ಪುತ್ತೂರಿನಲ್ಲಿ ಕಾರ್ಗಿಲ್ ವಿಜಯ್ ದಿವಸ ಆಚರಣೆ
ಪುತ್ತೂರು: ಕಾರ್ಗಿಲ್ ಯುದ್ಧದ ಬಳಿಕ ರಾಷ್ಟ್ರ ಭಕ್ತಿಯ ಅನಾವರಣಗೊಂಡಿದ್ದು, ಕಾರ್ಗಿಲ್ ಯುದ್ಧದಲ್ಲಿ ಗಳಿಸಿದ ವಿಜಯವು ಎಲ್ಲಾ ದೇಶವಾಸಿಗಳಿಗೆ ಪ್ರೇರಣೆಯಾಗಿದೆ. ಕಾರ್ಗಿಲ್ ಯುದ್ಧದ ಸಮಯದಲ್ಲಿ ಜೀವದ ಹಂಗು ತೊರೆದು ಹೋರಾಟ ನಡೆಸಿದ ಸೈನಿಕರನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಪುತ್ತೂರಿನ ಮಿನಿ ವಿಧಾನ ಸೌಧದ ಮುಂಬಾಗದಲ್ಲಿರುವ ಅಮರ್ ಜವಾನ್ ಜ್ಯೋತಿ ಬಳಿಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ನೇತೃತ್ವದಲ್ಲಿ ಮಾಜೀ ಸೈನಿಕರ ಸಂಘ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿಯ ಸಹಯೋಗದಲ್ಲಿ ನಡೆದ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮದಲ್ಲಿ ಮಾತನಾಡಿದರು. ನ್ಯಾಯವಾದಿ ರುಡಾಲ್ಫ್ ಪಿರೇರಾ ಮಾತನಾಡಿ ಕಾರ್ಗಿಲ್ ವಿಜಯವು ದೇಶವು ವಿಶ್ವಕ್ಕೆ ಸಾರಿದ ಶಕ್ತಿ ಪ್ರದರ್ಶನದ ಸಂಕೇತವಾಗಿದೆ. ನಮ್ಮ ದೇಶದ ದಿಟ್ಟ ಹಾಗೂ ಬುದ್ದಿವಂತ ಯೋಧರು ಗಾಳಿ, ಮಳೆಯನ್ನು ಲೆಕ್ಕಿಸದೆ ಹೋರಾಟ ನಡೆಸಿ ವಿಜಯ ಸಾಧಿಸಿದ್ದಾರೆ. ಅವರನ್ನು ನೆನಪಿಸಿಕೊಳ್ಳುವುದು, ಪ್ರಶಂಸಿವುದು ಸೂಕ್ತವಾಗಿದೆ. ಅವರ ಸೇವಾ ಕಾರ್ಯವನ್ನು ಗೌರವಿಸಬೇಕು ಎಂದರು.
ಈ ಸಂದರ್ಭದಲ್ಲಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಜಗನ್ನಾಥ್,ನ್ಯಾಯವಾದಿ ರಮೇಶ್,ನಟ್ಟೋಜ ಫೌಂಡೇಶನ್ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ನಗರಸಭಾ ಅಧ್ಯಕ್ಷ ಕೆ. ಜೀವಂಧರ್ ಜೈನ್, ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ತಹಸೀಲ್ದಾರ್ ರಮೇಶ್ ಬಾಬು, ಪೌರಾಯುಕ್ತ ಮಧು ಎಸ್ ಮನೋಹರ್ ಉಪಸ್ಥಿತರಿದ್ದರು.