ಡ್ರಗ್ಸ್ ಜಾಲ ಬೇಧಿಸಿರುವ ಪೊಲೀಸ್ ಇಲಾಖೆಯ ಕಾರ್ಯ ವೈಖರಿಗೆ ಶ್ಲಾಘನೆ ವ್ಯಕ್ತಪಡಿಸಿದ ಮಂಜುನಾಥ್ ಭಂಡಾರಿ

ಮಂಗಳೂರು ಸಿಸಿಬಿ ಪೊಲೀಸರು ರಾಜ್ಯದ ಇತಿಹಾಸದಲ್ಲೇ ಅತೀ ದೊಡ್ಡ ಡ್ರಗ್ಸ್ ಜಾಲವನ್ನು ಬೇಧಿಸಿರುವುದು ಪೊಲೀಸ್ ಇಲಾಖೆಯ ಬಗ್ಗೆ ಜಿಲ್ಲೆಯ ನಾಗರಿಕರು ಹೆಮ್ಮೆ ಪಡುವಂತಹ ವಿಷಯವಾಗಿದೆ ಎಂದು ವಿಧಾನ ಪರಿಷತ್ಸದಸ್ಯರಾದ ಮಂಜುನಾಥ ಭಂಡಾರಿ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆ ಇತ್ತೀಚಿನ ದಿನಗಳಲ್ಲಿ ಡ್ರಗ್ಸ್ ಜಾಲದ ಕಬಂಧಬಾಹುಗಳಲ್ಲಿ ಬಂಧಿಯಾಗಿದ್ದು ಜನಸಾಮಾನ್ಯರು ಆತಂಕ ಪಡುವಂತಹ ವಾತಾವರಣ ಸೃಷ್ಟಿಯಾಗಿತ್ತು. ಆದರೆ ಈ ಜಾಲದ ಬೆನ್ನುಬಿದ್ದ ಪೊಲೀಸರು ಅಂದಾಜು 75 ಕೋಟಿ ಮೌಲ್ಯದ ಮಾದಕ ವಸ್ತು ವಶಕ್ಕೆ ಪಡೆದು ಆಫ್ರಿಕಾ ಮೂಲದ ಇಬ್ಬರು ಮಹಿಳೆಯರು ಮತ್ತು ಸ್ಥಳೀಯ ಯುವಕನೋರ್ವನನ್ನು ಬಂಧಿಸಿರುವುದು ಪೋಲೀಸರ ಈ ಸಾಹಸಕಾರಿ ಕಾರ್ಯಾಚರಣೆಯನ್ನು ಪ್ರತಿಯೊಬ್ಬ ನಾಗರಿಕನೂ ಕೂಡ ಪ್ರಶಂಸಿಸಬೇಕಾಗಿದೆ.
ಇದಕ್ಕಾಗಿ ರಾಜ್ಯ ಗೃಹ ಇಲಾಖೆ, ಪೊಲೀಸ್ ಇಲಾಖೆ, ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಹಾಗೂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿಯನ್ನೂ ಅಭಿನಂದಿಸುತ್ತೇನೆ.
ಮಂಗಳೂರು ಶಿಕ್ಷಣ ಕಾಶಿ ಎಂದೇ ಹೆಸರು ಪಡೆದಿದ್ದು ಇತ್ತೀಚಿನ ದಿನಗಳಲ್ಲಿ ಈ ಹೆಸರಿಗೆ ಮಸಿ ಬಳಿಯುವಂತೆ ಡ್ರಗ್ಸ್ ದಂಧೆ, ಅಕ್ರಮ ದಂಧೆಗಳು ಕಾರ್ಯಾಚರಿಸುತ್ತಿದ್ದವು. ಇದು ಇಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ಹೊರಜಿಲ್ಲೆ, ರಾಜ್ಯ, ರಾಷ್ಟ್ರಗಳಿಂದ ಬಂದು ಶಿಕ್ಷಣ ಪಡೆಯುತ್ತಿರುವ ಮಕ್ಕಳ ಪೋಷಕರ ಆತಂಕಕ್ಕೆ ಕಾರಣವಾಗಿತ್ತು. ಆದರೆ ಪೊಲೀಸ್ ಇಲಾಖೆ ಡ್ರಗ್ಸ್ ದಂಧೆಯನ್ನು ಬೇರು ಸಮೇತ ಕಿತ್ತುಹಾಕಲು ಪಣತೊಟ್ಟಿದ್ದು ಅದರಲ್ಲಿ ಯಶಸ್ಸನ್ನೂ ಕಂಡಿದೆ. ಮುಂದೆಯೂ ಪೊಲೀಸ್ ಇಲಾಖೆ ದಂಧೆಕೋರರನ್ನು ನಿಯಂತ್ರಿಸಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ನಿರಂತರ ಶ್ರಮಿಸುವ ಅಗತ್ಯವಿದೆ ಎಂದರು.

Related Posts

Leave a Reply

Your email address will not be published.