ರೈತರಿಂದ ಭಾರತ್ ಬಂದ್ : ಹಲವು ರಾಜ್ಯಗಳಲ್ಲಿ ಯಶಸ್ವಿ

ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಭಾರತ್ ಬಂದ್‌ಗೆ ದೇಶಾದಂತ್ಯ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬೆಳಗ್ಗೆ 6 ಗಂಟೆಗೆ ಜನ ಬೀದಿಗಿಳಿದು ರೈತರಿಗೆ ಬೆಂಬಲ ನೀಡಿದ್ದಾರೆ. ದೆಹಲಿಯ ಗಡಿ ಭಾಗಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ವಿವಾದಿತ ಕೃಷಿ ಕಾನೂನುಗಳ ಜಾರಿಗೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ, ರೈತ ಸಂಘಟನೆಗಳು “ಭಾರತ್ ಬಂದ್” ಗೆ ಕರೆ ನೀಡಿವೆ. ಬೆಳಗ್ಗೆ 6 ಗಂಟೆಗೆ ಬಂದ್ ಆರಂಭವಾಗಿದ್ದು, ಇಂದು ಸಂಜೆ 4 ಗಂಟೆಯವರೆಗೂ ಮುಂದುವರಿಯಲಿದೆ.ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳು, ರಾಜ್ಯ ಹೆದ್ದಾರಿಗಳು, ಸಂಪರ್ಕ ರಸ್ತೆ ಮತ್ತು ರೈಲ್ವೆ ಹಳಿಗಳನ್ನು ಬಂದ್ ಮಾಡಲಾಗಿದೆ. ರಸ್ತೆ ಮತ್ತು ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಪಂಜಾಬ್ ನಲ್ಲಿ ರೈತರು 350 ಕ್ಕೂ ಹೆಚ್ಚು ಸ್ಥಳಗಳಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ.

ಕೇಂದ್ರ ಸರಕಾರ ಜಾರಿಗೊಳಿಸಿರುವ ಮೂರು ಕೃಷಿಕಾಯ್ದೆಗಳ ವಿರುದ್ಧ ರೈತ ಸಂಟನೆಗಳು ಭಾರತ್ ಬಂದ್ ಗೆ ಕರೆ ನೀಡಿದ್ದು, ರಾಜ್ಯದಲ್ಲೂ ಹಲವು ಕಡೆಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿದೆ. ಭಾರತ್ ಬಂದ್ ಗೆ ಮೈಸೂರಿನಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಸೋಮವಾರ ಬೆಳಿಗ್ಗೆಯಿಂದಲೇ ರೈತ, ಕಾರ್ಮಿಕ, ದಲಿತ ಮತ್ತು ವಿವಿಧ ಪರ ಕನ್ನಡ ಸಂಘಟನೆಗಳು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿವೆ.

ಇಂದು ಬೆಳಿಗ್ಗೆ 7 ಗಂಟೆಗೆ ನಗರದ ಸಬಬ್ 9 ಬಸ್ ನಿಲ್ದಾಣ ಮತ್ತು ನಗರ ಬಸ್ ನಿಲ್ದಾಣಗಳಿಗೆ ಪ್ರತ್ಯೇಕವಾಗಿ ಆಗಮಿಸಿದ ಪ್ರತಿಭಟನಾಕಾರರು, ಬಸ್ ನಿಲ್ದಾಣದ ಎರಡೂ ಬದಿಗಳಲ್ಲಿ ಪ್ರತಿಭಟನೆ ನಡೆಸಿ ಬಸ್ ಸಂಚಾರ ವನ್ನು ತಡೆದರು. ಇದರಿಂದ ಬೇರೆ ಕಡೆಗಳಿಗೆ ಸಂಚರಿಸಬೇಕಾದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು.ಸುಮಾರು 9 ಗಂಟೆವರೆಗೂ ಬಸ್ ನಿಲ್ದಾಣ ಮತ್ತು ಮುಂಭಾಗದ ರಸ್ತೆಗಳಲ್ಲಿ ಪ್ರತಿಭಟಿಸಿದ ಪ್ರತಿಭಟನಾಕಾರರು, ಮಾನವ ಸರಪಳಿ ನಿರ್ಮಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿದರು.

ಪ್ರಗತಿಪರ ಸಂಘಟನೆ ಹಾಗೂ ಕಾಂಗ್ರೆಸ್ ನ ಕಿಸಾನ್ ಘಟಕದಿಂದ ಕೋಲಾರ ನಗರದ ಪ್ರಮುಖ ಕಡೆಗಳಲ್ಲಿ ಬೈಕ್ ರ್ಯಾಲಿ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿವಿಧ ಬೇಡಿಕೆ ಆಗ್ರಹಿಸಿ ವೇಮಗಲ್ ನಲ್ಲಿ ರಸ್ತೆಯ ಮಧ್ಯೆ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಶಿವಮೊಗ್ಗದಲ್ಲಿ ಕನ್ನಡ ಪರ ಸಂಘಟನೆಗಳು ಬೆಳ್ಳಂಬೆಳ್ಳಗ್ಗೆ ರಸ್ತೆಗಿಳಿದು ಬಸ್ಸುಗಳ‌ ಸಂಚಾರಕ್ಕೆ ತಡೆಯೊಡ್ಡಿ ಪ್ರತಿಭಟನೆ ನಡೆಸಿವೆ.ನಗರದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸಿದ  ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಕೇಂದ್ರ ಸರ್ಕಾರದ ರೈತವಿರೋಧಿ ಹಾಗೂ ಜನ ವಿರೋಧಿ ಕಾಯ್ದೆಗಳ ವಿರುದ್ದ ಧಿಕ್ಕಾರ ಕೂಗಿದರು.ಕೂಡಲೇ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.

 

Related Posts

Leave a Reply

Your email address will not be published.