ಉಳ್ಳಾಲ ಹನಿಟ್ರಾಪ್ ಪ್ರಕರಣ : ಮಹಿಳೆ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧನ
ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರನ್ನು ಹನಿಟ್ರಾಪ್‌ಗೊಳಪಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಹಿಳೆ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಮಂಗಳೂರಿನ ಕಮೀಷನರ್ ಕಚೇರಿಯಲ್ಲಿ ನಡೆದೆ ಸುದ್ದಿಗೋಷ್ಠಿಯಲ್ಲಿ ಅವರು, ಇನ್‌ಲ್ಯಾಂಡ್‌ಇಂಪಾಲ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ಮಹಿಳೆ ಮತ್ತು ಆಕೆಯ ಸ್ನೇಹಿತ ಪಕ್ಕದ ಮನೆಯ ವ್ಯಕ್ತಿಯೊಬ್ಬರನ್ನು ಪಾರ್ಟಿಯ ನೆಪದಲ್ಲಿ ಮದ್ಯದ ಜತೆ ಅಮಲು ಪದಾರ್ಥ ಬೆರೆಸಿ ಕುಡಿಸಿ ಅವರನ್ನು ವಿವಸ್ತ್ರಗೊಳಿಸಿ ವೀಡಿಯೋ ಮಾಡಿ ಮನೆಯಿಂದ 2.15ಲಕ್ಷ ರೂ. ಹಾಗೂ ಉಂಗುರವನ್ನು ಕಳವು ಮಾಡಿ ಹನಿಟ್ರಾಪ್‌ಗೊಳಪಡಿಸಿರುವ ಬಗ್ಗೆ ದೂರು ದಾಖಲಾಗಿತ್ತು ಎಂದರು.
ದುಬೈನಲ್ಲಿ ಉದ್ಯೋಗದಲ್ಲಿದ್ದು, ವಾಪಾಸಾಗಿದ್ದ ವ್ಯಕ್ತಿಯನ್ನು ಅಝ್ವಿನ್ ಹಾಗೂ ಆತನ ಗೆಳತಿ ಸಫ್ನಾ ಅಲಿಯಾಸ್ ಹತಿಜಮ್ಮ ಎಂಬವರು ಜು. 19ರಂದು ಪಾರ್ಟಿ ಮಾಡುವುದಾಗಿ ಹೇಳಿ ವ್ಯಕ್ತಿಗೆ ಮದ್ಯ ಕುಡಿಸಿದ್ದಾರೆ. ಮದ್ಯಕ್ಕೆ ಅಮಲು ಬರುವ ಪದಾರ್ಥವನ್ನು ಬೆರೆಸಿದ್ದರೆನ್ನಲಾಗಿದ್ದು, ವ್ಯಕ್ತಿ ಮೂರ್ಚೆ ಹೋದ ಬಳಿಕ ಆತನನ್ನು ವಿವಸ್ತ್ರಗೊಳಿಸಿ ಮನೆಯ ಕಪಾಟುವಿನಲ್ಲಿದ್ದ2.12 ಲಕ್ಷ ರೂ. ನಗದುಹಾಗೂ ವ್ಯಕ್ತಿಯ ಕೈಯ್ಯಲ್ಲಿದ್ದ ನವರತ್ನದ ಉಂಗುರವನ್ನು ಎಗರಿಸಿದ್ದರು. ಮರುದಿನ ವಂಚನೆಗೊಳಗಾಗಿದ್ದ ವ್ಯಕ್ತಿ ಅಝ್ವೀನ್ ಮನೆಗೆ ಹೋಗಿ ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ಹೇಳಿದದಾರೆ. ಈ ಸಂದರ್ಭ ಆರೋಪಿಗಳು ಹಣವನ್ನು ನಾಳೆ ಕೊಡುವುದಾಗಿ ಹೇಳಿದ್ದಲ್ಲದೆ, ದೂರು ನೀಡದಂತೆ ನಂಬಿಸಿದ್ದರು. ಆದರೆ ಮತ್ತೆ ಆರೋಪಿಗಳು ಆ ವ್ಯಕ್ತಿಯ ಮನೆಗೆ ಹೋಗಿ, ಮೊಬೈಲ್‌ನಲ್ಲಿ ವೀಡಿಯೋ ಚಿತ್ರೀಕರಣವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಬೆದರಿಕೆಯೊಡ್ಡಿದ್ದಾರೆ. ಮಾತ್ರವಲ್ಲದೆ ತನ್ನ ತಂಗಿಯ ಬಲಾತ್ಕಾರಕ್ಕೆ ಯತ್ನಿಸಿರುವುದಾಗಿ ಪ್ರಕರಣ ದಾಖಲಿಸುವುದಾಗಿಯೂ ಬೆದರಿಕೆಯೊಡ್ಡಿದ್ದಾರೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಪೊಲೀಸರು ಇನ್‌ಲ್ಯಾಂಡ್ ಅಪಾರ್ಟ್‌ಮೆಂಟ್ ನಿವಾಸಿ ಅಝ್ವೀನ್ ಸಿ ಹಾಗೂ ಬೈಕಂಪಾಡಿ ಜೋಕಟ್ಟೆಯ ಕೆಬಿಎಸ್ ಬೊಟ್ಟು ಹೌಸ್ ನಿವಾಸಿ ಹತೀಜಮ್ಮ ಅಲಿಯಾಸ್ ಸಫ್ನಾ ಎಂಬವರನ್ನು ಬಂಧಿಸಿದ್ದಾರೆ ಎಂದು ಆಯುಕ್ತರು ತಿಳಿಸಿದರು.
ಹನಿಟ್ರಾಪ್ ಪ್ರಕರಣಗಳು ಬಹಳಷ್ಟು ನಡೆಯುತ್ತಿದ್ದು, ಕೆಲವರು ಗೌರವ ಹಾಳಾಗುವ ದೃಷ್ಟಿಯಿಂದ ದೂರು ನೀಡಲು ಹಿಂಜರಿಯುವ ಮೂಲಕ ಮತ್ತಷ್ಟು ತೊಂದರೆಗೊಳಗಾಗುತ್ತಾರೆ. ಇಂತಹ ಪ್ರಕರಣಗಳಲ್ಲಿ ದೂರು ಅಥವಾ ಮಾಹಿತಿಯನ್ನು ನೀಡಿದರೆ ಗೌಪ್ಯತೆಯನ್ನು ಕಾಪಾಡಿಕೊಂಡು ತನಿಖೆ ನಡೆಸುವುದಾಗಿ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದರು