ಕುಂದಾಪುರ: ಚಟುವಟಿಕೆಗಳಿಲ್ಲದೇ ಪಾಳು ಬಿದ್ದಿದೆ ಗೋಪಾಡಿ ಅಂಬೇಡ್ಕರ್ ಭವನ: ತನಿಖೆಗಾಗಿ ದಸಂಸ ಆಗ್ರಹ

ದಲಿತರಿಗಾಗಿಯೇ ಆಳುವ ಸರ್ಕಾರಗಳು ತರುತ್ತಿರುವ ಹೊಸ-ಹೊಸ ಯೋಜನೆಗಳು ಉಳ್ಳವರ ಪಾಲಾಗುತ್ತಿವೆ ಎಂಬ ಆರೋಪಗಳು ಆಗಾಗೆ ಕೇಳಿ ಬರುತ್ತಲೇ ಇವೆ. ಗೋಪಾಡಿಯಲ್ಲಿ ಕಳೆದ ಆರು ವರ್ಷಗಳ ಹಿಂದೆ ನಿರ್ಮಾಣಗೊಂಡ ಅಂಬೇಡ್ಕರ್ ಭವನ ಈ ಆರೋಪಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ. ಈ ಕುರಿತಾದ ಸ್ಪೆಶಲ್ ರಿಪೋರ್ಟ್ ನೋಡಿ.

ದಲಿತರ ಸಬಲೀಕರಣಕ್ಕಾಗಿ ಸರ್ಕಾರ ನಾನಾ ಯೋಜನೆಗಳನ್ನು ಹೊರತರುತ್ತಿದೆ. ಅತ್ಯಂತ ತೀರ ಹಿಂದುಳಿದ ದಲಿತ ಸಮಾಜದ ಕಾರ್ಯ ಚಟುವಟಿಕೆಗಳಿಗೆ ಆಯಾ ಗ್ರಾ.ಪಂ ವ್ಯಾಪ್ತಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಿ ದಲಿತ ಸಮಾಜದ ಸಾಂಸ್ಕೃತಿಕ, ಇನ್ನಿತರ ಚಟುವಟಿಕೆಗಳಿಗೆ ವೇದಿಕೆ ಕಲ್ಪಿಸಿ ಕೊಡುತ್ತಿದೆ. ಆದರೆ ಕುಂದಾಪುರ ವಿಧಾನಸಭಾ ವ್ಯಾಪ್ತಿಯ ಗೋಪಾಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡ ಅಂಬೇಡ್ಕರ್ ಭವನ ದಲಿತರಿಗೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ಹೌದು.. ಗೋಪಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಪಡುಚಾವಡಿಬೆಟ್ಟುವಿನಲ್ಲಿ 12 ಲಕ್ಷ ರೂ. ವೆಚ್ಚದಲ್ಲಿ ಕೆ.ಆರ್.ಐ.ಡಿ.ಎಲ್ ಇಲಾಖೆಯಿಂದ 2016-17ನೇ ಸಾಲಿನ ಪರಿಶಿಷ್ಟಜಾತಿ ಯೋಜನೆಯಡಿ ನಿರ್ಮಾಣಗೊಂಡ ಅಂಬೇಡ್ಕರ್ ಭವನ ಇಂದಿಗೂ ಏನೂ ಕಾರ್ಯಚಟುವಟಿಕೆಗಳು ನಡೆಯದೇ ಹಾಗೆಯೇ ಪಾಳು ಬಿದ್ದಿದೆ.

ಸರ್ಕಾರದ ನೀತಿ-ನಿಯಮಗಳನ್ನು ಗಾಳಿಗೆ ತೂರಿ ಭವನ ನಿರ್ಮಾಣ ಮಾಡಲಾಗಿದೆ. ಬಹುತೇಕ ಪರಿಶಿಷ್ಟಜಾತಿ-ಪಂಗಡ ಸಮುದಾಯದವರು ವಾಸಿಸುವ ಕೇರಿಯಲ್ಲಿ ಅಂಬೇಡ್ಕರ್ ಭವನ ನಿರ್ಮಿಸಿ ಅವರ ಕಾರ್ಯಚಟುವಟಿಕೆಗಳಿಗೆ ಅವಕಾಶ ಮಾಡಿಕೊಡುವುದು ಈ ಯೋಜನೆಯ ಸದುದ್ದೇಶ. ಆದರೆ ಗೋಪಾಡಿಯ ಪಡುಚಾವಡಿಬೆಟ್ಟುವಿನ ಅಂಬೇಡ್ಕರ್ ಭವನ ದಲಿತ ಕೇರಿಯಿಂದ ದೂರ ಇತರೆ ಸಮುದಾಯದವರು ನೆಲೆಸಿರುವ ಕೇರಿಯಲ್ಲಿ ನಿರ್ಮಿಸಿದ್ದರಿಂದ ಈ ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ.

ಗೋಪಾಡಿಯ ಪಡುಚಾವಡಿಬೆಟ್ಟುವಿನಲ್ಲಿ ನಿರ್ಮಾಗೊಂಡ ಅಂಬೇಡ್ಕರ್ ಭವನಕ್ಕೆ ಸೂಕ್ತವಾದ ರಸ್ತೆ ಇಲ್ಲ. ಸಮೀಪದ ಮೂರು ಮನೆಯವರು ತಮ್ಮ ಸ್ವಂತ ಹಣದಿಂದ ತಮ್ಮ ಮನೆಗಳಿಗೆ ಖಾಸಗಿ ರಸ್ತೆ ನಿರ್ಮಿಸಿಕೊಂಡಿದ್ದಾರೆ. ವಿಶಾಲವಾದ ಸರ್ಕಾರಿ ಜಾಗದಲ್ಲಿ ನಿರ್ಮಿಸಬೇಕಿದ್ದ ಭವನ ಕನಿಷ್ಠ ಆರು ಸೆಂಟ್ಸ್ ಜಾಗದಲ್ಲಿ ಒತ್ತೊತ್ತಾಗಿ ನಿರ್ಮಿಸಲಾಗಿದೆ. ಅಲ್ಲದೇ ಸ್ಥಳೀಯರ ವಿರೋಧ ಹಿನ್ನೆಲೆಯಲ್ಲಿ ವಿದ್ಯುತ್ ಸಂಪರ್ಕವನ್ನೂ ಕೊಟ್ಟಿಲ್ಲ. ಮೇಲ್ನೋಟಕ್ಕೆ ಗಮನಿಸಿದರೆ ಇಲಾಖೆಯ ಹಣ ಗುತ್ತಿಗೆದಾರರ ಜೇಬು ತುಂಬಿಸಲು ಮಾತ್ರವೇ ಈ ಭವನ ನಿರ್ಮಾಣವಾಗಿದೆ ಎನ್ನುವುದು ಖಾತ್ರಿಯಾಗುತ್ತದೆ.

ಇತರೆ ಸಮುದಾಯದ ಕುಟಂಬಗಳು ವಾಸಿಸುವ ಪಡುಚಾವಡಿಬೆಟ್ಟುವಿನಲ್ಲಿ ಅಂಬೇಡ್ಕರ್ ಭವನ ನಿರ್ಮಾಣವಾಗುವ ಆರಂಭದಲ್ಲಿ ಇಲ್ಲಿನ ಸ್ಥಳೀಯ ನಿವಾಸಿಗಳು ತಡೆ ಹಿಡಿದಿದ್ದರೆನ್ನಲಾಗಿದೆ. ಆಗಿನ ಪಂಚಾಯತ್ ಆಡಳಿತ ಮತ್ತು ಅಧಿಕಾರಿಗಳು, ಗುತ್ತಿಗೆದಾರರು ಸ್ಥಳೀಯರಿಗೆ ಸಮುದಾಯ ಭವನ ಎಂದು ಸುಳ್ಳು ಹೇಳಿ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಸಂಪೂರ್ಣ ಕಟ್ಟಡ ನಿರ್ಮಾಗೊಂಡ ಬಳಿಕ ಅಂಬೇಡ್ಕರ್ ಭವನ ಎಂದು ಹೆಸರಿಡುವಾಗಷ್ಟೇ ಆಡಳಿತ ಮತ್ತು ಅಧಿಕಾರಿಗಳು, ಗುತ್ತಿಗೆದಾರರು ಸುಳ್ಳು ಹೇಳಿರುವುದು ಸ್ಥಳೀಯರಿಗೆ ಅರಿವಾಗಿದೆ.

ಪಡುಚಾವಡಿಬೆಟ್ಟುವಿನಲ್ಲಿ ನಿರ್ಮಾಗೊಂಡ ಅಂಬೇಡ್ಕರ್ ಭವನಕ್ಕೆ ಸೂಕ್ತ ಸರ್ಕಾರಿ ರಸ್ತೆ ಇಲ್ಲ. ಭವನಕ್ಕೆ ಬರಬೇಕಾದರೆ ಖಾಸಗಿ ರಸ್ತೆಯಲ್ಲಿಯೇ ಬರಬೇಕು. ಈ ಭಾಗದಲ್ಲಿ ಸೌಹಾರ್ದಯುತವಾಗಿ ಬದುಕುವ ದಲಿತರು ಹಾಗೂ ಇತರೆ ಸಮುದಾಯದವರ ಮಧ್ಯೆ ಜಗಳ ತಂದಿಡುವ ಉದ್ದೇಶದಿಂದ ಈ ಭವನ ನಿರ್ಮಿಸಿದ್ದಾರೆ ಎನ್ನುವುದು ಈ ಭಾಗದ ದಲಿತ ಮುಖಂಡರ ಆರೋಪ. ಅಲ್ಲದೇ ಗೋಪಾಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ದಲಿತರು ವಾಸಿಸುವ ಸ್ಥಳದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ಸಾಕಷ್ಟು ಜಾಗಗಳಿವೆ. ಆದರೂ ಈ ಭವನ ದಲಿತರಿಂದ ದೂರ ಇಡುವ ಹುನ್ನಾರದಲ್ಲಿ ನಿರ್ಮಾಣ ಮಾಡಲಾಗಿದೆ ಎಂದೂ ಆರೋಪಿಸಿದ್ದಾರೆ.

ಒಟ್ಟಿನಲ್ಲಿ ಈ ಭವನ ನಿರ್ಮಾಣದ ಹಿಂದಿನ ಉದ್ದೇಶವಾದರೂ ಏನು ಎನು ಎನ್ನುವುದು ತನಿಖೆಯ ಬಳಿಕಷ್ಟೇ ತಿಳಿಯಬೇಕಿದೆ.

Related Posts

Leave a Reply

Your email address will not be published.