“ಟಿಪ್ಪು ಸುಲ್ತಾನ್-ಮಹಾನ್ ರಾಷ್ಟ್ರೀಯವಾದಿ ಮತ್ತು ಹುತಾತ್ಮ” ಕೃತಿ ಬಿಡುಗಡೆ ಸಮಾರಂಭ
ಬೆಂಗಳೂರು: ಬ್ರಿಟಿಷರ ಏಜೆಂಟ್ ಆಗಿ ಕೆಲಸ ಮಾಡಿದವರೇ ಇಂದು ಟಿಪ್ಪು ಸುಲ್ತಾನ್ರವರನ್ನು ದೇಶದ್ರೋಹಿ ಎನ್ನುತ್ತಿದ್ದಾರೆ. ರಾಜ್ಯ ಮತ್ತು ರಾಷ್ಟ್ರಕ್ಕೆ ಟಿಪ್ಪು ಕೊಟ್ಟ ಕೊಡುಗೆಯನ್ನು ಯಾರಿಗೂ ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ರಾಜ್ಯಸಭಾ ಮಾಜಿ ಸದಸ್ಯ, ಹಾಲಿ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಪ್ರೊ.ಬಿ.ಪಿ.ಮಹೇಶ್ ಚಂದ್ರ ಗುರು ಅವರು ಬರೆದು, ಸ್ತುತಿ ಪಬ್ಲಿಕೇಷನ್ಸ್ ಹೊರ ತಂದಿರುವ “ಟಿಪ್ಪು ಸುಲ್ತಾನ್-ಮಹಾನ್ ರಾಷ್ಟ್ರೀಯವಾದಿ ಮತ್ತು ಹುತಾತ್ಮ”ಕೃತಿ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಾತ್ಮಗಾಂಧಿ ದೇಶದ ಸ್ವಾತಂತ್ರ್ಯಕ್ಕಾಗಿ ಮಾಡಿದಷ್ಟೇ ತ್ಯಾಗವನ್ನೂ ಟಿಪ್ಪು ಕೂಡ ಮಾಡಿದ್ದಾರೆ. ಮಾತ್ರವಲ್ಲ, ದೇಶಕ್ಕಾಗಿ ಟಿಪ್ಪು ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ಹಿಂದೂ ಧರ್ಮದ ಕರ್ಮಠ ಅನುಯಾಯಿಯಾಗಿದ್ದ ಮಹಾತ್ಮಗಾಂಧಿಯವರನ್ನು ಕೊಂದಿದ್ದು ಓರ್ವ ಮುಸ್ಲಿಮ್ ಲೀಗ್ ಕಾರ್ಯಕರ್ತನೋ, ಮುಸ್ಲಿಮನೋ ಆಗಿರಲಿಲ್ಲ. ಹಿಂದುತ್ವವಾದಿಯೊಬ್ಬ ಮಹಾತ್ಮ ಗಾಂಧಿಯವರನ್ನು ಕೊಂದಿದ್ದಾನೆ. ಗಾಂಧಿಯ ಸರ್ವಧರ್ಮ ಸಹಿಷ್ಣುತೆ, ಉದಾತ್ತ ಚಿಂತನೆಗಳು ಹಿಂದುತ್ವವಾದಿಗಳಿಗೆ ಸಹಿಸಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು.
ದೇಶದಲ್ಲಿ 562 ರಾಜ ಮಹಾರಾಜರುಗಳು ಆಳುತ್ತಿದ್ದಾಗ ದೇಶದ ಸ್ವಾತಂತ್ರ್ಯ ಸಂಗ್ರಾಮದ ನಾಯಕತ್ವವನ್ನು ವಹಿಸಿಕೊಂಡಿದ್ದು ಮುಸ್ಲಿಮ್ ರಾಜ ಬಹದ್ದೂರ್ ಶಾ ಝಫರ್ ಆಗಿದ್ದರು. ಈ ದೇಶಕ್ಕೆ ಮುಸ್ಲಿಮರು ನೀಡಿದ ಕೊಡುಗೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಕಾಮಾಲೆ ಕಣ್ಣಿನವರಿಗೆ ಎಲ್ಲ ಹಳದಿಯಾಗಿ ಕಾಣುತ್ತದೆ. ಹಾಗೆಯೇ ಕೋಮು ಕಣ್ಣಿನವರಿಗೆ ಮಾತ್ರ ಟಿಪ್ಪು ಓರ್ವ ಮತಾಂಧನಾಗಿ, ದೇಶದ್ರೋಹಿಯಾಗಿ ಕಾಣುತ್ತಾರೆ. ಟಿಪ್ಪು ಓರ್ವ ಅಪ್ಪಟ ದೇಶಪ್ರೇಮಿ ಹಾಗೂ ದೂರದೃಷ್ಟಿಯ ಅರಸರಾಗಿದ್ದರು ಎಂದು ಹರಿಪ್ರಸಾದ್ ಬಣ್ಣಿಸಿದರು.
ಕೇರಳದಲ್ಲಿ ಶೂದ್ರ ಮಹಿಳೆಯರು ಸೊಂಟದ ಮೇಲೆ ವಸ್ತ್ರ ಧರಿಸದಂತಹ ಕರಾಳ ನಿಯಮ ಜಾರಿಯಲ್ಲಿತ್ತು. ಇದನ್ನು ರದ್ದು ಮಾಡಿ ದಲಿತರಿಗೂ ಗೌರವಯುತ ಬದುಕು ನೀಡಿದವರು ಟಿಪ್ಪು ಸುಲ್ತಾನ್. ಜಮೀನ್ದಾರಿಕೆಯನ್ನು ರದ್ದು ಮಾಡಿ ಎಲ್ಲಾ ವರ್ಗದವರಿಗೂ ಭೂಮಿ ಪಡೆಯುವ ಹಕ್ಕು ನೀಡಿದವರು ಟಿಪ್ಪು ಸುಲ್ತಾನ್. ಇಂತಹ ಸುಧಾರಣೆಗಳನ್ನು ತಂದ ಟಿಪ್ಪುವನ್ನು ಪಟ್ಟಭದ್ರ ಹಿತಾಸಕ್ತಿಗಳು ಮಾತ್ರ ಮತಾಂಧ ಎಂದು ಕರೆಯಲು ಸಾಧ್ಯ ಎಂದು ಅವರು ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಹಲವು ಕೃತಿಗಳನ್ನು ಅಧ್ಯಯನ ಮಾಡಿ ಟಿಪ್ಪು ಬಗ್ಗೆ ಅಪರೂಪದ ಕೃತಿಯನ್ನು ಅಂಬೇಡ್ಕರ್ ವಾದಿಯಾಗಿರುವ ಪ್ರೊ.ಮಹೇಶ್ ಚಂದ್ರ ಗುರು ಹೊರ ಬಂದಿದ್ದಾರೆ. ಇದೊಂದು ಬೌದ್ಧಿಕ ಪರಿಶ್ರಮದ ಕೃತಿಯಾಗಿದೆ ಎಂದರು. ಕರ್ನಾಟಕವನ್ನು ಎಷ್ಟೊ ರಾಜರು ಆಳಿದ್ದಾರೆ. ಯಾವ ರಾಜರ ಬಗ್ಗೆಯೂ ಇಲ್ಲದ ವಿವಾದವನ್ನು ಬಲಪಂಥೀಯರು ಟಿಪ್ಪು ವಿಷಯದಲ್ಲಿ ಮಾಡುತ್ತಿದ್ದಾರೆ. ಟಿಪ್ಪು ಒಬ್ಬ ಮುಸ್ಲಿಮನಾಗಿದ್ದರು. ಮಾತ್ರವಲ್ಲ, ಪರಧರ್ಮ ಸಹಿಷ್ಣುವಾಗಿದ್ದುದೇ ಇದಕ್ಕೆ ಕಾರಣ. ಟಿಪ್ಪು ಸುಲ್ತಾನ್ ಎಲ್ಲಾ ವರ್ಗದವರಿಗೂ ಬದುಕು ಕಟ್ಟಿಕೊಡುವ ಯೋಜನೆ ರೂಪಿಸಿದ್ದ ಮಹಾನ್ ನಾಯಕ ಎಂದು ಅವರು ಬಣ್ಣಿಸಿದರು.
ಪರಧರ್ಮ ಸಹಿಷ್ಣುವಾಗಿದ್ದ ಟಿಪ್ಪು ಹೆಸರಿಗೆ ಕಳಂಕ ತಂದರೆ ಮಾತ್ರ ಕರ್ನಾಟಕದಲ್ಲಿ ಹಿಂದೂ-ಮುಸ್ಲಿಮ್ ನಡುವೆ ಘರ್ಷಣೆ ಉಂಟು ಮಾಡಲು ಸಾಧ್ಯ ಎಂಬ ದುರುದ್ದೇಶದಿಂದ ಸಂಘಪರಿವಾರ ಟಿಪ್ಪು ಬಗ್ಗೆ ಸುಳ್ಳು ಆರೋಪ ಮಾಡುತ್ತಿದೆ ಎಂದೂ ಅವರು ಹೇಳಿದರು.
ಕೃತಿಯ ಲೇಖಕ ಪ್ರೊ.ಮಹೇಶ್ ಚಂದ್ರಗುರು ಮಾತನಾಡಿ, ಟಿಪ್ಪು ಸುಲ್ತಾನ್ ಭಾರತಕ್ಕೆ ಮಾತ್ರ ಸೀಮಿತವಾದ ವ್ಯಕ್ತಿಯಲ್ಲ. ಆತ ಜಾಗತಿಕ ಸಾಮಾಜಿಕ ಸುಧಾಕರ ಹಾಗೂ ಮಹಾನ್ ನಾಯಕ. ಇದೇ ಟಿಪ್ಪು ವ್ಯಕ್ತಿತ್ವ. ಮೈಸೂರು ಮಹಾರಾಜರು ಬ್ರಿಟಿಷರೊಂದಿಗೆ ಒಪ್ಪಂದ ಮಾಡಿಕೊಂಡು ರಾಜ್ಯವನ್ನು ಉಳಿಸಿಕೊಂಡರು. ಆದರೆ ಟಿಪ್ಪು ಬ್ರಿಟಿಷರ ಗುಲಾಮನಾಗಿ ಒಂದೇ ಒಂದು ಕ್ಷಣವನ್ನೂ ಬದುಕಲಾರೆ ಎಂದು ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಹುತಾತ್ಮರಾದರು. ಆದ್ದರಿಂದ ಟಿಪ್ಪು ಮಹಾನ್ ನಾಯಕ ಮತ್ತು ಹುತಾತ್ಮ ಎಂದು ಹೇಳಿದರು.
ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಮಾತನಾಡಿ, ಟಿಪ್ಪು ಅವರ ಎಲ್ಲಾ ಉತ್ತಮ ಕೆಲಸಗಳನ್ನು ಮುಚ್ಚಿ ಹಾಕಿ ಅವರನ್ನು ಮತಾಂಧ ಎಂದು ಸಂಘಪರಿವಾರದವರು ಹೇಳುತ್ತಿದ್ದಾರೆ. ಟಿಪ್ಪು ಜಯಂತಿಯಂದೇ ಒನಕೆ ಒಬವ್ವ ಜಯಂತಿ ಆಚರಿಸಲು ರಾಜ್ಯ ಸರ್ಕಾರ ದುರುದ್ದೇಶಪೂರಿತವಾಗಿ ಆದೇಶ ಹೊರಡಿಸಿದೆ. ಯಾರು ಏನೇ ಹೇಳಿದರೂ ಟಿಪ್ಪು ಓರ್ವ ಮಹಾನ್ ನಾಯಕ ಎಂದು ಹೇಳಿದರು.
ಎಸ್ ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಮೈಸೂರು ಮಾತನಾಡಿ, ಟಿಪ್ಪು ಸುಲ್ತಾನ್ ಒಬ್ಬ ದೂರದೃಷ್ಟಿಯ ನಾಯಕರಾಗಿದ್ದರು. ಓರ್ವ ಉತ್ತಮ ಆಡಳಿತಗಾರನಿಗೆ ಇರಬೇಕಾದ ಎಲ್ಲಾ ಗುಣಗಳು ಅವರಲ್ಲಿದ್ದವು. ಕೆಆರ್ ಎಸ್ ಗೆ ಅಡಿಪಾಯ ಹಾಕಿದ್ದೇ ಟಿಪ್ಪು ಎಂಬುದು ಐತಿಹಾಸಿಕ ಸತ್ಯ. ಟಿಪ್ಪು 35000 ಕೆರೆಕಟ್ಟೆಗಳನ್ನು ನಿರ್ಮಿಸಿ ರಾಜ್ಯವನ್ನು ಸಮೃದ್ಧಿಗೊಳಿಸಿದರು ಎಂದು ಹೇಳಿದರು.
ಪ್ರಸ್ತುತ ಪಾಕ್ಷಿಕದ ಪ್ರಧಾನ ಸಂಪಾದಕ ಹಾಗೂ ಸ್ತುತಿ ಪಬ್ಲಿಕೇಷನ್ಸ್ ನ ಅಧ್ಯಕ್ಷ ಅಬ್ದುಲ್ ರಝಾಕ್ ಕೆಮ್ಮಾರ ಮಾತನಾಡಿ, ದೇಶವನ್ನು ಕಟ್ಟಿದ ಮಹಾನ್ ನಾಯಕರನ್ನು, ಹುತಾತ್ಮರನ್ನು ಸ್ಮರಿಸುವುದು ನಮ್ಮ ಕರ್ತವ್ಯ. ಇತಿಹಾಸದುದ್ದಕ್ಕೂ ಬಂದ ಸುಧಾರಕರು, ಪ್ರವಾದಿಗಳು ಜನರಲ್ಲಿ ಭಯವನ್ನು ಹೋಗಲಾಡಿಸಿ ಭರವಸೆಯನ್ನು ಮತ್ತು ಆಶಾವಾದವನ್ನು ಮೂಡಿಸಿದರು. ಟಿಪ್ಪು ಸುಲ್ತಾನ್ ಕೂಡ ರಾಜ್ಯದಲ್ಲಿ ನಿರ್ಭಿತಿಯನ್ನು ಹೋಗಲಾಡಿಸಿ ಶಾಂತಿ ನೆಲೆಸುವಂತೆ ಮಾಡಿದರು. ಇಂತಹ ಸತ್ಯವನ್ನು ಮಹೇಶ್ ಚಂದ್ರ ಗುರು ನಮ್ಮ ಮುಂದೆ ಈ ಕೃತಿಯ ಮೂಲಕ ತೆರೆದಿಟ್ಟಿದ್ದಾರೆ. ಫ್ಯಾಶಿಸ್ಟ್ ಶಕ್ತಿಗಳಿಂದ ಜನರನ್ನು ಭಯಪಡಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಭಾರತದ ತಲ್ಲಣಗೊಂಡಿರುವ ಜನರಲ್ಲಿ ನಿರೀಕ್ಷೆ ಮೂಡಿಸಬೇಕಿದೆ. ಭವ್ಯ ಭಾರತದ ಶಾಂತಿಯ, ಭ್ರಾತೃತ್ವದ, ಸಮಾನತೆ, ಪಕ್ಷಪಾತವಿಲ್ಲದ ದೇಶವನ್ನು ನಿರ್ಮಿಸಲು ನಾವು ಇತಿಹಾಸವನ್ನು ನೈಜ ಸಂಗತಿಯನ್ನು ಜನರ ಮುಂದೆ ಇಡಬೇಕಾಗಿದೆ ಎಂದರು.
ಇತಿಹಾಸ ತಜ್ಞ ಪ್ರೊ.ನಂಜರಾಜ ಅರಸ್ ಅವರು ಕೃತಿಯ ಕುರಿತು ಮಾತನಾಡಿ, ಟಿಪ್ಪು ಕುರಿತು ಸಾಕಷ್ಟು ಕೃತಿಗಳು ಬಂದಿವೆ. ಮಹೇಶ್ ಚಂದ್ರ ಗುರು ಸುದೀರ್ಘವಾಗಿ ಅಧ್ಯಯನ ನಡೆಸಿ ಈ ಕೃತಿಯನ್ನು ಹೊರತಂದಿದ್ದಾರೆ. ಟಿಪ್ಪು ಸುಲ್ತಾನ್ ಬಗ್ಗೆ ಈ ಕೃತಿಗಳು ಬಹಳಷ್ಟು ಸತ್ಯಗಳನ್ನು ತಿಳಿಸುತ್ತದೆ. ತಾನು ಕೂಡ ಬಗ್ಗೆ ಬರೆದಿದ್ದು, ಮುಂದಿನ ವಾರ ಬಿಡುಗಡೆಗೊಳ್ಳಲಿದೆ ಎಂದು ಹೇಳಿದರು.