ಕೋವಿಡ್ ನಿಯಮಾವಳಿ ಮೀರಿ ಪ್ರತಿಭಟನೆ ನಡೆಸಿದ್ದರೆ ಕ್ರಮ : ಪುತ್ತೂರು ಎ.ಸಿ. ಡಾ. ಯತೀಶ್ ಉಳ್ಳಾಲ್ ಎಚ್ಚರಿಕೆ
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಪ್ರಸ್ತುತ ಕೋವಿಡ್ 19 ಸೋಂಕು ನಿಯಂತ್ರಣಕ್ಕೆ ಸಂಬಂಧ ಸರಕಾರದ ಆದೇಶದನ್ವಯ ಮತ್ತು ಜಿಲ್ಲೆಯ ಪ್ರಸ್ತುತ ವಿದ್ಯಮಾನಗಳನ್ನು ಅವಲೋಕಿಸಿ ಕೋವಿಡ್ 19 ಪ್ರಸರಣವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಕಲಂ 34 ಹಾಗೂ ದಂಡ ಪ್ರಕ್ರಿಯಾ ಸಂಹಿತೆ 1973 ರ ಕಲಂ 144(3) ರಂತೆ ನಿರ್ಬಂಧಗಳನ್ನು ಹೊರಡಿಸಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ಆದೇಶಿಸಿರುವುದಾಗಿದೆ ಎಂದು ಸಹಾಯಕ ಕಮೀಷನರ್ ಡಾ.ಯತೀಶ್ ಉಳ್ಳಾಲ್ ತಿಳಿಸಿದ್ದಾರೆ.
ಕೋವಿಡ್ 19 ಸೋಂಕು ನಿಯಂತ್ರಣ ಸಂಬಂಧ ನೀಡಿರುವ ನಿರ್ದೇಶನದಂತೆ ಪುತ್ತೂರು ನಗರ ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರದೇಶದಲ್ಲಿ ಹೆಚ್ಚಿನ ಜನ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಲು ಅವಕಾಶವಿರುವುದಿಲ್ಲ. ಪ್ರತಿಭಟನೆ ಮಾಡಿದರೆ ಕೋವಿಡ್ ನಿಯಾಮಾವಳಿಯನ್ನು ಮೀರಿದಾಂತಗಾಗುತ್ತದೆ ಹಾಗೂ ಕೋವಿಡ್ ಸೋಂಕು ಹೆಚ್ಚಿನ ಸಂಖ್ಯೆಯಲ್ಲಿ ಹರಡುವ ಸಾಧ್ಯತೆ ಇರುತ್ತದೆ.
ಆದುದರಿಂದ, ಕೋವಿಡ್ ನಿಯಾಮಾವಳಿಯನ್ನು ಮೀರಿ ಪುತ್ತೂರು ನಗರ ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಯಾವುದೇ ಸಂಘಟನೆ ಅಥವಾ ಸಂಘ ಸಂಸ್ಥೆಗಳ ವತಿಯಿಂದ ಯಾವುದೇ ರೀತಿಯ ಸಂಘಟನಾ ಕಾರ್ಯಕ್ರಮ ಹಾಗೂ ಪ್ರತಿಭಟನೆಯನ್ನು ನಡೆಸದಂತೆ ಈ ಮೂಲಕ ತಿಳಿಯಪಡಿಸಿದೆ. ಆದಾಗ್ಯೂ ಯಾವುದೇ ಸಂಘಟನೆ ಅಥವಾ ಸಂಘ ಸಂಸ್ಥೆಗಳು ಪ್ರತಿಭಟನೆಯನ್ನು ನಡೆಸಿದ್ದು ಕಂಡು ಬಂದಲ್ಲಿ ಕಟ್ಟು ನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಕಮೀಷನರ್ ಡಾ.ಯತೀಶ್ ಉಳ್ಳಾಲ್ ಸೂಚಿಸಿದ್ದಾರೆ.