ವೇಯ್ಟ್‍ಲಿಫ್ಟಿಂಗ್ ಕಂಚು ಗೆದ್ದು ಹುಟ್ಟೂರಿಗೆ ಆಗಮಿಸಿದ ಗುರುರಾಜ್

ಕುಂದಾಪುರ: ಬರ್ಮಿಂಗ್‍ಹ್ಯಾಮ್‍ನಲ್ಲಿ ನಡೆದ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ವೇಯ್ಟ್ ಲಿಫ್ಟಿಂಗ್ 61 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಭಾನುವಾರ ಹುಟ್ಟೂರಿಗೆ ಆಗಮಿಸಿದ ತಾಲೂಕಿನ ಗುರುರಾಜ್ ಪೂಜಾರಿ ಅವರನ್ನು ಕುಂದಾಪುರದ ಶಾಸ್ತ್ರೀವೃತ್ತದಲ್ಲಿ ಚಂಡೆ ವಾದನಗಳ ಸಹಿತ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಉಡುಪಿಯಲ್ಲಿ ಜಿಲ್ಲಾಡಳಿತ ವತಿಯಿಂದ ನೀಡಲಾದ ಸನ್ಮಾನವನ್ನು ಸ್ವೀಕರಿಸಿ ಮಧ್ಯಾಹ್ನದ ಬಳಿಕ ಕುಂದಾಪುರಕ್ಕೆ ಬಂದಿದ್ದ ಅವರನ್ನು ತಹಸೀಲ್ದಾರ್ ಕಿರಣ್ ಗೌರಯ್ಯ, ಪಿಎಸ್‍ಐ ಸದಾಶಿವ ಗವರೋಜಿ, ತಾಲೂಕು ಯುವಜನ ಕ್ರೀಡಾಧಿಕಾರಿ ಕುಸುಮಾಕರ್ ಶೆಟ್ಟಿ, ಕಲಾಕ್ಷೇತ್ರ ಅಧ್ಯಕ್ಷ ಬಿ ಕಿಶೋರ್ ಕುಮಾರ್, ಪುರಸಭೆಯ ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ, ಮಾಜಿ ತಾ.ಪಂ ಸದಸ್ಯ ಪ್ರದೀಪ್ ಶೆಟ್ಟಿ ಬಿದ್ಕಲ್‍ಕಟ್ಟೆ ಮುಂತಾದವರು ಸ್ವಾಗತ ನೀಡಿ ರಾ. ಹೆದ್ದಾಯಲ್ಲಿಯೇ ಸನ್ಮಾನಿಸಿದರು.

ಬಳಿಕ ಚಂಡೆ ವಾದನಗಳ ಮೆರವಣಿಗೆಯೊಂದಿಗೆ ಹರ್ಕುಲೆಸ್ ಜಿಮ್ ಕೇಂದ್ರಕ್ಕೆ ತೆರಳಿದ ಗುರುರಾಜ್ ಪೂಜಾರಿಯವರಿಗೆ ಜಿಮ್ ವತಿಯಿಂದ ಆತ್ಮೀಯವಾಗಿ ಗೌರವ ಸಮರ್ಪಣೆ ಮಾಡಲಾಯಿತು. ಈ ವೇಳೆ ಮಾತನಾಡಿದ ಹಿರಿಯ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ್ ಅವರು, ನಮ್ಮೂರು ಹಳ್ಳಿಯ ಹುಡುಗ ಜಗತ್ತೆ ಮೆಚ್ಚುವಂತಹ ಸಾಧನೆ ಮಾಡಿದ್ದಾರೆ. ಇಡೀ ದೇಶವೇ ಕುಂದಾಪುರದತ್ತ ದಿಟ್ಟಿಸಿ ನೋಡುವ ಗುರುರಾಜ್ ಅವರ ಪ್ರಯತ್ನ ಅವಿಸ್ಮರಣೀಯ. ಭವಿಷ್ಯದಲ್ಲಿ ಅವರು ಉತ್ತಮ ಸಾಧನೆ ಮಾಡಲಿ ಎಂದರು. ಅಂತರಾಷ್ಟ್ರೀಯ ಕ್ರೀಡಾಪಟು ಹರ್ಕುಲೆಸ್ ಜಿಮ್ ಕೇಂದ್ರದ ಸತೀಶ್ ಖಾರ್ವಿ ಇದ್ದರು.

ಕುಂದಾಪುರದಿಂದ ಮೆರವಣಿಗೆಯಲ್ಲಿ ಸಾಗಿ ಬಂದ ಗುರುರಾಜ್ ಅವರಿಗೆ ತಲ್ಲೂರಿನಲ್ಲಿ ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಅವರ ನೇತೃತ್ವದಲ್ಲಿ ಭವ್ಯ ಸ್ವಾಗತ ಕೋರಲಾಯಿತು. ಬಿಜೆಪಿ ಪಕ್ಷದ ಪ್ರಮುSರು ಹಾಗೂ ಕಾರ್ಯಕರ್ತರು ಮಾಲಾರ್ಪಣೆ ಮಾಡಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.

ಮಾಜಿ ಶಾಸಕರಿಂದ ಸನ್ಮಾನ:
ಹೆಮ್ಮಾಡಿ ಸಮೀಪದ ದೇವಲ್ಕುಂದ ಗ್ರಾಮದ ಪಟ್ಟೆ ವಿನಾಯಕ ದೇವಸ್ಥಾನದಲ್ಲಿ ಗುರುರಾಜ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡ ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ ಗೋಪಾಲ ಪೂಜಾರಿ ಅವರು, ಕಾಮನ್‍ವೆಲ್ತ್ ಸಾಧನೆಗಾಗಿ ಗುರುರಾಜ್ ಅವರಿಗೆ ಸ್ಮರಣಿಕೆ ನೀಡಿ ಅಭಿನಂದಿಸಿದರು. ಕುಂದಾಪುರ ತಾಲೂಕು ಎಪಿಎಂಸಿ ಮಾಜಿ ಅಧ್ಯಕ್ಷರಾದ ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ, ಚಂದ್ರ ನಾಯ್ಕ್ ಅಮೃತ್, ಪಟ್ಟೆ ವಿನಾಯಕ ದೇವಸ್ಥಾನದ ಕಾರ್ಯದರ್ಶಿ ಚಂದ್ರ ಡಿ ಇದ್ದರು.

ಶಾಸಕರಿಂದ ಅಭಿನಂದನೆ:
ವಂಡ್ಸೆ ಸಮೀಪದ ನೆಂಪುವಿನ ತಮ್ಮ ಮನೆಯಲ್ಲಿ ಗುರುರಾಜ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡ ಶಾಸಕ ಬಿಎಂ ಸುಕುಮಾರ್ ಶೆಟ್ಟಿಯವರು ಶಾಲು ಹೊದಿಸಿ ಫಲಪುಷ್ಪ ನೀಡಿ ಸ್ಮರಣಿಕೆಯೊಂದಿಗೆ ಗೌರವಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಗುರುರಾಜ್ ಅವರು ಹುಟ್ಟಿದ ಜಡ್ಡು ಪ್ರದೇಶಕ್ಕೂ ನನಗೂ ಮೂವತ್ತು ವರ್ಷಗಳ ಅವಿನಾಭಾವ ಸಂಬಂಧವಿದೆ. ಪದವಿಪೂರ್ವ ಶಿಕ್ಷಣಕ್ಕಾಗಿ ಕೊಲ್ಲೂರಿನ ಮೂಕಾಂಬಿಕಾ ಕಾಲೇಜಿಗೆ ಸೇರ್ಪಡೆಯಾಗುವ ಸಂದರ್ಭದಲ್ಲಿ ನಾನು ಸಹಕಾರ ನೀಡಿದ ಬಗ್ಗೆ ಹೆಮ್ಮೆಯಿದೆ. ಗ್ರಾಮೀಣ ಭಾಗದ ಜನರು ಬಡತನದ ಕಾರಣಕ್ಕಾಗಿ ಸಣ್ಣ ಪ್ರಾಯದಲ್ಲೇ ಹೊಟೇಲ್ ಮುಂತಾದ ಕೆಲಸಕ್ಕಾಗಿ ಹೋಗುವ ಅನಿವಾರ್ಯತೆಗಳಿತ್ತು. ಆದರೆ ಗುರುರಾಜ್ ಅವರ ಪೆÇೀಷಕರು ಆಸಕ್ತಿಯಿಂದಾಗಿ ಶಿಕ್ಷಣಾಭ್ಯಾಸ ಮುಂದುವರೆಸಿದ್ದರಿಂದಾಗಿ ಇಂದು ಈ ಮಟ್ಟದ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.

ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವುದು ಸಾಮಾನ್ಯದ ಮಾತಲ್ಲ. ಆತ್ಮವಿಶ್ವಾಸ, ಛಲ ಹಾಗೂ ನಿರಂತರ ಪ್ರಯತ್ನಗಳು ಇದ್ದಾಗ ಮಾತ್ರ ಈ ಸಾಧನೆ ಮಾಡಲು ಸಾಧ್ಯ. ಗುರುರಾಜ್ ಅವರಿಗೆ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವರ, ಕೊಲ್ಲೂರು ಶ್ರೀ ಮೂಕಾಂಬಿಕೆ ಹಾಗೂ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಪೂರ್ಣಾನುಗ್ರಹ ಇದ್ದರಿಂದ ಕ್ರೀಡಾ ಕ್ಷೇತ್ರದದಲ್ಲಿ ಈ ಸಾಧನೆ ಮಾಡುತ್ತಿದ್ದಾರೆ. ಸಾವಿರ ಜನರ ಹರಕೆ ಹಾರೈಕೆಗಳಿಂದ ಭವಿಷ್ಯದಲ್ಲಿ ಚಿನ್ನದ ಪದಕ ಪಡೆಯುಂತಾಗಲಿ ಎಂದು ಹಾರೈಸಿದರು.

ಜಿಲ್ಲಾ ಯುವಜನಾಸೇವಾ ಕ್ರೀಡಾಧಿಕಾರಿ ಡಾ. ರೋಶನ್ ಕುಮಾರ್ ಶೆಟ್ಟಿ, ಬಿಜೆಪಿ ಮಂಡಲ ಅಧ್ಯಕ್ಷ ಎನ್ ದೀಪಕ್ ಕುಮಾರ್ ಶೆಟ್ಟಿ, ಜಿ.ಪಂ ಮಾಜಿ ಸದಸ್ಯ ರೋಹಿತ್ ಕುಮಾರ್ ಶೆಟ್ಟಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಗೋಪಾಲಕೃಷ್ಣ ನಾಡ, ಪ್ರಮುಖರಾದ ಪ್ರವೀಣ್ ಕುಮಾರ್ ಶೆಟ್ಟಿ ಕೊಡ್ಲಾಡಿ, ಪ್ರಕಾಶ್ ಪೂಜಾರಿ ಜಡ್ಡು, ಸಾಮ್ರಾಟ್ ಶೆಟ್ಟಿ, ರಕ್ಷಿತ್ ಶೆಟ್ಟಿ ಜಾಡಿ, ಸುಬ್ಬಣ್ಣ ಶೆಟ್ಟಿ ಕೆಂಚನೂರು, ರಾಜು ಶೆಟ್ಟಿ ಕನ್ಯಾನ, ಶರತ್ ಕುಮಾರ್ ಶೆಟ್ಟಿ ನಾಡ, ನಿತಿನ್ ಕುಮಾರ್ ಶೆಟ್ಟಿ ಹುಂಚನಿ, ರಾಜೇಶ್ ಶೆಟ್ಟಿ ಚಿತ್ತೂರು, ರಾಮ ಶೆಟ್ಟಿ ಬಾಳಿಕೆರೆ, ಗುರುರಾಜ್ ಅವರ ಪೆÇೀಷಕರಾದ ಜಡ್ಡು ಮಹಾಬಲ ಪೂಜಾರಿ, ಪದ್ದು ಪೂಜಾರಿ ಹಾಗೂ ಪತ್ನಿ ಸೌಜನ್ಯ ಇದ್ದರು.

Related Posts

Leave a Reply

Your email address will not be published.