ಪುಂಜಾಲಕಟ್ಟೆ ಹೆದ್ದಾರಿ ಅಗಲಿಕರಣ ವಿಚಾರ: ಸಿಗದ ಪರಿಹಾರ, ಪ್ರತಿಭಟನೆಯ ಎಚ್ಚರಿಕೆ
ಬಂಟ್ವಾಳ ಪುಂಜಾಲಕಟ್ಟೆ ಹೆದ್ದಾರಿ ಅಗಲಗೊಳ್ಳುವ ಕಾರ್ಯದ ಸಂದರ್ಭ ತಮ್ಮ ಜಮೀನು ಸ್ವಾಧೀನಪಡಿಸಿಕೊಂಡಿದ್ದರೂ ಇದುವರೆಗೂ ಪರಿಹಾರ ಬಾರದೇ ಇರುವ ಹಿನ್ನೆಲೆಯಲ್ಲಿ ಜುಲೈ ೨೦ರೊಳಗೆ ಈ ಕುರಿತು ಯಾವುದೇ ಪರಿಹಾರ ಬರದಿದ್ದರೆ ತಮ್ಮ ಜಮೀನಿಗೆ ಬೇಲಿ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಭೂಮಿ ಕಳೆದುಕೊಂಡವರು ನಾವೂರಿನಲ್ಲಿ ಎಚ್ಚರಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಂತ್ರಸ್ತರ ಪರವಾಗಿ ಮಾತನಾಡಿದ ಸಿಪ್ರಿಯನ್ ಸಿಕ್ವೇರಾ ಮತ್ತು ಸದಾನಂದ ನಾವೂರು, ಬಂಟ್ವಾಳ ಪುರಸಭಾ ವ್ಯಾಪ್ತಿ ಸೇರಿದಂತೆ ನಾವೂರು, ಕಾವಳಪುಡೂರು, ಕಾವಳಪಡೂರು, ಪಿಲಾತಬೆಟ್ಟು ಗ್ರಾಪಂ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ವಿಶೇಷ ಭೂಸ್ವಾಧೀನಾಧಿಕಾರಿ ಮೂಲಕ ಹಲವಾರು ಮಂದಿಯ ಭೂಮಿ ಸ್ವಾಧೀನಪಡಿಸಲಾಗಿದ್ದು, ಕಳಕೊಂಡವರ ದಾಖಲೆ ಪಡೆದು, ಕಳೆದ ಡಿಸೆಂಬರ್ ನಲ್ಲಿ ಪ್ರತಿ ಭೂಮಾಲೀಕರಿಗೂ ಅವರ ಭೂಮಿಗೆ ನಿಗದಿಪಡಿಸಿದ ಮೊತ್ತವನ್ನು ನಮೂದಿಸಿ ನೋಟಿಸ್ ನೀಡಲಾಗಿತ್ತು.
ಆದರೆ ಈವರೆಗೆ ಪರಿಹಾರ ದೊರಕಿಲ್ಲ ಎಂದರು. ಅಭಿವೃದ್ಧಿಗೆ ಅಡ್ಡಿಯಾಗಬಾರದು ಎಂದು ಜಾಗ ಕೊಟ್ಟರೆ, ಪರಿಹಾರ ಮಾಡುವುದಕ್ಕೆ ವಿಳಂಬ ಧೋರಣೆ ಅನುಸರಿಸುವ ಹಿನ್ನೆಲೆಯಲ್ಲಿ ದಿಕ್ಕು ತೋಚದೆ ನಾವು ಸ್ವಾಧೀನಪಡಿಸಿಕೊಂಡಿರುವ ನಮ್ಮ ಜಮೀನಿಗೆ ಜುಲೈ 20ರಂದು ಬೇಲಿ ಹಾಕಿ ಪ್ರತಿಭಟನೆಯನ್ನು ಮಾಡುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಇಸ್ಮಾಯಿಲ್, ಪವನ್ ಕುಮಾರ್, ಪ್ರಭಾಕರ ಪೂಜಾರಿ, ವಿಲ್ಫ್ರೆಡ್, ರಾಮಚಂದ್ರ ಕುಲಾಲ್, ಜಯರಾಮ್, ಪ್ರವೀಣ್ ರೋಡ್ರಿಗಸ್, ಪ್ರವೀಣ್ ಸೋಮಯಾಜಿ, ಗೋಪಾಲ ಸಫಲ್ಯ, ವಸಂತ ಮೂಲ್ಯ, ನಾರಾಯಣ ಮೂಲ್ಯ, ವೆಂಕಪ್ಪ ಮೂಲ್ಯ, ಮೋಹನ ಬೈಲೋಡಿ ಮೊದಲಾದವರು ಉಪಸ್ಥಿತರಿದ್ದರು.