ಮಂಗಳೂರು: ಮಂಗಳೂರಿಗೆ ಭೇಟಿ ನೀಡಿದ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ V. Somanna ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಜೆಡಿಎಸ್ ಪಕ್ಷದ ನಿಯೋಗ ಭೇಟಿ ಮಾಡಿ, ಜಿಲ್ಲೆಯ ರೈಲ್ವೆ ಪ್ರಯಾಣಿಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಿತು.
ಜೆಡಿಎಸ್ ಮುಖಂಡರ ನಿಯೋಗವು ಮಂಗಳೂರು ಭಾಗದ ಜನತೆಗೆ ಅತ್ಯಂತ ಅಗತ್ಯವಿರುವ ಕೆಲವು ಪ್ರಮುಖ ರೈಲುಗಳ ನಿಲುಗಡೆ ವ್ಯವಸ್ಥೆ ಕಲ್ಪಿಸುವಂತೆ ಸಚಿವರಿಗೆ ಮನವಿ ಸಲ್ಲಿಸಿತು. ಅಲ್ಲದೆ, ದಿನನಿತ್ಯ ರೈಲ್ವೆ ಪ್ರಯಾಣಿಕರು ಅನುಭವಿಸುತ್ತಿರುವ ತೊಂದರೆಗಳು, ರೈಲು ವೇಳಾಪಟ್ಟಿ ಸಮಸ್ಯೆಗಳು ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಕುರಿತಾದ ವಿಚಾರಗಳನ್ನೂ ಸಚಿವರ ಗಮನಕ್ಕೆ ತಂದರು.
ಮನವಿಯನ್ನು ಆಲಿಸಿದ ಸಚಿವ ಸೋಮಣ್ಣ ಅವರು ಸಮಸ್ಯೆಗಳ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಮೀನುಗಾರರ ಘಟಕದ ಅಧ್ಯಕ್ಷರಾದ ಶ್ರೀ ರತ್ನಾಕರ ಸುವರ್ಣ, ದಕ್ಷಿಣ ಕನ್ನಡ ಜಿಲ್ಲೆಯ ಹಲವು ಜೆಡಿಎಸ್ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
