ಬಂಗಾರಮಕ್ಕಿ: ಈ ವರ್ಷದ ಚಾತುರ್ಮಾಸ್ಯವನ್ನು “ಪಶ್ಚಿಮ ಘಟ್ಟ ಸಂರಕ್ಷಣಾ ಚಾತುರ್ಮಾಸ್ಯ” ಎಂದು ವಿಶೇಷವಾಗಿ ಆಚರಿಸುವ ಐತಿಹಾಸಿಕ ಸಂಕಲ್ಪವನ್ನು ಶ್ರೀಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿಗಳಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಮಾರುತಿ ಗುರೂಜಿಯವರು ಕೈಗೊಂಡಿದ್ದು, ಅದರ ಉದ್ಘಾಟನಾ ಸಮಾರಂಭವು ಭಕ್ತಿಭಾವ, ಪರಿಸರ ಕಾಳಜಿ ಹಾಗೂ ಸಾಮಾಜಿಕ ಜಾಗೃತಿಯ ಸಂದೇಶದೊಂದಿಗೆ ಅದ್ದೂರಿಯಾಗಿ ನೆರವೇರಿತು.
ಪ್ರಾಕೃತಿಕ ಸಂಪತ್ತು ನಮ್ಮೆಲ್ಲರ ಅಮೂಲ್ಯ ಆಸ್ತಿ. ಅವುಗಳನ್ನು ಉಳಿಸುವುದು, ಬೆಳೆಸುವುದು ಮತ್ತು ಮುಂದಿನ ಪೀಳಿಗೆಗೆ ಸಂರಕ್ಷಿಸಿ ನೀಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಪರಮಪೂಜ್ಯ ಶ್ರೀ ಶ್ರೀ ಶ್ರೀ ಮಾರುತಿ ಗುರೂಜಿಯವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಪರಿಸರ ರಕ್ಷಣೆಗೆ ವಿಶ್ವದ ಅನೇಕ ರಾಷ್ಟ್ರಗಳು ಆದ್ಯತೆ ನೀಡುತ್ತಿರುವಾಗ ನಮ್ಮ ದೇಶದಲ್ಲಿ 38 ವಿನಾಶಕಾರಿ ಯೋಜನೆಗಳನ್ನು ಏಕೆ ಜಾರಿಗೊಳಿಸಲಾಗುತ್ತಿದೆ ಎಂದು ಪ್ರಶ್ನಿಸಿದರು.
ಈ ವಿಶೇಷ ಪಶ್ಚಿಮ ಘಟ್ಟ ಸಂರಕ್ಷಣಾ ಚಾತುರ್ಮಾಸ್ಯದ ಅಂಗವಾಗಿ ಪ್ರತಿ ವಾರ ಪತ್ರಕರ್ತರು, ವಿಜ್ಞಾನಿಗಳು, ಪರಿಸರ ತಜ್ಞರು, ಪರಿಸರ ಪ್ರೇಮಿಗಳು ಹಾಗೂ ನೂರಾರು ಸಂತರು ಒಂದಾಗಿ ಪರಿಸರ ಸಂರಕ್ಷಣೆಯ ಕುರಿತು ವಿಚಾರ ಸಂಕಿರಣ, ಚಿಂತನೆ ಮತ್ತು ಚರ್ಚೆಗಳನ್ನು ನಡೆಸಿ ಸಮಾಜದಲ್ಲಿ ಜಾಗೃತಿ ಮೂಡಿಸಲಿದ್ದಾರೆ ಎಂದು ತಿಳಿಸಿದರು.

ವ್ಯಾಸ ಪೂರ್ಣಿಮೆಯ ಮಹತ್ವವನ್ನು ವಿವರಿಸಿದ ಗುರೂಜಿಯವರು, ಗುರು-ಶಿಷ್ಯ ಪರಂಪರೆಯ ಮಹತ್ವವನ್ನು ತಿಳಿಸಿ, ತಾಯಿ-ತಂದೆಯರಿಂದ ಆರಂಭವಾಗಿ ಗುರುಗಳು ಹಾಗೂ ಸಮಾಜದ ಅನೇಕ ಮಹನೀಯರು ಜ್ಞಾನದ ಬೆಳಕನ್ನು ನೀಡುತ್ತಾರೆ. ನಾವೆಲ್ಲರೂ ಜ್ಞಾನ ಪಿಪಾಸುಗಳಾಗಿ ಬದುಕನ್ನು ಸಾರ್ಥಕಗೊಳಿಸೋಣ ಎಂದು ಕರೆ ನೀಡಿದರು.
ದೆಹಲಿಯ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ ಸಹ ಅಧ್ಯಕ್ಷರಾದ ಶ್ರೀ ಅಶೋಕ ಕುಮಾರ ಸಿಂಗ್ ಪರಿಸರ ಸಂರಕ್ಷಣೆ, ಸಾಮಾಜಿಕ ನೀತಿ ಹಾಗೂ ಭಕ್ತಿ ಮಾರ್ಗವನ್ನು ಜನರಲ್ಲಿ ಬಿತ್ತುತ್ತಿರುವ ಪರಮಪೂಜ್ಯ ಶ್ರೀ ಮಾರುತಿ ಗುರೂಜಿಯವರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಹಿಮಾಲಯ ಕನ್ಸ್ಟ್ರಕ್ಷನ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಆನಂದ ಅನು ಸಿಂಗ್ ಮಾತನಾಡಿ, ಭಕ್ತಿ, ಜೀವನ ಮೌಲ್ಯಗಳು ಮತ್ತು ಪರಿಸರ ಸಂರಕ್ಷಣೆಯನ್ನು ಒಟ್ಟುಗೂಡಿಸಿ ಜನಜಾಗೃತಿ ಮೂಡಿಸುತ್ತಿರುವ ಪರಮ ಪೂಜ್ಯ ಮಾರುತಿ ಗುರೂಜಿಯವರ ಕಾರ್ಯ ಅನುಕರಣೀಯ ಎಂದು ಅಭಿಪ್ರಾಯಪಟ್ಟರು.

ಯುವ ಉದ್ಯಮಿ, ಉಡುಪಿ ವೈಟ್ ಲೋಟಸ್ ಹೋಟೆಲ್‌ನ ಸಿ.ಎಂ.ಡಿ. ಶ್ರೀ ಅಜಯ ಪುರುಷೋತ್ತಮ ಶೆಟ್ಟಿಯವರು, ಈ ವರ್ಷದ ಪಶ್ಚಿಮ ಘಟ್ಟ ಸಂರಕ್ಷಣಾ ಚಾತುರ್ಮಾಸ್ಯದ ಮೂಲಕ ಪರಿಸರ ಸಂರಕ್ಷಣೆ ಹಾಗೂ ಜ್ಞಾನಯಜ್ಞದ ಮಹತ್ವವನ್ನು ಸಮಾಜಕ್ಕೆ ತಲುಪಿಸುವ ಗುರೂಜಿಯವರ ಸಂಕಲ್ಪ ಅತ್ಯಂತ ಶ್ಲಾಘನೀಯವಾಗಿದ್ದು, ನಾವೆಲ್ಲರೂ ಈ ಮಹತ್ಕಾರ್ಯಕ್ಕೆ ಕೈಜೋಡಿಸೋಣ ಎಂದರು.
ವಿಶ್ರಾಂತ ಪ್ರಾಚಾರ್ಯ ಶ್ರೀ ವಿ. ಜಿ. ಹೆಗಡೆ ಗುಡ್ಗೆ ಮಾತನಾಡಿ, ವ್ರತಾಚರಣೆಯ ಮೂಲಕ ಬದುಕು ಬಂಗಾರವಾಗುತ್ತದೆ. ಯತಿಗಳಷ್ಟೇ ಅಲ್ಲ, ಜನಸಾಮಾನ್ಯರೂ ವ್ರತಾಚರಣೆ ಮಾಡಬಹುದು. ಪೂಜ್ಯ ಮಾರುತಿ ಗುರೂಜಿಯವರ ಪರಿಸರ ಸಂರಕ್ಷಣೆಯ ಮಹಾಸಂಕಲ್ಪಕ್ಕೆ ಎಲ್ಲರೂ ಸಹಕಾರ ನೀಡಿ, ಜ್ಞಾನ ಕೈಂಕರ್ಯ ಹಾಗೂ ಪಶ್ಚಿಮ ಘಟ್ಟ ಸಂರಕ್ಷಣೆಗೆ ಕಟಿಬದ್ಧರಾಗೋಣ ಎಂದು ಕರೆ ನೀಡಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ಶ್ರೀ ವಿಶ್ವನಾಥ ನಾಯಕ ಹಾಗೂ ಶ್ರೀ ಮಂಜುನಾಥ ಹೆಗಡೆ ಹಾಗೂ ಗ್ರಾಮ ಪಂಚಾಯಿತಿಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀಮತಿ ಸುನೀತಾ ಹೆಗಡೆ ಅವರುಗಳು ಪೂಜ್ಯರ ವಿಶಿಷ್ಟ ಚಿಂತನೆ, ಪರಿಸರ ಕಾಳಜಿ ಮತ್ತು ಸಾಮಾಜಿಕ ಸೇವಾ ಮನೋಭಾವ ಎಲ್ಲರಿಗೂ ಆದರ್ಶವಾಗಿದೆ ಎಂದು ಅಭಿಪ್ರಾಯಪಟ್ಟರು.
ಶ್ರೀ ಜಿ. ಟಿ. ಹೆಗಡೆ ಸ್ವಾಗತಿಸಿದರು. ಶ್ರೀ ಮಂಜುನಾಥ ಗೌಡ ವಂದನಾರ್ಪಣೆ ಸಲ್ಲಿಸಿದರು. ಶ್ರೀ ಶೈಲೇಶ್ ಕುಮಟಾ ಕಾರ್ಯಕ್ರಮವನ್ನು ನಿರೂಪಿಸಿದರು.


