ರಾಜ್ಯದಲ್ಲಿ ಶಾಲಾರಂಭಕ್ಕೆ ರಾಜ್ಯ ಸರ್ಕಾರ ಚಿಂತನೆ: ಸಚಿವ ಸುರೇಶ್ ಕುಮಾರ್ ಮಾಹಿತಿ

ರಾಜ್ಯದಲ್ಲಿ ಶಾಲಾರಂಭಕ್ಕೆ ರಾಜ್ಯ ಸರಕಾರ ಚಿಂತನೆಯನ್ನು ನಡೆಸಿದೆ. ಈ ಕುರಿತು ಶಿಕ್ಷಣ ಇಲಾಖೆಯ ಆಯುಕ್ತರ ವರದಿ ಕೈ ಸೇರಲಿದ್ದು, ನಂತರದಲ್ಲಿ ಶಾಲಾರಂಭದ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಬೆಂಗಳೂರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಶಾಲಾರಂಭ ಮಾಡುವ ಹಿನ್ನೆಲೆಯಲ್ಲಿ ಸಾಧಕ ಬಾಧಕಗಳ ಕುರಿತು ಶಿಕ್ಷಣ ಇಲಾಖೆಯ ಆಯುಕ್ತರು ಅಧ್ಯಯನ ನಡೆಸುತ್ತಿದ್ದು, ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಶಿಕ್ಷಕರು, ಪೋಷಕರಿಂದ ಮಾಹಿತಿಯನ್ನು ಪಡೆದು ಸಮಗ್ರ ವರದಿಯನ್ನು ಒಂದೆರಡು ದಿನಗಳಲ್ಲಿ ಸಲ್ಲಿಕೆ ಮಾಡಲಿದ್ದಾರೆ. ನಂತರದಲ್ಲಿ ವರದಿಯನ್ನು ಆಧರಿಸಿ ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುವ ಕುರಿತು ಅಧಿಕೃತ ಆದೇಶವನ್ನು ಹೊರಡಿಸಲಾಗುವುದು ಎಂದಿದ್ದಾರೆ. 

ಐಸಿಎಂಆರ್ ಕೊರೊನಾ ವೈರಸ್ ಸೋಂಕಿನ ನಡುವಲ್ಲೇ ಶಾಲೆಗಳನ್ನು ಆರಂಭ ಮಾಡಬಹುದು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಅಲ್ಲದೇ ರಾಜ್ಯದಲ್ಲಿ ಅಗಸ್ಟ್ ಆರಂಭ ದಿಂದಲೇ ಹಂತ ಹಂತವಾಗಿ ಶಾಲಾರಂಭ ಕುರಿತು ಚಿಂತನೆ ನಡೆದಿದೆ. ಕಳೆದ ಬಾರಿಯಂತೆಯೇ ಮೊದಲ ಹಂತದಲ್ಲಿ10,12 ನೇ ತರಗತಿ ನಂತರ 8,9 ಮತ್ತು 11 ನೇ ತರಗತಿ ಆರಂಭ ಮಾಡುವ ಕುರಿತು ಚಿಂತನೆ ನಡೆದಿದೆ. ಅಲ್ಲದೇ 5,6 ಮತ್ತು 7 ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ ಯೋಜನೆ ಜಾರಿಯಾಗಲಿದೆ.

ಈಗಾಗಲೇ ರಾಜ್ಯದಲ್ಲಿ ಕಾಲೇಜುಗಳನ್ನು ಆರಂಭಿಸಲು ರಾಜ್ಯ ಸರಕಾರ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಉನ್ನತ ಶಿಕ್ಷಣ ಇಲಾಖೆ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಇದರ ಬೆನ್ನಲ್ಲೇ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ತರಗತಿಗಳ ಆರಂಭವೂ ಆಗುವ ಸಾಧ್ಯತೆಯಿದೆ.

 

Related Posts

Leave a Reply

Your email address will not be published.