ಕುಲಶೇಖರದ ಕೊಂಗೂರಿನಲ್ಲಿ ಗುಡ್ಡ ಕುಸಿತ: ರೈಲ್ವೇ ಹಳಿಯ ಮೇಲೆ ಬಿದ್ದ ಮಣ್ಣು: ರೈಲು ಸಂಚಾರ ಸ್ಥಗಿತ
ಕರಾವಳಿಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮಂಗಳೂರು ನಗರದ ಕುಲಶೇಖರದ ಬಳಿಯ ಕೊಂಗೂರಿನಲ್ಲಿ ಗುಡ್ಡ ಕುಸಿತವಾಗಿದ್ದು, ರೈಲ್ವೆಯ ಹಳಿಯ ಮೇಲೆ ಮಣ್ಣು ಬಿದ್ದಿದೆ. ಇದರಿಂದಾಗಿ ರೈಲ್ವೆ ಸಂಚಾರ ಸ್ಥಗಿತಗೊಂಡಿದೆ.
ಕುಲಶೇಖರದ ಬಳಿಯಲ್ಲಿ ರೈಲ್ವೆ ಇಲಾಖೆ ರೈಲ್ವೆಹಳಿ ಪಕ್ಕದಲ್ಲಿ ತಡೆಗೋಡೆಯನ್ನು ನಿರ್ಮಾಣ ಮಾಡುತ್ತಿದೆ. ಆದ್ರೆ ಭಾರೀ ಮಳೆಯ ಹಿನ್ನೆಲೆಯಲ್ಲಿ ಗುಡ್ಡ ಕುಸಿದು, ನಿರ್ಮಾಣಗೊಂಡಿದ್ದ ತಡೆಗೋಡೆ ಕಾಮಗಾರಿ ಕುಸಿದು ಬಿದ್ದಿದೆ. ಅಲ್ಲದೇ ಭಾರೀ ಪ್ರಮಾಣದಲ್ಲಿ ಗುಡ್ಡದ ಮಣ್ಣು ರೈಲ್ವೆ ಹಳಿಯ ಮೇಲೆ ಬಿದ್ದ ಪರಿಣಾಮ ರೈಲ್ವೆ ಸಂಚಾರಕ್ಕೆ ತೊಡಕಾಗಿದೆ. ಮುಂಬೈ ಮಂಗಳೂರು ನಡುವಿನ ರೈಲ್ವೆ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಮುಂಜಾನೆಯಿಂದಲೇ ಯಾವುದೇ ರೈಲುಗಳು ಸಂಚಾರ ನಡೆಸಿಲ್ಲ. ಮಣ್ಣು ತೆರವು ಮಾಡಿದ್ರೆ ಮತ್ತೆ ಗುಡ್ಡ ಕುಸಿಯುವ ಭೀತಿಯಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಕಾಮಗಾರಿ ಆರಂಭಿಸಲು ಮುಂದಾಗಿದ್ದಾರೆ.