ಲಸಿಕೆ ನೀಡಲು ಸರ್ಕಾರ ಮೀನಾಮೇಷ: ಐವನ್ ಡಿಸೋಜಾ
ಕೊರೊನಾ ಕಡಿಮೆಯಾಗುತ್ತಿದೆ ಎಂದು ಹೇಳುತ್ತಿರುವ ಸರ್ಕಾರ ಯಾಕೆ ಉಚಿತವಾಗಿ ಲಸಿಕೆ ನೀಡಲು ಮೀನಾಮೇಷ ಎಣಿಸುತ್ತಿದೆ. ಲಸಿಕೆ ಪಡೆದವರು ಯಾರೂ ಸತ್ತಿಲ್ಲ. ಲಸಿಕೆ ಸಿಗದೇ ಆದಂತಹಾ ಸಾವು ನೋವಿಗೆ ಬಿಜೆಪಿ ಸರ್ಕಾರ ನೇರ ಹೊಣೆ ಎಂದು ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜಾ ಆರೋಪಿಸಿದ್ದಾರೆ.
ಅವರು ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಲಸಿಕೆಯನ್ನು ಪಡೆಯದ ಕಾರಣ ನಮ್ಮವರು ಸತ್ತಿದ್ದಾರೆ ಎಂದು ಹೇಳುವ ಮಂದಿ ಹೆಚ್ಚಾಗುತ್ತಿದ್ದಾರೆ. ಲಸಿಕೆ ಪಡೆದವರು ಯಾರೂ ಸಾಯುವುದಿಲ್ಲ ಎಂದು ಅಧ್ಯಯನ ವರದಿಯೊಂದು ಹೇಳಿದೆ. ಹಾಗಾದರೆ ಇವತ್ತು ಲಸಿಕೆ ಸಿಗದೇ ಸಾವನ್ನಪ್ಪಿದ್ದವರಿಗೆ ಯಾರು ಹೊಣೆ ಎಂದು ಅವರು ಪ್ರಶ್ನಿಸಿದರು. ಹೀಗಾಗಿ ಸಾವು- ನೋವುಗಳಿಗೆ ಬಿಜೆಪಿ ಸರ್ಕಾರವೇ ಹೊಣೆ
ಸರ್ಕಾರಕ್ಕೆ ನೈತಿಕತೆ ಇಲ್ಲ. ಬಿಜೆಪಿ ಅಧ್ಯಕ್ಷರೊಬ್ಬರು ಬಿಜೆಪಿಗೆ ಕಾಂಗ್ರೆಸ್ನ ಸರ್ಟಿಫಿಕೇಟ್ ಅಗತ್ಯ ಇಲ್ಲ ಎಂದು ಹೇಳಿದ್ದಾರೆ. ಇದು ಈ ಶತಮಾನದ ಜೋಕ್ ಎಂದು ವ್ಯಂಗ್ಯವಾಡಿದ ಅವರು, ಅದು ಓಕೆ. ಜನರೇ ನಿಮಗೆ ವೀಸಾ ಕೊಡುತ್ತಾರೆ ಎಂದು ವ್ಯಂಗ್ಯವಾಡಿದರು. ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಆಡಳಿತ ಮಾಡಲು ಗೊತ್ತಿಲ್ಲ. ಕಾಂಗ್ರೆಸ್ ಸಂಘಟಿತವಾಗಿ ಕೆಲಸ ಮಾಡಿದ್ರೆ ಜೈಲಿಗೆ ಕಳುಹಿಸಲು ಮುಂದೆ ಬರ್ತಾರೆ. ಪ್ಯಾಕೇಜ್ ಘೋಷಣೆ ಮಾಡಿ ಬಿಪಿಎಲ್, ಎಪಿಎಲ್ ಕಾರ್ಡ್ ಎಂದು ಯಾಕೆ ವಿಂಗಡಣೆ ಮಾಡಬೇಕು. ಒಟ್ಟಾರೆಯಾಗಿ ಈ ಸರ್ಕಾರ ಜನಪರವಾಗಿಲ್ಲ. ಜನರ ಬಗ್ಗೆ ಕಾಳಜಿ ಇಲ್ಲ ಎಂದು ಕಿಡಿಕಾರಿದರು.
ಇದೇ ವೇಳೆ ಕೋವಿಡ್ ಮೂರನೇ ಅಲೆಯನ್ನು ತಡೆಯಲು ಕಾಂಗ್ರೆಸ್ ಕೋವಿಡ್ ಹೆಲ್ಪ್ ಲೈನ್ ವತಿಯಿಂದ ಮೂರು ಸಾವಿರ ಕೋವಿಡ್ ಪ್ರಿವೆಂಶನ್ ಕಿಟ್ ಹಾಗೂ ಕೋವಿಡ್ ಬ್ರೇಕ್ ದಿ ಚೈನ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಘೋಷಿಸಿದರು. ನಾಳೆಯಿಂದ ಬೆಳಗ್ಗೆ ಈ ಕೋವಿಡ್ ಪ್ರಿವೆಂಶನ್ ಕಿಟ್ಅನ್ನು ನೀಡಲಾಗುವುದು. ಈ ಮೂಲಕ ಮೂರನೇ ಅಲೆಯನ್ನು ತಡೆಗಟ್ಟಲು ನಾವು ಈಗಲೇ ಕೆಲಸ ಮಾಡುತ್ತೇವೆ ಎಂದರು.