ಯಾವುದೇ ಕಾರಣಕ್ಕೂ ಸಾರ್ವಜನಿಕರನ್ನು ಸತಾಯಿಸಬಾರದು ಲೋಕಾಯುಕ್ತ ಉಪ ಅಧೀಕ್ಷಕ ಚೆಲುವರಾಜು ಹೇಳಿಕೆ
ಕಡಬ: ಸಾರ್ವಜನಿಕರಿಗೆ ನಿಷ್ಪಕ್ಷಪಾತ ಸೇವೆ ನೀಡುವುದೇ ಅಧಿಕಾರಿಗಳ ಕೆಲಸ, ಯಾವುದೇ ಕಾರಣಕ್ಕೆ ಸಾರ್ವಜನಿಕರನ್ನು ಸತಾಯಿಸಬಾರದು ಎಂದು ಕರ್ನಾಟಕ ಲೋಕಾಯುಕ್ತ ಪೋಲಿಸ್ನ ದ.ಕ. ಜಿಲ್ಲಾ ಉಪ ಅಧೀಕ್ಷಕ ಚೆಲುವರಾಜು ಅವರು ಹೇಳಿದರು
ಅವರು ಕಡಬ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಲೋಕಾಯುಕ್ತ ಪೋಲಿಸರಿಂದ ನಡೆದ ಅರಿವು ಜಾಗೃತಿ ಸಪ್ತಾಹದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಅಧಿಕಾರಿಗಳು ಮತ್ತು ಸಾರ್ವಜನಿಕರು ಭ್ರಷ್ಟಚಾರ ರಹಿತ ಕೆಲಸ ಮಾಡಬೇಕು, ಲಂಚ ಪಡೆದುಕೊಳ್ಳುವುದು ಮಾತ್ರ ಭ್ರಷ್ಟಚಾರವಲ್ಲ, ಸ್ವಜನ ಪಕ್ಷಪಾತ, ಅಧಿಕಾರ ದಬ್ಬಾಳಿಕೆ, ಕಾನೂನು ಮೀರಿ ಕೆಲಸ ನಿರ್ವಹಿಸುವುದು, ಸಾರ್ವಜನಿಕರ ಕೆಲಸವನ್ನು ವಿಳಂಬ ಮಾಡುವುದು ಕೂಡ ಭ್ರಷ್ಟಚಾರವಾಗುತ್ತದೆ. ನಮಗೆ ಸರಕಾರ ಸಂಬಳ ಕೊಡುತ್ತದೆ ಆದುದರಿಂದ ನಾವು ಜನರ ಸೇವೆಗೆ ಇರುವುವವರು ಎಂದ ಅವರು ನಾವು ಲಂಚ ಪಡೆದುಕೊಳ್ಳುವಾಗ ಸ್ವಲ್ಪ ಯೋಚನೆ ಮಾಡಿಕೊಳ್ಳಬೇಕು, ನಮ್ಮ ಮನೆಯವರ ಕೈಯಿಂದ ಯಾರಾದರೂ ಲಂಚ ಪಡೆದಾಗ ನಮಗೆಷ್ಟು ಕೋಪ ಬರುತ್ತದೆ, ಅದೇ ರೀತಿ ಎಲ್ಲರಿಗೂ ಕೋಪ, ಬೇಸರ ಆಗುತ್ತದೆ ಇದನ್ನು ದೇವರು ಕೂಡ ಮೆಚ್ಚುವುದಿಲ್ಲ ಎಂದು ಹೇಳಿದರು
ಕಡಬ ತಹಸೀಲ್ದಾರ್ ಅನಂತ್ ಶಂಕರ್ ಅವರು ಮಾತನಾಡಿ, ಇನ್ನು ಮುಂದೆ ಯಾರು ಲಂಚ ಕೊಡಬಾರದು, ಲಂಚ ಕೊಡುವುದು ಅಪರಾಧ, ಇನ್ನು ಮುಂದೆ ಸಾರ್ವಜನಿಕರು ಕಛೇರಿಗೆ ನೇರವಾಗಿ ಬರಬೇಕು, ಯಾವುದೇ ಕಡತಗಳನ್ನು ದಲ್ಲಾಳಿಗಳ ಮೂಲಕ ಮಾಡಿಸಬಾರದು ಎಂದು ಹೇಳಿದರು.
ಜಿಲ್ಲಾ ಪರಿಷತ್ ಸದಸ್ಯ ಸೈಯದ್ ಮೀರಾ ಸಾಹೇಬ್, ಉಪತಹಸೀಲ್ದಾರ್ ಮನೋಹರ್ ಕೆ.ಟಿ. ಪಟ್ಟಣ ಪಂಚಾಯತ್ ಸಿಬ್ಬಂದಿ ಹರೀಶ್ ಬೆದ್ರಾಜೆ. ಎಂ,ಬಿ ಸದಾಶಿವ, ಕಡಬ ಕಂದಾಯ ನಿರೀಕ್ಷಕ ಅವಿನ್ ರಂಗತ್ಮಲೆ, ಚಂದ್ರಶೇಖರ್ ಯು, ಗ್ರಾಮ ಕರಣಿಕರು, ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.