ಮಾಧ್ಯಮ ಕ್ಷೇತ್ರದಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಸುದೀರ್ಘ ಸೇವೆ ಸಲ್ಲಿಸಿರುವ ಹಿರಿಯ ಕ್ರೀಡಾ ಬರಹಗಾರ ಎಸ್. ಜಗದೀಶ್ಚಂದ್ರ ಅಂಚನ್ ಸೂಟರ್ ಪೇಟೆ ಅವರು ಪ್ರತಿಷ್ಠಿತ ’ಬಸವಶ್ರೀ’ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಬೆಂಗಳೂರಿನ ಶ್ರೀ ಜ್ಞಾನ ಮಂದಾರ ಎಜುಕೇಶನಲ್ ಮತ್ತು ಸಾಂಸ್ಕೃತಿಕ ಟ್ರಸ್ಟ್‌ನ ಬೆಳ್ಳಿ ಹಬ್ಬದ ಸಂಭ್ರಮದ ಅಂಗವಾಗಿ ಈ ಬಾರಿಯ ’ಬಸವಶ್ರೀ’ ರಾಜ್ಯ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ಕ್ರೀಡಾ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್ ಅವರನ್ನು ಆಯ್ಕೆ ಮಾಡಲಾಗಿದೆ.
ಕಳೆದ 32 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಜಗದೀಶ್ಚಂದ್ರ ಅಂಚನ್ ಅವರು, ಇದುವರೆಗೆ 4,500ಕ್ಕೂ ಅಧಿಕ ಕ್ರೀಡಾ ಲೇಖನಗಳು ಹಾಗೂ ಅಂಕಣಗಳನ್ನು ಬರೆದಿದ್ದಾರೆ. ಇವರ ವಿಶ್ಲೇಷಣಾತ್ಮಕ ಬರಹಗಳು ಜಿಲ್ಲೆ, ರಾಜ್ಯ ಹಾಗೂ ಅಂತರರಾಜ್ಯ ಮಟ್ಟದ ಪ್ರಮುಖ ಕನ್ನಡ ದಿನಪತ್ರಿಕೆ, ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳಲ್ಲಿ ಪ್ರಕಟಗೊಂಡು ಅಪಾರ ವಾಚಕರ ಮೆಚ್ಚುಗೆ ಗಳಿಸಿವೆ. ಕ್ರೀಡಾ ಕ್ಷೇತ್ರದ ಜತೆಗೆ ಸಾಹಿತ್ಯ ಕ್ಷೇತ್ರದಲ್ಲೂ ತೊಡಗಿಸಿಕೊಂಡಿರುವ ಇವರು, ಇತ್ತೀಚೆಗಷ್ಟೇ ’ತ್ಯಾಗಮಯಿ ಮೋಹನ್’ ಎಂಬ ಕೃತಿಯನ್ನೂ ಲೋಕಾರ್ಪಣೆಗೊಳಿಸಿದ್ದಾರೆ.
ಇವರ ಅನುಪಮ ಕ್ರೀಡಾ ಸಾಹಿತ್ಯ ಸೇವೆಯನ್ನು ಗುರುತಿಸಿ ಈಗಾಗಲೇ ಹಲವು ರಾಜ್ಯ ಮತ್ತು ಅಂತರರಾಜ್ಯ ಮಟ್ಟದ ಪುರಸ್ಕಾರಗಳು ಲಭಿಸಿವೆ. ಇದೀಗ ಟ್ರಸ್ಟ್‌ನ ಬೆಳ್ಳಿ ಹಬ್ಬದ ಸಮಾರೋಪ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.
ಆಗಸ್ಟ್ 29ರಂದು ಬೆಂಗಳೂರಿನ ಜಿ.ಎಸ್.ಎನ್. ಸಭಾಂಗಣದಲ್ಲಿ ನಡೆಯಲಿರುವ ವೈಭವೋಪೇತ ಸಮಾರಂಭದಲ್ಲಿ ಎಸ್. ಜಗದೀಶ್ಚಂದ್ರ ಅಂಚನ್ ಅವರಿಗೆ ’ಬಸವಶ್ರೀ’ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಟ್ರಸ್ಟ್‌ನ ಕಾರ್ಯದರ್ಶಿ ಹೆಚ್. ಸೋಮಶೇಖರ್ ತಿಳಿಸಿದ್ದಾರೆ.

