ಗಾಂಜಾ ಜೊತೆ ಸಿಕ್ಕಿಬಿದ್ದ ಕಳ್ಳರು : ವಿಟ್ಲ ಪೊಲೀಸರ ಕಾರ್ಯಾಚರಣೆ
ಪೊಲೀಸ್ ತಪಸಾಣೆ ವೇಳೆ ತಪ್ಪಿಸಿಕೊಳ್ಳಲು ಹೋಗಿ ರಿಕ್ಷಾವೊಂದು ಪಲ್ಟಿಯಾಗಿದ್ದು, ವಿಚಾರಣೆ ನಡೆಸಿದಾಗ ರಿಕ್ಷಾದಲ್ಲಿದ್ದ ಗಾಂಜಾ ಜೊತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಸಜಿಪಮೂಡ ಗ್ರಾಮದ ಸುಭಾಶ್ ನಗರ ನಿವಾಸಿ ಅಸೀಫ್ ಯಾನೆ ಅಚಿ (28) ಸವಣೂರು ಗ್ರಾಮದ ಚಾಪಳ್ಳ ನಿವಾಸಿ ಫರಾಝ್ (23) ಎಂದು ಗುರುತಿಸಲಾಗಿದೆ.
ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಕಾಶಿಮಠ ಎಂಬಲ್ಲಿ ವಾಹನ ತಪಾಸಣೆ ಮಾಡುತ್ತಿರುವಾಗ ಉಕ್ಕುಡ ಕಡೆಯಿಂದ ವಿಟ್ಲ ಪೇಟೆ ಕಡೆಗೆ ಒಂದು ಆಟೋ ರಿಕ್ಷಾವನ್ನು ತಡೆದಿದ್ದಾರೆ. ಆದರೆ ಪೊಲೀಸರನ್ನು ನೋಡಿದ ಆಟೋ ರಿಕ್ಷಾ ಚಾಲಕನು ಒಮ್ಮೆಲೇ ಆಟೋ ರಿಕ್ಷಾವನ್ನು ತಿರುಗಿಸಿದ ಕಾರಣ ಆಟೋ ರಿಕ್ಷಾವು ಚಾಲಕನ ಹತೋಟಿ ಪಲ್ಟಿಯಾಗಿದೆ. ಕೂಡಲೇ ಆಟೋದಲ್ಲಿದ್ದ ಚಾಲಕ ಹಾಗೂ ಇನ್ನೊಬ್ಬ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು. ಪೊಲೀಸರು ಇಬ್ಬರನ್ನು ಹಿಡಿದಿದ್ದಾರೆ. ನಂತರ ವಿಚಾರಣೆ ನಡೆಸಿದಾಗ ಆಟೋ ರಿಕ್ಷಾದಲ್ಲಿ ಗಾಂಜಾ ಇರುವುದನ್ನು ತಿಳಿಸಿ ಆಟೋ ರಿಕ್ಷಾದ ಬಳಿ ಬಂದು ಚಾಲಕನ ಸೀಟಿನ ಅಡಿಯಲ್ಲಿದ್ದ ಒಂದು ಕಟ್ಟನ್ನು ತೆಗೆದು ಇದು ಗಾಂಜಾದ ಕಟ್ಟು ಎಂದು ತೋರಿಸಿ ಇದನ್ನು ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ಬಂಧಿತರಿಂದ ಸುಮಾರು60 ಸಾವಿರ ಮೌಲ್ಯದ 2.060 ಕೆ.ಜಿ ಗಾ೦ಜಾವನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.