋಜನೆಗಳನ್ನು ಕೊಡುವ ವ್ಯವಸ್ಥೆ ಆಗಿದೆ. ಇನ್ನಷ್ಟು ಪರಿಣಾಮಕಾರಿಯಾಗಿ ನಗರಸಭೆ ವ್ಯಾಪ್ತಿಯಲ್ಲಿ ಯೋಜನೆಗಳನ್ನು ತಲುಪಿಸುವ ಸಲುವಾಗಿ ಅಧಿಕಾರಿಗಳು, ಜನಪ್ರತಿನಿಧಿಗಳು, ಇಂಜಿನಿಯರುಗಳು ಕಾರ್ಯಪ್ರವೃತ್ತರಾಗಬೇಕಿದೆ. ನೀರಿನ ಸಮಸ್ಯೆ ರಾಜ್ಯದುದ್ದಕ್ಕೂ ನಿರ್ಮಾಣವಾಗಿದೆ. ನಗರಮಟ್ಟದಲ್ಲಿ ಬಾವಿಗಳು ಕಡಿಮೆಯಾಗುತ್ತಲೇ ಹೋಗಿದ್ದರಿಂದ ತೀವ್ರ ಸಮಸ್ಯೆ ಉಂಟಾಗುತ್ತಿದೆ. ಸೀಗ್ರೌಂಡ್ ಮನಗೆಳಿಗೆ ಕಡಲ್ಕೊರೆತದಿಂದ ಹಾನಿಯಾಗುತ್ತಿದೆ, ಆ ಭಾಗದಲ್ಲಿ ತಕ್ಷಣ ಅನುದಾನ ಪೂರೈಸಲಾಗುವುದು. ಕಾಮಗಾರಿಯನ್ನು ತುರ್ತಾಗಿ ಆರಂಭಿಸಬೇಕು. ಜೊತೆಗೆ ಸೋಮೇಶ್ವರ ಉಚ್ಚಿಲ ಭಾಗದಲ್ಲಿಯೂ ರಸ್ತೆ ಮತ್ತು ತಡೆಗೋಡೆ ನಿರ್ಮಾಣಕ್ಕೆ ಅನುದಾನ ಪೂರೈಸುವ ಜೊತೆಗೆ ಶೀಘ್ರವೇ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು. ಅಧಿಕಾರಿಗಳು ಮಳೆಗಾಲದಲ್ಲಿ ಜನರಿಗೆ ಎಲ್ಲಿಯೂ ತೊಂದರೆಯಾಗದಂತೆ ಕಾರ್ಯಪ್ರವೃತ್ತರಾಗಬೇಕು ಎಂದು ಖಾದರ್ ಎಚ್ಚರಿಸಿದರು.

ಈ ಸಂದರ್ಭ ಉಳ್ಳಾಲ ನಗರಸಭೆ ಅಧ್ಯಕ್ಷ ಚಿತ್ರಾ ಚಂದ್ರಕಾಂತ್, ಉಪಾಧ್ಯಕ್ಷ ಅಯೂಬ್ ಮಂಚಿಲ, ಸ್ಥಾಯಿ ಸಮಿತಿ ಅಧ್ಯಕ್ಷೆ ವೀಣಾ ಶಾಂತಿ ಡಿಸೋಜ, ನಗರಸಭೆ ಪೌರಾಯುಕ್ತೆ ವಿದ್ಯಾ ಕಾಳೆ, ಕಾಂಗ್ರೆಸ್ ಮುಖಂಡ ಈಶ್ವರ್ ಉಳ್ಳಾಲ್ ಸೇರಿದಂತೆ ಜಿಲ್ಲಾ ಹಾಗೂ ನಗರಸಭೆ ಅಧಿಕಾರಿಗಳು ಉಪಸ್ಥಿತರಿದ್ದರು.

Related Posts

Leave a Reply

Your email address will not be published.