ವಾಷಿಂಗ್ಟನ್ಗೆ ನೈರುತ್ಯದಲ್ಲಿರುವ ಪಲ್ಪ್ ಮತ್ತು ಕಾಗದ ಕಾರ್ಖಾನೆಯಲ್ಲಿ ನಡೆದ ರಾಸಾಯನಿಕ ಸ್ಫೋಟದಲ್ಲಿ ಒಬ್ಬ ಸತ್ತಿದ್ದು, ಒಂಬತ್ತು ಜನರು ನಾಪತ್ತೆಯಾಗಿದ್ದಾರೆ.
ಅಮೆರಿಕ ಸಂಯುಕ್ತ ಸಂಸ್ಥಾನದ ವಾಷಿಂಗ್ಟನ್ ಒಂಕಣ ಇಲ್ಲವೇ ನೈರುತ್ಯ ಭಾಗದಲ್ಲಿನ ಕಾರ್ಖಾನೆಯಲ್ಲಿ ಈ ರಾಸಾಯನಿಕ ಟ್ಯಾಂಕ್ ಸ್ಫೋಟ ನಡೆದಿದೆ. ರಕ್ಷಣಾ ಕಾರ್ಯಕರ್ತರು ಒಬ್ಬರ ಶವವನ್ನು ಹೊರ ತೆಗೆದಿದ್ದಾರೆ. ಒಂಬತ್ತು ಜನರು ನಾಪತ್ತೆಯಾಗಿದ್ದರೆ. ಅವರು ಸ್ಫೋಟಕ್ಕೆ ದಿಂಡುರುಳಿದ ಕಟ್ಟಡದ ಅವಶೇಷಗಳ ಅಡಿ ಬಿದ್ದಿದ್ದಾರೆ ಎನ್ನಲಾಗಿದೆ. ರಕ್ಷಣಾ ಕಾರ್ಯ ಮುಂದುವರಿದಿದೆ. ಅವರು ಜೀವಂತ ಸಿಗುವರೇ ಎನ್ನುವ ಸಂದೇಹ ಹಲವರದಾಗಿದೆ.

ಸಾಮೂಹಿಕ ವಿನಾಶದಂತೆ ಕಾರ್ಖಾನೆಯ ಸ್ಥಳ ಕಾಣಿಸುತ್ತಿದೆ ಎಂದು ಅಗ್ನಿಶಾಮಕ ದಳದ ಬೆಟಾಲಿಯನ್ ಮುಖ್ಯಸ್ಥ ಮೈಕ್ ಗೋರ್ಸಚ್ ಹೇಳಿದ್ದಾರೆ. ಬಹಳಷ್ಟು ಜನರು ಗಾಯಗೊಂಡಿದ್ದು, ಅವರನ್ನು ತುರ್ತು ಸ್ಪಂದನೆ ತಂಡಗಳವರು ಲಾಂಗ್ವ್ಯೂ ಹಾಗೂ ವ್ಯಾಂಕೂವರ್ ಆಸ್ಪತ್ರೆಗಳಿಗೆ ಸಾಗಿಸಿದ್ದಾರೆ. ಪ್ರಾದೇಶಿಕ ವಿಪತ್ತು ನಿರ್ವಹಣಾ ತಂಡ, ಅರೆ ವೈದ್ಯಕೀಯ ಸಿಬ್ಬಂದಿ, ಅಗ್ನಿಶಾಮಕ ದಳದವರು ತುರ್ತು ನಿರ್ವಹಣೆ ನಡೆಸಿದರು.
ಬೆಳಿಗ್ಗೆ ಏಳೂಕಾಲು ಗಂಟೆಗೆ ಎಂದರೆ ಭಾರತದ ನಿನ್ನೆಯ ರಾತ್ರಿ ಎಂಟು ಗಂಟೆಯ ಹೊತ್ತಿಗೆ ಈ ರಾಸಾಯನಿಕ ವಿಪತ್ತು ನಡೆದಿದೆ. ಕಾಗದ, ಕೈಕಾಗದ, ಒರೆಸು ಕಾಗದ, ರಟ್ಟು ಕಾಗದ, ಕಾಗದದ ಕಪ್, ತಟ್ಟೆ ಇತ್ಯಾದಿಗಳನ್ನು ಈ ಕಾರ್ಖಾನೆಯು ತಯಾರಿಸುತ್ತಿತ್ತು. ರಾಸಾಯನಿಕ ಸ್ಫೋಟದಿಂದ, ಹಾಗೂ ಆ ಗಾಳಿ ಸೇವನೆಯಿಂದ ಹಲವರು ಸುಟ್ಟಗಾಯ ಹಾಗೂ ಉಸಿರಾಟದ ತೊಂದರೆಗೆ ಒಳಗಾಗಿದ್ದಾರೆ.
