ಬಳ್ಕೂರು ಯಕ್ಷ ಕುಸುಮ ಪ್ರತಿಷ್ಠಾನ ಮತ್ತು ಕಲಾಸ್ತಕರ ಬಳಗ, ಕೊಡಿಯಾಲ್ ಬೈಲ್ ಮಂಗಳೂರು : ‘ಕೃಷ್ಣ ಗಾರುಡಿ’ ಮತ್ತು ‘ಜಾಂಬವತಿ’ ಎಂಬ ಕಥಾನಕ ಪ್ರದರ್ಶನ

ಬಳ್ಕೂರು ಯಕ್ಷ ಕುಸುಮ ಪ್ರತಿಷ್ಠಾನ ಮತ್ತು ಕಲಾಸ್ತಕರ ಬಳಗ, ಕೊಡಿಯಾಲ್ ಬೈಲ್ ಮಂಗಳೂರು ಇವರ ಆಶ್ರಯದಲ್ಲಿ ಶ್ರೀಕ್ಷೇತ್ರ ಕುದ್ರೋಳಿ ಭಗವತೀ ದೇವಸ್ಥಾನ ಮತ್ತು ರಂಗಸ್ಥಳ ಮಂಗಳೂರು ಇವರ ಪ್ರೊತ್ಸಾಹದೊಂದಿಗೆ ಮಂಗಳೂರಿನಲ್ಲಿ ಪ್ರಥಮ ಬಾರಿಗೆ ಇದೇ ಬರುವ ಜನವರಿ 22 ರಂದು ಸಂಜೆ 4 ರಿಂದ ರಾತ್ರಿ 10 ರವರೆಗೆ ಬಡಗು ತಿಟ್ಟಿನ ಪ್ರಸಿದ್ಧ ಯಕ್ಷಗಾನ ಮೇಳವಾಗಿರುವ ಶ್ರೀಕ್ಷೇತ್ರ ಹಟ್ಟಿಯಂಗಡಿ ಮೇಳ, ಇವರಿಂದ ಕಾಲಮಿತಿ ಯಕ್ಷಗಾನ ಪ್ರದರ್ಶನವಾಗಿ ‘ಕೃಷ್ಣ ಗಾರುಡಿ’ ಮತ್ತು ‘ಜಾಂಬವತಿ’ ಎಂಬ ಕಥಾನಕ ಪ್ರದರ್ಶನವು ಕೊಡಿಯಾಲ್ ಬೈಲ್ ಕುದ್ರೋಳಿ ಶ್ರೀ ಭಗವತೀ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ‘ಬಳ್ಕೂರು ಯಕ್ಷ ಕುಸುಮ’ ಪುರಸ್ಕಾರವನ್ನು ಕಲಾವಿದರಾದ ಶ್ರೀ ಹಳ್ಳಾಡಿ ಜಯರಾಮ್ ಶೆಟ್ಟಿ ಮತ್ತು ಮೇಳದ ಸಂಚಾಲಕರಾದ ಶ್ರೀ ರಂಜಿತ್ ಕುಮಾರ್, ವಕ್ವಾಡಿ ಇವರಿಗೆ ನೀಡಿ ಗೌರವಿಸಲಾಗುವುದು.

ಈ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಅಭ್ಯಾಗತರಾಗಿ ಮಂಗಳೂರು ನಗರ ದಕ್ಷಿಣ ವಿಧಾನ ಸಭಾ ಕ್ಷೇತ್ರ ಶಾಸಕರಾದ ಶ್ರೀ ವೇದವ್ಯಾಸ್ ಕಾಮತ್, ಮಂಗಳೂರಿನ ಹಿರಿಯ ಲೆಕ್ಕ ಪರಿಶೋಧಕರಾದ ಶ್ರೀ ಎಸ್ ಎಸ್ ನಾಯಕ್, ಮಂಗಳೂರು ರಂಗಸ್ಥಳ ಸಂಸ್ಥೆಯ ಶ್ರೀ ಎಸ್ ಎಲ್ ನಾಯಕ್ ಮತ್ತು ಶ್ರೀ ದಿನೇಶ್ ಪೈ, ಮಂಗಳೂರಿನ ಹಿರಿಯ ಲೆಕ್ಕ ಪರಿಶೋಧಕರಾದ ಸಿ ಎ ಶಾಂತರಾಮ ಶೆಟ್ಟಿ, ಕುದ್ರೋಳಿ ಶ್ರೀ ಭಗವತೀ ದೇವಸ್ಥಾನ ಅಧ್ಯಕ್ಷರಾದ ಶ್ರೀ ಗಣೇಶ್ ಕುಂಟಲ್ಪಾಡಿ, ಮಂಗಳೂರು ಕೆ.ಎಂ.ಸಿ ಹೃದ್ರೋಗ ತಜ್ಞರಾದ ಡಾ.ಪದ್ಮನಾಭ ಕಾಮತ್, ಮಂಗಳೂರು ರಂಗಸಂಗಾತಿ ಅಧ್ಯಕ್ಷರಾದ ಶ್ರೀ ಗೋಪಾಲ ಶೆಟ್ಟಿ, ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಅಣ್ಣಯ್ಯ ಕುಲಾಲ್, ಉಳ್ತೂರು, ಪಮ್ಮಿ, ಕೊಡಿಯಾಲ್ ಬೈಲ್, ಮಂಗಳೂರು ಇವರು ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಬಳ್ಕೂರು ಯಕ್ಷ ಕುಸುಮ ಪ್ರತಿಷ್ಠಾನದ ಪರವಾಗಿ ಕರುಣಾಕರ ಬಳ್ಕೂರು ತಿಳಿಸಿರುತ್ತಾರೆ.

ಪರಿಚಯ ಹಾಸ್ಯ ಕಲಾವಿದ : ಹಳ್ಳಾಡಿ ಜಯರಾಮ ಶೆಟ್ಟಿ

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಳ್ಳಾಡಿ ಅಬ್ಬಿಮನೆಯಲ್ಲಿ 1956 ಫೆಬ್ರವರಿ 1 ರಂದು ಶ್ರೀ ಅಣ್ಣಪ್ಪಶೆಟ್ಟಿ ಮತ್ತು ಅಕ್ಕಮ್ಮ ದಂಪತಿಯ ಮಗನಾಗಿರುವ ಇವರು ಬಾಲ್ಯದಲ್ಲಿಯೇ ಯಕ್ಷಗಾನವನ್ನು ಅಭ್ಯಾಸ ಮಾಡಿ ಯಕ್ಷರಂಗದಲ್ಲಿ ಗುರು ಹಳ್ಳಾಡಿ ಮಂಜಯ್ಯ ಶೆಟ್ಟಿಯವರ ಗರಡಿಯಲ್ಲಿ ಪಳಗಿ ಮಂದಾರ್ತಿ, ಪೆರ್ಡೂರು, ಅಮೃತೇಶ್ವರಿ, ಕಮಲಶಿಲೆ ಹೀಗೆ ಬೇರೆ ಬೇರೆ ಮೇಳಗಳಲ್ಲಿ ತಿರುಗಾಟ ನಡೆಸಿ ಸಾಲಿಗ್ರಾಮ ಮೇಳದಲ್ಲಿ ಸುಮಾರು 25 ವರ್ಷಕ್ಕೂ ತಿರುಗಾಟ ನಡೆಸಿದ ಹೆಗ್ಗಳಿಕೆ ಇವರದ್ದು. ತೆಂಕು ಮತ್ತು ಬಡಗು ಎರಡು ತಿಟ್ಟುಗಳಲ್ಲಿ ತಿರುಗಾಟ ಮಾಡಿದ ಅನುಭವ ಇವರದ್ದು. ಪೌರಾಣ ಕ ಅಥವಾ ಸಾಮಾಜಿಕ ಪ್ರಸಂಗವಾಗಲಿ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ಪ್ರೇಕ್ಷಕರ ಅಭಿರುಚಿಗೆ ಸರಿಯಾಗಿ ಕಥಾನಕವನ್ನು ಉಣಬಡಿಸುವ ವಿಶಿಷ್ಟ ಕಲಾವಿದ. ಧಾರುಕ, ಬ್ರಾಹ್ಮಣ, ಬಾಹುಕ, ಕೈರವ, ಕೋಳಿಪಡಿ ಕುಷ್ಠ, ಕೃಷ್ಣ, ಭೀಮ, ಯಮ ಇತ್ಯಾದಿ ಪಾತ್ರಗಳಿಗೆ ಜೀವತುಂಬಿದ ಕಲಾವಿದ. ಕುಂದಗನ್ನಡದಲ್ಲಿ ಬಿಡುಗಡೆಯಾದ ‘ಹುಲಿಯಾದ ಕಾಳಾ’ ಪ್ರಸಂಗ ಇಂದಿಗೂ ಜನಮಾನಸವಾಗಿದೆ. ಹಾಸ್ಯಕಲಾವಿದನಾಗಿ ಗುರುತಿಸಿಕೊಂಡ ಇವರಿಗೆ ಹಾಸ್ಯ ರತ್ನ, ಹಾಸ್ಯ ದಿಗ್ಗಜ, ಪೇಜಾವರ ಮಠದ ರಾಮವಿಠಲ ಪ್ರಶಸ್ತಿ ಮುಡಿಗೇರಿದೆ. ಪ್ರಸ್ತುತ ಶ್ರೀಕ್ಷೇತ್ರ ಹಟ್ಟಿಯಂಗಡಿ ಮೇಳದ ತಿರುಗಾಟದಲ್ಲಿರುವ ಇವರ ಯಕ್ಷಪರಂಪರೆಯನ್ನು ಕಲಾಸೇವೆಯನ್ನು ಗುರುತಿಸಿ ‘ಬಳ್ಕೂರು ಯಕ್ಷ ಕುಸುಮ ಪುರಸ್ಕಾರ’ಕ್ಕೆ ಆಯ್ಕೆ ಗೊಳಿಸಲಾಗಿದೆ.


ಶ್ರೀ ರಂಜಿತ್ ಕುಮಾರ್ ವಕ್ವಾಡಿ
ಕುಂದಾಪುರ ತಾಲೂಕಿನ ವಕ್ವಾಡಿ ಎಂಬ ಗ್ರಾಮದಲ್ಲಿ ಗಣಪತಿ ಶೆಟ್ಟಿ ಮತ್ತು ಕುಸುಮಾ ಶೆಡ್ತಿ ಅವರ ಸುಪುತ್ರನಾಗಿ ಜನಿಸಿರುವ ಇವರು ಕನ್ನಡದಲ್ಲಿ ಎಂ.ಎ ಸ್ನಾತಕೋತ್ತರ ಪದವಿಯನ್ನು ಪಡೆದು ಯಕ್ಷರಂಗದಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿರುವುದು ಯುವ ಕಲಾವಿದ ಎನ್ನುವುದು ವಿಶೇಷ. ಪ್ರಸ್ತುತ ಕುಂದಾಪುರದಲ್ಲಿ ಹಟ್ಟಿಯಂಗಡಿ ಮೇಳದ ರೂವಾರಿಯಾಗಿ ಹಲವು ಕಲಾವಿದರಿಗೆ ಬದುಕು ಕಟ್ಟಿಕೊಳ್ಳಲು ಅವಕಾಶವನ್ನು ನೀಡುವ ಮೂಲಕ ಹಾಗೂ ಯಕ್ಷ ಪರಂಪರೆಯನ್ನು ಮುಂದುವರಿಸುತ್ತಿರುವ ಇವರ ಕಲಾಸೇವೆಯನ್ನು ಗುರುತಿಸಿ ‘ಬಳ್ಕೂರು ಯಕ್ಷ ಕುಸುಮ ಯುವ ಪುರಸ್ಕಾರ’ಕ್ಕೆ ಆಯ್ಕೆ ಗೊಳಿಸಲಾಗಿದೆ.

ದಿನಾಂಕ: ಜನವರಿ 22 ಭಾನುವಾರ 2023, ಸಮಯ: ಸಂಜೆ 4 ರಿಂದ 10 ರವರೆಗೆ
ಸ್ಥಳ : ಮಂಗಳೂರು ಶ್ರೀಕ್ಷೇತ್ರ ಕುದ್ರೋಳಿ ಭಗವತೀ ದೇವಸ್ಥಾನ, ಕೂಟಕ್ಕಳ ಸಭಾಂಗಣ.

Related Posts

Leave a Reply

Your email address will not be published.