ವಿಟ್ಲ: ಪತ್ನಿ ಹಾಗೂ ಪತ್ನಿಯ ಪರಿಚಯಸ್ಥ ಸೇರಿಕೊಂಡು ಪತಿಯ ಕೊಲೆ

ವಿಟ್ಲ: ಇಡ್ಕಿದು ಕುಮೇರು ನಿವಾಸಿ ಅರವಿಂದ ಭಾಸ್ಕರ (39) ಅವರನ್ನು ಪತ್ನಿ ಹಾಗೂ ಪತ್ನಿಯ ಪರಿಚಯಸ್ಥ ಸೇರಿಕೊಂಡು ಕುತ್ತಿಗೆ ಹಿಸುಕಿ ಕೊಲೆ ಮಾಡಿರುವುದು ಪೊಲೀಸ್ ತನಿಖೆಯಿಂದ ದೃಢ ಪಟ್ಟಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅರವಿಂದ ಪತ್ನಿ ಆಶಾ ಹಾಗೂ ಮನೆಯ ಸೆಂಟ್ರಿಂಗ್‌ ಕೆಲಸ ನಿರ್ವಹಿಸಿದ ಯೋಗೀಶ ಗೌಡ ಆರೋಪಿಗಳಾಗಿದ್ದಾರೆ.

ಅರವಿಂದ ಭಾಸ್ಕರ ಅವರು ಸುಮಾರು 2 ವರ್ಷಗಳಿಂದ ಹೊಸ ಮನೆಯನ್ನು ಕಟ್ಟಲು ಆರಂಭಿಸಿದ್ದು, ಅದರ ಸೆಂಟ್ರಿಂಗ್‌ ಕೆಲಸವನ್ನು ಯೋಗೀಶ ಗೌಡ ನಿರ್ವಹಿಸುತ್ತಿದ್ದು, ಆತ ಅರವಿಂದ ಭಾಸ್ಕರನ ಪತ್ನಿ ಆಶಾಳೊಂದಿಗೆ ತುಂಬಾ ಅನ್ಯೋನ್ಯವಾಗಿದ್ದ. ಅರವಿಂದ ಭಾಸ್ಕರ ಅವರು ಅಡಿಕೆ ಮಾರಾಟ ಮಾಡಿ ಬಂದ ಹಣವನ್ನು ದುಂದುವೆಚ್ಚ ಮಾಡುತ್ತಿದ್ದ ಬಗ್ಗೆ ಆತನ ಪತ್ನಿ ಆಕ್ಷೇಪಿಸುತ್ತಿದ್ದುದಲ್ಲದೇ, ಯೋಗೀಶ ಆಶಾಳೊಂದಿಗೆ ಸೇರಿಕೊಂಡು ಅರವಿಂದ ಭಾಸ್ಕರನಿಗೆ ಹಲ್ಲೆ ನಡೆಸುತ್ತಿದ್ದರು. ಇದರಿಂದ ಹೆದರಿ ರಾತ್ರಿ ವೇಳೆಯಲ್ಲಿ ಮನೆಯ ಕೋಣೆಯ ಬಾಗಿಲಿನ ಚಿಲಕವನ್ನು ಹಾಕಿ ಮಲಗುತ್ತಿರುವ ಬಗ್ಗೆ ಸುಮಾರು 1 ತಿಂಗಳ ಹಿಂದೆ ತಿಳಿಸಿದ್ದರು.

ಫೆ. 26ರಂದು ಬೆಳಿಗ್ಗೆ 8ಗಂಟೆ ಸುಮಾರಿಗೆ ತಂದೆಯವರಿಗೆ ಫೋನು ಕರೆ ಮಾಡಿದ ಆಶಾ ಪತಿ ನಿನ್ನೆ ರಾತ್ರಿ 10ಗಂಟೆಗೆ ಮನೆಯ ಕೋಣೆಯಲ್ಲಿ ಮಲಗಿದ್ದು, ಬೆಳಗ್ಗಿನ ಜಾವ 07.30 ಸುಮಾರಿಗೆ ನೋಡುವಾಗ ಗಂಡನವರು ಮಲಗಿದ್ದಲ್ಲಿಂದ ಏಳುತ್ತಿಲ್ಲ ಮನೆಗೆ ಬನ್ನಿ ಎಂದು ತಿಳಿಸಿದ್ದಾರೆ. ಬಳಿಕ ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದ ವಿಚಾರ ತಿಳಿದು ಅಲ್ಲಿಗೆ ಹೋದಾಗ ವೈದ್ಯರು ಅರವಿಂದ ಭಾಸ್ಕರನನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಮೃತದೇಹದ ಸ್ಥಿತಿಗತಿಯನ್ನು ಪರಿಶೀಲಿಸಿದಾಗ ಕುತ್ತಿಗೆಯನ್ನು ಅಮುಕಿ ಹಿಡಿದು ಉಸಿರುಗಟ್ಟಿಸಿ ಕೊಲೆ ಮಾಡಿರುವ ಸಂಶಯ ವ್ಯಕ್ತವಾಗಿದೆ ಎಂದು ವಿಟ್ಲಕಸಬಾ ಗ್ರಾಮದ ಮೇಗಿನಪೇಟೆ ನಿವಾಸಿ ರಘುನಾಥ ಕೊಟ್ಟ ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿಗಳನ್ನು ಬಂಧಿಸಲಾಗಿದೆ.

Related Posts

Leave a Reply

Your email address will not be published.