ಯಶಸ್ವಿ `ಆಪರೇಷನ್ ಚೀತಾ’ ಕಾರ್ಯಾಚರಣೆ
ಕಡಬ : ಕೊಂಬಾರು ಗ್ರಾಮದ ಕಮರ್ಕಜೆ ನಿವಾಸಿ ರಾಮಯ್ಯ ಗೌಡ ಅವರ ಮನೆ ಬಳಿಯ ಬಾವಿಯ ದಂಡೆಯ ಮೇಲೆ ಕುಳಿತಿದ್ದ ಕೋಳಿಯನ್ನು ಬೇಟೆಯಾಡಲು ಹೋದ ಚಿರತೆಯೊಂದು ನೀರು ತುಂಬಿದ ಬಾವಿಗೆ ಬಿದ್ದ ಘಟನೆ ರವಿವಾರ ಮುಂಜಾನೆ ಸಂಭವಿಸಿದೆ . ಸುದ್ದಿ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಸಿಬಂದಿಗಳು ಸುಳ್ಯ ಎಸಿಎಫ್ ಪ್ರವೀಣ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಸತತ 3 ತಾಸುಗಳ ಕಾರ್ಯಾಚರಣೆ ನಡೆಸಿಚಿರತೆಯನ್ನು ಸುರಕ್ಷಿತವಾಗಿ ಬಾವಿಯಿಂದ ಮೇಲೆತ್ತುವ ಯಶಸ್ವಿಯಾಗಿದ್ದಾರೆ . ಬಾವಿಯ ಪಕ್ಕ ಬೋನು ಇರಿಸಿ ಬಾವಿಗೆ ಏಣಿ ಇಳಿಸಿದ ಅರಣ್ಯ ಇಲಾಖೆಯ ಸಿಬಂದಿಗಳು ಏಣಿ ಏರಿ ಬಂದ ಚಿರತೆ ಹೊರ ಹೋಗಿ ತಪ್ಪಿಸಿಕೊಳ್ಳದೆ ನೇರವಾಗಿ ಬೋನಿನೊಳಗೆ ಹೋಗುವಂತೆ ಬಲೆ ಹಾಕಿ ಕಾರ್ಯಾಚರಣೆ ನಡೆಸಿದರು . ಬಾವಿಗೆ ಏಣಿ ಇಳಿಸಿ ಸುಮಾರು ಅರ್ಧ ತಾಸು ಕಾದ ಬಳಿಕ É ಏಣಿ ಏರಿದ ಚಿರತೆ ಬಾವಿಯಿಂದ ಮೇಲೇರಿ ಬಂದು ಬೋನು ಸೇರುವ ಮೂಲಕ ಕಾರ್ಯಾಚರಣೆ ಯಶಸ್ವಿಯಾಯಿತು. ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಮಧುಸೂಧನ್ ಹಾಗೂ ಸುಬ್ರಹ್ಮಣ್ಯ, ಪಂಜ ಹಾಗೂ ಸುಳ್ಯ ವಲಯದ ಅರಣ್ಯ ಇಲಾಖಾ ಸಿಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು . ವನ್ಯಜೀವಿ ಅಪರಾಧ ನಿಯಂತ್ರಣ ದಳದ ಭುವನ್ ಕುಕ್ಕೆ ಸಹಕರಿಸಿದರು. ಕಡಬ ಪಶು ವೈದ್ಯಾಧಿಕಾರಿ ಡಾ | ಅಜಿತ್ ಅವರು ಚಿರತೆಯ ಆರೋಗ್ಯ ತಪಾಸಣೆ ನಡೆಸಿದರು. ಚಿರತೆ ಆರೋಗ್ಯವಾಗಿದ್ದು, ಅದನ್ನು ಇಲಾಖೆಯ ಉನ್ನತ ಅಧಿಕಾರಿಗಳ ಮಾರ್ಗದರ್ಶನದಂತೆ ಸುರಕ್ಷಿತ ಅರಣ್ಯಕ್ಕೆ ಬಿಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸುಳ್ಯ ಎಸಿಎಫ್ ಪ್ರವೀಣ್ ಶೆಟ್ಟಿ ತಿಳಿಸಿದ್ದಾರೆ