ಕಾಪು: 2028ರಲ್ಲಿ ಶತಮಾನೋತ್ಸವ ಆಚರಿಸಲಿರುವ ಐತಿಹಾಸಿಕ ತುಳುವ ಮಹಾಸಭೆಯ ಜಾಗತಿಕ ಸಂಘಟನೆಯಾದ ತುಳುವ ಮಹಾಸಭೆ ಇಂಟರ್‌ನ್ಯಾಷನಲ್‌ನ ಕಾಪು ತಾಲೂಕು ಪ್ರಧಾನ ಸಂಚಾಲಕರಾಗಿ ವಿಕ್ಕಿ ಪೂಜಾರಿ ಮಡುಂಬು ಅವರನ್ನು ನೇಮಕ ಮಾಡಲಾಗಿದೆ.
ಇನ್ನಂಜೆ ಗ್ರಾಮದ ಮಡುಂಬುವಿನ ಕೊಲ್ಲಂಗಾಲು ಬಂಗೇರ ಕುಟುಂಬದ ಸರೋಜ ಪೂಜಾರಿ ಅವರ ಪುತ್ರರಾದ ವಿಕ್ಕಿ ಪೂಜಾರಿ ಮಡುಂಬು ಅವರು ಎಸ್.ವಿ.ಹೆಚ್. ಸಮೂಹ ಸಂಸ್ಥೆಗಳಲ್ಲಿ ಶಾಲಾ ಶಿಕ್ಷಣ ಪೂರೈಸಿ, ಮಂಗಳೂರಿನ ಲಕ್ಷ್ಮೀ ಮೆಮೋರಿಯಲ್ ಕಾಲೇಜ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್‌ನಲ್ಲಿ ಹೋಟೆಲ್ ನಿರ್ವಹಣೆಯಲ್ಲಿ ಪದವಿ ಪಡೆದಿದ್ದಾರೆ.
ಯುವಸೇನೆ ಮಡುಂಬುವಿನ ಸ್ಥಾಪಕ ಅಧ್ಯಕ್ಷರಾಗಿ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಅವರು, ವಿವಿಧ ಹೋಟೆಲ್‌ಗಳಲ್ಲಿ ಕಾರ್ಯನಿರ್ವಹಿಸಿ ಹೋಟೆಲ್ ಉದ್ಯಮದ ಹಲವು ವಿಭಾಗಗಳಲ್ಲಿ ಅನುಭವ ಗಳಿಸಿದ್ದಾರೆ.
2021ರಿಂದ ಕಾಪು ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರದ ಮಾಧ್ಯಮ ವಿಭಾಗದ ಪ್ರಚಾರ ಸಮಿತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಅವರು, ಬಿರುವೆರ್ ಕಾಪು ಸೇವಾ ಸಮಿತಿ, ಯುವವಾಹಿನಿ ಕಾಪು ಘಟಕ, ರೋಟರಿ ಸಮುದಾಯದಳ ಇನ್ನಂಜೆ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದಾರೆ.
2018ರಲ್ಲಿ ‘ನಮ್ಮ ಕಾಪು’ ಎಂಬ ಮಾಧ್ಯಮ ವೇದಿಕೆಯನ್ನು ಆರಂಭಿಸಿ, ಇದೀಗ ‘ನಮ್ಮ ಕಾಪು ವಾಹಿನಿ’ ಮೂಲಕ ಕಾಪು ಹಾಗೂ ಸುತ್ತಮುತ್ತಲಿನ ಸುದ್ದಿಗಳನ್ನು ಜನರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮಾಧ್ಯಮ ಕ್ಷೇತ್ರದ ಸಾಧನೆ ಹಾಗೂ ಸಾಮಾಜಿಕ ಸೇವೆಯನ್ನು ಗುರುತಿಸಿ 2025ರಲ್ಲಿ ಬೆಂಗಳೂರಿನಲ್ಲಿ ‘ಕರುನಾಡ ರತ್ನ’ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಪ್ರಸ್ತುತ ಜೇಸಿಐ ಭಾರತದ ವಲಯ 15ರ ಜೇಸಿಐ ಕಾಪು ಘಟಕದ 2026ನೇ ಸಾಲಿನ ಅಧ್ಯಕ್ಷರಾಗಿರುವ ವಿಕ್ಕಿ ಪೂಜಾರಿ ಮಡುಂಬು ಅವರು ಯುವ ಸಂಘಟನೆ, ಸಾಮಾಜಿಕ ಸೇವೆ, ಮಾಧ್ಯಮ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೊಂದಿರುವ ಅನುಭವದ ಮೂಲಕ ಕಾಪು ತಾಲೂಕಿನಲ್ಲಿ ತುಳುವ ಮಹಾಸಭೆಯ ಸಂಘಟನೆಯನ್ನು ಬಲಪಡಿಸುವ ಉದ್ದೇಶ ಹೊಂದಿದ್ದಾರೆ.
ತುಳು ಭಾಷೆ, ಕಲೆ, ಸಂಸ್ಕೃತಿ ಹಾಗೂ ಪರಂಪರೆಯ ಸಂರಕ್ಷಣೆ ಮತ್ತು ಬೆಳವಣಿಗೆಗೆ ಶ್ರಮಿಸುವುದು ಹಾಗೂ ತುಳುವರನ್ನು ಒಗ್ಗೂಡಿಸುವ ಕಾರ್ಯಕ್ಕೆ ಆದ್ಯತೆ ನೀಡುವ ಹಿನ್ನೆಲೆಯಲ್ಲಿ ತುಳುವರ್ಲ್ಡ್ ಫೌಂಡೇಶನ್ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು ಅವರು ಈ ನೇಮಕ ಮಾಡಿದ್ದಾರೆ.
ತುಳುವ ಮಹಾಸಭೆ ಇಂಟರ್‌ನ್ಯಾಷನಲ್‌ನ ಅಂತರಾಷ್ಟ್ರೀಯ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಕರ್ನಾಟಕ ರಾಜ್ಯಾಧ್ಯಕ್ಷ ದೇವೇಂದ್ರ ಹೆಗ್ಗಡೆ ಕೊಕ್ರಾಡಿ, ಜಿಲ್ಲಾ ಅಧ್ಯಕ್ಷ ಉದಯಕುಮಾರ್ ಹೆಗ್ಡೆ ಹಾಗೂ ಜಿಲ್ಲಾ ಪ್ರಧಾನ ಸಂಚಾಲಕ ವಿಶ್ವನಾಥ್ ಆಚಾರ್ಯ ಪೆರ್ಡೂರು ಅವರು ನೇಮಕವನ್ನು ಸ್ವಾಗತಿಸಿ, ವಿಕ್ಕಿ ಪೂಜಾರಿ ಮಡುಂಬು ಅವರಿಗೆ ಅಭಿನಂದನೆ ಹಾಗೂ ಶುಭಹಾರೈಸಿದ್ದಾರೆ.
ತುಳುವ ಮಹಾಸಭೆ ಇಂಟರ್‌ನ್ಯಾಷನಲ್ ಕಾಪು ತಾಲೂಕು ಪ್ರಧಾನ ಸಂಚಾಲಕರಾಗಿ ವಿಕ್ಕಿ ಪೂಜಾರಿ ಮಡುಂಬು ನೇಮಕ
RELATED ARTICLES

