ಆತಂಕ ಬೇಡ ಟ್ಯಾಂಕರ್ ಮೂಲಕ ನೀರು ಪೂರೈಸುವ ಭರವಸೆ : ಉಡುಪಿ ನಗರಸಭೆ

ಉಡುಪಿ ಜಿಲ್ಲೆಯ ನಗರ, ಗ್ರಾಮೀಣ, ಪ್ರದೇಶ ಸೇರಿದಂತೆ ಹಲವಾರು ಕಡೆಗಳಲ್ಲಿ ನೀರಿನ ಕೊರತೆ ಉಂಟಾಗಿದ್ದು, ಎಲ್ಲರೂ ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ. ಆದರೆ ಕೆಲವೆಡೆ ಟ್ಯಾಂಕರ್ ನೀರಿನ ಸಮರ್ಪಕ ಪೂರೈಕೆ ಇಲ್ಲದೆ, ನೀರಿಗಾಗಿ ಜನರ ಪರದಾಟ ಹೆಚ್ಚಿದೆ. ಈ ಕುರಿತಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಉಡುಪಿ ನಗರಸಭೆ ಪೌರಾಯುಕ್ತ ಆರ್ ಪಿ ನಾಯಕ್, ಮಣಿಪಾಲ, ಉಡುಪಿ ನಗರ ಪ್ರದೇಶ, ಅಂಬಲಪಾಡಿ ಗ್ರಾಮಾಂತರ, ಸಂತೆಕಟ್ಟೆ ಕೆಲವು ಕಡೆಗಳಲ್ಲಿ ನಾಲ್ಕೈದು ದಿನಗಳಿಂದ ನೀರಿಲ್ಲ. ಕೆಲವೆಡೆ ಒಂದು ವಾರ, 10-15 ದಿನಗಳಿಂದ ನೀರಿಲ್ಲ, ಎಂಬ ಮಾಹಿತಿ ನನ್ನ ಗಮನಕ್ಕೆ ಬಂದಿದೆ. ವಸತಿ ಸಮುಚ್ಚಯಗಳಿಂದ ಬಹುತೇಕ ಕರೆಗಳು ಬಂದಿದ್ದು, ಕುಡಿಯುವ ನೀರಿಲ್ಲದೆ ಹಲವು ದಿನಗಳಿಂದ ಸಂಕಷ್ಟ ಪಡುವಂತಾಗಿದೆ. ಕೂಡಲೇ ಪರ್ಯಾಯ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಹೇಳಿದರು.

ರೇಷನಿಂಗ್ ವ್ಯವಸ್ಥೆಯಡಿ ಮೂರು ದಿನಕ್ಕೊಮ್ಮೆ ಬಿಡುವ ನೀರು ಸರಿಯಾಗಿ ಬರುತ್ತಿಲ್ಲ, ಸ್ವಂತ ಮೂಲಗಳಲ್ಲಿ ನೀರು ಖಾಲಿಯಾಗಿದ್ದು, ನಗರಸಭೆ ನೀರು ವ್ಯವಸ್ಥಿತವಾಗಿ ಪೂರೈಕೆಯಾಗಬೇಕು ಎಂದು ಬೇಡಿಕೆ ಇದೆ. ಕೆಲವು ವಸತಿ ಸಮುಚ್ಚಯಗಳಿಗೆ ಒಂದು ಬಾರಿ ಮಾತ್ರ ನೀರಿನ ಟ್ಯಾಂಕರ್ ಮೂಲಕ ಪೂರೈಕೆ ಮಾಡಲಾಗಿದ್ದು, ಅನಂತರ ನೀರಿನ ಪೂರೈಕೆಯಾಗಿಲ್ಲ. ಆದ್ಯತೆ ಮೇರೆಗೆ ಮನೆಗಳಿಗೆ ಮೊದಲು ನೀರಿನ ವ್ಯವಸ್ಥೆ ಮಾಡಿಕೊಡುತ್ತಿದ್ದೇವೆ. ಯಾವ ಪ್ರದೇಶಗಳಲ್ಲಿ ನೀರು ಸಿಗುತ್ತಿಲ್ಲ ಎಂಬುದನ್ನು ತಿಳಿದು ಅಂತಹ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ನಗರಸಭೆ ಸ್ವಂತ ನೀರಿನ ಮೂಲವಾಗಿ 22 ಬಾವಿಗಳನ್ನು ಹೊಂದಿದ್ದು, 16 ಬೋರ್‌ವೆಲ್‌ಗಳಿವೆ. ಇದರಲ್ಲಿ ಕೆಲವು ಕಡೆಗಳಲ್ಲಿ ಮಾತ್ರ ನೀರಿನ ಪ್ರಮಾಣ ಲಭ್ಯವಿದೆ. ಪ್ರಸ್ತುತ ಹಿರಿಯಡ್ಕ ಸ್ವರ್ಣ ನದಿ ಬಜೆ ಡ್ಯಾಂನಲ್ಲಿ 1 ಮೀ. ನೀರು ಮಾತ್ರ ಲಭ್ಯವಿದ್ದು, ಮುಂಜಾಗ್ರತಾ ಕ್ರಮವಾಗಿ 4 ಬೋರ್‌ವೆಲ್‌ ಗಳನ್ನು ಹೊಸದಾಗಿ ರೂಪಿಸಲು ಕಾರ್ಯಪ್ರವೃತ್ತರಾಗಿದ್ದೇವೆ. ಆರಂಭದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲು ಟೆಂಡರ್ ಆಹ್ವಾನ ಮಾಡಿದಲ್ಲಿ ಟ್ಯಾಂಕರ್ ಮಾಲಕರು ಆಸಕ್ತಿ ತೋರಿರಲಿಲ್ಲ, ಹಾಗಾಗಿ ಟ್ಯಾಂಕರ್ ಮೂಲಕ ನೀರು ವಿತರಿಸಲು ತೊಡಕಾಯಿತು. ಡಿಸಿ ಅವರು ಆದೇಶ ಮೇರೆಗೆ ಆರ್‌ಟಿಒ ಮೂಲಕ ಟ್ಯಾಂಕರ್ ಮಾಲಕರಿಗೆ ನೊಟೀಸ್ ನೀಡಿ ನಗರಸಭೆ ವ್ಯಾಪ್ತಿಗಳಿಗೆ ನೀರು ಪೂರೈಸಲು ಕ್ರಮ ಕೈಗೊಂಡಿದ್ದಾರೆ. ಪ್ರಸ್ತುತ 8 ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚುವರಿ ಟ್ಯಾಂಕರ್‌ಗಳು ಲಭ್ಯವಾಗಲಿದೆ. ಆದ್ದರಿಂದ ಆತಂಕ ಬೇಡ, ಟ್ಯಾಂಕರ್ ಮೂಲಕ ನೀರು ಪೂರೈಸುತ್ತೇವೆ ಎಂದು ಭರವಸೆ ನೀಡಿದರು.

Related Posts

Leave a Reply

Your email address will not be published.