ರೈತ ಕಾರ್ಮಿಕರ ಹೋರಾಟದ ಪ್ರಚಾರಾಂದೋಲನದ ಭಾಗವಾಗಿ ಸಿಐಟಿಯುನಿಂದ ಪಾದಯಾತ್ರೆ

ಕ್ವಿಟ್ ಇಂಡಿಯಾ ಚಳುವಳಿಯ ಸವಿನೆನಪಿನಲ್ಲಿ ರೈತ ಕಾರ್ಮಿಕರ ಸಖ್ಯತೆಯಲ್ಲಿ ಬ್ರಹತ್ ಹೋರಾಟವು ಆಗಸ್ಟ್ 9 ರಂದು ದೇಶಾದ್ಯಂತ ನಡೆಯಲಿದ್ದು, ಅದರ ಪ್ರಚಾರಾಂದೋಲನದ ಭಾಗವಾಗಿ ನಗರದಲ್ಲಿಂದು  CITU ನೇತ್ರತ್ವದಲ್ಲಿ ಪಾದಯಾತ್ರೆಯನ್ನು ನಡೆಸಿ ಸಾರ್ವಜನಿಕರಲ್ಲಿ ಜಾಗ್ರತಿ ಮೂಡಿಸಲಾಯಿತು.

ಪಾದಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ CITU ದ.ಕ.ಜಿಲ್ಲಾಧ್ಯಕ್ಷರಾದ ಜೆ.ಬಾಲಕ್ರಷ್ಣ ಶೆಟ್ಟಿಯವರು, ದೇಶವನ್ನಾಳುವ ನರೇಂದ್ರ ಮೋದಿ ಸರಕಾರವು ಪ್ರತೀ ಹೆಜ್ಜೆಯಲ್ಲಿಯೂ ರೈತ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸುವ ಮೂಲಕ ದೇಶದ ಆರ್ಥಿಕತೆಯನ್ನು ಸರ್ವನಾಶಗೊಳಿಸಿದೆ.ಜನತೆಯ ಹಿತ ಕಾಪಾಡುವ ಬದಲು ಕಾರ್ಪೋರೇಟ್ ಕಂಪನಿಗಳ ಹಿತಾಸಕ್ತಿಗಳನ್ನು ಕಾಪಾಡುತ್ತಿದೆ. ಆ ಮೂಲಕ ದೇಶದ ಅಮೂಲ್ಯ ಸಂಪತ್ತುಗಳನ್ನು ಕಾರ್ಪೋರೇಟ್ ಕಂಪೆನಿಗಳಿಗೆ ಧಾರೆ ಎರೆದು ಕೊಡುತ್ತಿದೆ.ರೈತ ವಿರೋಧಿ ಮಸೂದೆಗಳನ್ನು ಜಾರಿಗೊಳಿಸಲು ಹೊರಟ ಕೇಂದ್ರ ಸರಕಾರವು ದೇಶದ ಕ್ರಷಿರಂಗವನ್ನೇ ಬುಡಮೇಲುಗೊಳಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಮಾತನಾಡುತ್ತಾ, ಅಂದು ಈಸ್ಟ್ ಇಂಡಿಯಾ ಕಂಪೆನಿಯ ಮೂಲಕ ದೇಶದ ಸಂಪತ್ತನ್ನು ದೋಚಿದ ಬ್ರಿಟೀಷರ ವಿರುದ್ದ ದೇಶದ ಜನತೆ ಸಮರ ಧೀರ ಹೋರಾಟ ನಡೆಸಿದರೆ,ಇಂದು ನಮ್ಮ ದೇಶದ ಸಂಪತ್ತನ್ನು ಕೊಳ್ಳೆಹೊಡೆಯುತ್ತಿರುವ ನೂರಾರು ಕಾರ್ಪೋರೇಟ್ ಕಂಪೆನಿಗಳ ವಿರುದ್ಧ ದೇಶದ ರೈತ ಕಾರ್ಮಿಕರು ಒಂದಾಗಿ ಪ್ರಬಲ ಚಳುವಳಿ ರೂಪಿಸಬೇಕಾಗಿದೆ ಎಂದು ಹೇಳಿದರು.

ಪಾದಯಾತ್ರೆಯಲ್ಲಿ CITU ಜಿಲ್ಲಾ ಮುಖಂಡರಾದ ಜಯಂತಿ ಶೆಟ್ಟಿ, ಭಾರತಿ ಬೋಳಾರ, ಜಯಲಕ್ಷ್ಮಿ, ಸಂತೋಷ್ ಆರ್.ಎಸ್, ಅಶೋಕ್ ಸಾಲ್ಯಾನ್,ಕ್ರಷ್ಣ ತಣ್ಣೀರುಬಾವಿ, ಅನ್ವರ್ ಶೇಕ್ ಮುಂತಾದವರು ಉಪಸ್ಥಿತರಿದ್ದರು .

 

Related Posts

Leave a Reply

Your email address will not be published.