ಶಾಸಕ ಹರೀಶ್ ಪೂಂಜಾರಿಂದ ಹಿಂದು ವಿರೋಧಿ ಕೃತ್ಯ : ಮಹೇಶ್ ಶೆಟ್ಟಿ ತಿಮರೋಡಿ ಕಿಡಿ

ಹರೀಶ್ ಪೂಂಜ ಅವರು ವೇದಿಕೆಯಲ್ಲಿ ತನಗೆ ಮುಸ್ಲಿಮರ ಮತ ಬೇಡ ಎಂದು ಹೇಳಿ ಹಿಂದುಗಳನ್ನು ದಾರಿತಪ್ಪಿಸಿ ಮುಸ್ಲಿಮರಿಗೆ ಕ್ರೈಸ್ತ ರಿಗೆ ನೆರವಾಗಿದ್ದಾರೆ. ಅವರಿಗೆ ಕೊಡುವ ಬಗ್ಗೆ ನಮ್ಮ ತಕರಾರಿಲ್ಲ. ಆದರೆ ಹಿಂದೂಗಳ ಮುಂದೆ ಬಂದು ಸುಳ್ಳು ಹೇಳುವುದು ಯಾಕೆ ಎಂದು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸಂಚಾಲಕ ಮಹೇಶ್ ಶೆಟ್ಟಿ ತಿಮರೋಡಿ ಪ್ರಶ್ನಿಸಿದ್ದಾರೆ.

ಅವರು ಬೆಳ್ತಂಗಡಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಇಂತಹ ಇಬ್ಬಗೆಯ ನೀತಿಯನ್ನು ಅಂದಿನಿಂದಲೂ ಅನುಸರಿಸಿಕೊಂಡು ಬಂದಿರುವ ಹರೀಶ್ ಪೂಂಜ ಹಿಂದುತ್ವದ ವಿರುದ್ದವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಕಾರ್ಯಕರ್ತರು ಎಂಬ ಹೆಸರಿನಲ್ಲಿ ಹರೀಶ್ ಪೂಂಜರ ಜನರು ಕೇಸರಿ ಹಾಕಿಕೊಂಡು ಹಿಂದೂ ವಿರೋಧಿ ಕೃತ್ಯಗಳನ್ನು ನಡೆಸುತ್ತಿದ್ದಾರೆ. ಬೇಕಿದ್ದರೆ ಸಾಕ್ಷಿ ಸಮೇತ ಸಾಬೀತುಪಡಿಸುತ್ತೇವೆ. ಹರೀಶ್ ಪೂಂಜರ ಮನೆಯ ಸಮೀಪವೇ ಅಕ್ರಮವಾಗಿ ದನ ಕಡಿಯುವ ಕಾರ್ಯ ನಡೆಯುತ್ತಿದೆ. ಇದು ಹರೀಶ್ ಪೂಂಜರಿಗೆ ತಿಳಿದಿದ್ದರೂ ಅವರು ಬೆಂಬಲ ನೀಡುತಿದ್ದಾರೆ ಎಂದು ಆರೋಪಿಸಿದರು.

ಪೂಂಜ ಸಹಿತ ಅವರ ಬೆಂಬಲಿಗರು ಕೇಸರಿ ಶಾಲು ಹಾಗೂ ಹಿಂದೂ ಧರ್ಮವನ್ನು ಅಪಮಾನಿಸುತ್ತಿದ್ದಾರೆ. ದೇವಸ್ಥಾನದ ಬ್ರಹ್ಮಕಲಶೋತ್ಸವಗಳಲ್ಲಿ ಅನಗತ್ಯ ರಾಜಕೀಯ ಮಾಡುತ್ತಿದ್ದಾರೆ. ಪೂಂಜನ ರಾಜಕೀಯದಿಂದಾಗಿ ತಾಲೂಕಿನ ದೇವಸ್ಥಾನಗಳಲ್ಲಿ ಇದುವರೆಗೆ ನಡೆದ ಯಾವುದೇ ಬ್ರಹ್ಮಕಲಶಗಳು ಸರಿಯಾಗಿಲ್ಲ ಎಂದು ಹೇಳಿದರು.

ಸಿದ್ದಾರಾಮಯ್ಯ 24ಮಂದಿ ಹಿಂದೂಗಳನ್ನು ಹತ್ಯೆ ಮಾಡಿರುವುದಾಗಿ ಹರೀಶ್ ಪೂಂಜ ಹೇಳುತ್ತಾರೆ. ಇದು ಸತ್ಯವಾದರೆ ಸಿದ್ದರಾಮಯ್ಯ ಜೈಲಿಗೆ ಹೋಗಬೇಕು. ಹರೀಶ್ ಪೂಂಜ ಸುಳ್ಳು ಹೇಳಿದರೆ ಅವರಿಗೆ ಶಿಕ್ಷೆಯಾಗಬೇಕು ಎಂದು ತಿಮರೋಡಿ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಮುಖಂಡರು ಉಪಸ್ಥಿತರಿದ್ದರು

Related Posts

Leave a Reply

Your email address will not be published.