ಜಿಲ್ಲಾ ಮಟ್ಟದ ಸ್ಕೇಟಿಂಗ್ ಚಾಂಪಿಯನ್‍ಶಿಫ್ ಸ್ಪರ್ಧೆ : ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಸಾಧನೆ

ಬಂಟ್ವಾಳ: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಲಾದ ಜಿಲ್ಲಾ ಮಟ್ಟದ ಸ್ಕೇಟಿಂಗ್ ಚಾಂಪಿಯನ್‍ಶಿಪ್ ಸ್ಪರ್ಧೆಯಲ್ಲಿ ಪೊಳಲಿ ಶ್ರೀ ರಾಮಕೃಷ್ಣ ತಪೋವನದಲ್ಲಿ ತರಬೇತಿ ಪಡೆಯುತ್ತಿರುವ 8 ಮಂದಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆಯನ್ನು ಮಾಡಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಸ್ಪರ್ಧಾ ಕೂಟದಲ್ಲಿ ಕಳ್ಳಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಹಂಸಿಕಾ ಹಾಗೂ ಗಿತೇಶ್ ದ್ವಿತೀಯ ಸ್ಥಾನ ಗೆದ್ದುಕೊಂಡಿದ್ದಾರೆ ಪೊಳಲಿ ದ.ಕ. ಜಿ.ಪಂ. ಸ. ಹಿ. ಪ್ರಾ. ಶಾಲೆಯ ವಿದ್ಯಾರ್ಥಿ ಅಮೃತ್ ಎಸ್. ಇನ್‍ಲೈನ್ ಸ್ಕೇಟಿಂಗ್ ವಿಭಾಗದಲ್ಲಿ ಪ್ರಥಮ ಸ್ಥಾನ ಗೆದ್ದುಕೊಂಡಿದ್ದಾನೆ. ವಿವಿಧ ವಯೋಮಾನಗಳ ಸ್ಕೇಟಿಂಗ್‍ನಲ್ಲಿ ಇದೇ ಶಾಲೆಯ ಸಂದೀಪ್ ಮತ್ತು ಮಂಜುನಾಥ್ ಪ್ರಥಮ ಸ್ಥಾನ ಸಾಥ್ವಿಕ್, ಶರಣ್ಯ ಹಾಗೂ ಸಂಜು ದ್ವಿತೀಯ ಸ್ಥಾನ ಗೆದ್ದುಕೊಂಡಿದ್ದಾರೆ.

ಮಾರ್ಷಲ್ ಆರ್ಟ್ ತರಬೇತುದಾರರಾದ ರಾಜೇಶ್ ಬ್ರಹ್ಮರಕೂಟ್ಲು ಬಾಲಕರಿಗೆ ತರಬೇತಿಯನ್ನು ನೀಡಿದ್ದು, ಎನ್‍ಐಐಟಿಕೆ ವಿದ್ಯಾರ್ಥಿನಿ ವೆನಿಲ್ಲಾ ಮಣಿಕಂಠ ಬಾಲಕಿಯರಿಗೆ ತರಬೇತಿಯನ್ನು ನೀಡಿದ್ದಾರೆ. ಪೊಳಲಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಜಯಾನಂದ ಹಾಗೂ ಶಿಕ್ಷಕರು ಪ್ರೋತ್ಸಾಹ, ಮರ್ಗದರ್ಶನ ನೀಡಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳು ಮಿನಿ ಒಲಂಪಿಕ್ ಜೂಡೋದಲ್ಲೂ ಸ್ಪರ್ಧಿಸಿದ್ದರು ಎನ್ನುವುದು ಗಮನಾರ್ಹ. ಪೊಳಲಿ ಶ್ರೀ ರಾಮಕೃಷ್ಣ ತಪೋವನದಲ್ಲಿ ಅಲ್ಲಿನ ಶ್ರೀ ವಿವೇಕಾಚೈತನ್ಯಾನಂದ ಸ್ವಾಮೀಜಿ ಅವರ ಪ್ರೋತ್ಸಾಹ, ಮಾರ್ಗದರ್ಶನದಲ್ಲಿ ಕರಾಟೆ, ಜೂಡೋ, ಸಿಲಂಬಂ ಮತ್ತಿತರ ಮಾರ್ಷಲ್ ಆರ್ಟ್ಸ್ ಹಾಗೂ ಸ್ಕೇಟಿಂಗ್ ತರಬೇತಿ ನಡೆಯುತ್ತಿದ್ದು ವಿದ್ಯಾರ್ಥಿಗಳ ವಿಶೇಷ ಸಾಧನೆಗೆ ಸ್ವಾಮೀಜಿಯವರು ಸಂತಸ ಹಾಗೂ ಅಭಿನಂದನೆ ವ್ಯಕ್ತಪಡಿಸಿದ್ದಾರೆ.
