ಕುಂದಾಪುರ: ತಲವಾರಿನಿಂದ ಹಲ್ಲೆ: ಗಾಯಾಳು ಯುವಕರು ಆಸ್ಪತ್ರೆಗೆ ದಾಖಲು
ಕುಂದಾಪುರ: ಬಾರ್ ಮ್ಯಾನೇಜರೋರ್ವರಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಜರಿಗಾಗಿ ಸ್ಥಳಕ್ಕೆ ತೆರಳಿದ್ದ ವೇಳೆ ಆರೋಪಿಗಳ ತಂಡ ಏಕಾಏಕಿಯಾಗಿ ತಲವಾರು ದಾಳಿ ನಡೆಸಿದ ಪರಿಣಾಮ ಇಬ್ಬರು ಯುವಕರು ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ಶುಕ್ರವಾರ ನಡೆದಿದೆ.ತಲವಾರು ದಾಳಿಗೊಳಗೊಳಗಾದ ಕಾಲ್ತೋಡು ನಿವಾಸಿ ರವಿ ಶೆಟ್ಟಿ ಹಾಗೂ ಪ್ರಶಾಂತ್ ಶೆಟ್ಟಿ ಇದೀಗ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬುಧವಾರ ಶಿರೂರು ಗ್ರಾಮದ ನೀರ್ಗದ್ದೆಯ ಸಿಲ್ವರ್ ಅರ್ಚ್ ಫ್ಯಾಮಿಲಿ ಬಾರ್ & ರೆಸ್ಟೊರೆಂಟ್ ಗೆ ಬಂದಿದ್ದ ಕಿರಣ್ ಪೂಜಾರಿ ಹಾಗೂ ಅಶೋಕ್ ಎಂಬವರು ಬಾರ್ ಮ್ಯಾನೇಜರ್ ಅಶ್ವೀಜ್ ಶೆಟ್ಟಿ ಬಳಿ ಹಫ್ತಾ ಕೊಡುವಂತೆ ಬೆದರಿಕೆಯೊಡ್ಡಿದ್ದಾರೆ. ಈ ವೇಳೆಯಲ್ಲಿ ಮ್ಯಾನೇಜರ್ ಹಾಗೂ ಆರೋಪಿಗಳ ಮಧ್ಯೆ ವಾಗ್ವಾದ ನಡೆದಿದ್ದು ಕಿರಣ್ ಪೂಜಾರಿ ಹಾಗೂ ಅಶೋಕ್ ಏಕಾಏಕಿ ಬಾಟಲಿಯಿಂದ ಅಶ್ವಿಜ್ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆಯೊಡ್ಡಿದ್ದಾರೆ ಎಂದು ಅಶ್ವಿಜ್ ಬೈಂದೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು.ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಜರಿಗಾಗಿ ಬಾರ್ ಮಾಲೀಕ ಕಾಲ್ತೋಡು ನಿವಾಸಿ ಅಣ್ಣಪ್ಪ ಶೆಟ್ಟಿಯವರು ತಮ್ಮ ಸ್ನೇಹಿತರಾದ ರವಿ ಶೆಟ್ಟಿ, ಪ್ರಶಾಂತ್ ಶೆಟ್ಟಿ ಸ್ಥಳಕ್ಕೆ ತೆರಳಿದ್ದರು. ಹಿಂಬದಿ ಕಾರಿನಲ್ಲಿ ಅಣ್ಣಪ್ಪ ಶೆಟ್ಟಿಯವರ ಸ್ನೇಹಿತರು ಇಳಿಯುತ್ತಿರುವುದನ್ನು ಗಮನಿಸಿದ ಆರೋಪಿಗಳಾದ ಕಿರಣ್ ಪೂಜಾರಿ, ಅಶೋಕ ದೇವಾಡಿಗ ನೇರವಾಗಿ ಅಣ್ಣಪ್ಪ ಶೆಟ್ಟಿಯವರ ಸ್ನೇಹಿತರೊಂದಿಗೆ ಜಗಳಕ್ಕಿಳಿದಿದ್ದಾರೆ. ನೀವು ಅಣ್ಣಪ್ಪ ಶೆಟ್ಟಿಯವರ ಪರವಾಗಿ ಬಂದಿದ್ದೀರಾ ಎಂದು ಅವಾಚ್ಯವಾಗಿ ಬೈದು ಅವರ ಪರವಾಗಿ ಬಂದರೆ ನಿಮ್ಮನ್ನೂ ಕೂಡ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಅಲ್ಲಿಯೇ ಹೊಟೇಲ್ ಬದಿಯಲ್ಲಿ ಈ ಮೊದಲೇ ತಂದಿರಿಸಿದ್ದ ತಲವಾರು ಹಾಗೂ ಹಾರೆಯಿಂದ ರವಿ ಶೆಟ್ಟಿ, ಪ್ರಶಾಂತ ಶೆಟ್ಟಿ ಹಾಗೂ ಅಕ್ಷಯ ಆಚಾರ್ಯ ಅವರ ಮೇಲೆ ಹಲ್ಲೆ ಮುಂದಾಗಿದ್ದಾರೆ. ಆರೋಪಿಗಳು ಕೊಲೆ ಮಾಡುವ ಉದ್ದೇಶದಿಂದಲೇ ತಲವಾರನ್ನು ಬೀಸಿದ್ದು ಈ ಸಮಯ ರವಿ ಶೆಟ್ಟಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ತಲವಾರು ರವಿ ಶೆಟ್ಟಿ ಬೆನ್ನಿಗೆ ತಗುಲಿ ಗಾಯಗಳಾಗಿವೆ. ಘಟನೆಯ ವೇಳೆ ಪ್ರಶಾಂತ್ ಶೆಟ್ಟಿಯವರಿಗೂ ಗಾಯಗಳಾಗಿವೆ.ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ