ವಿಟ್ಲದ ಕೊಡಂಗೆ ಚೆಕ್ಪೋಸ್ಟ್ಗೆ ಎಡಿಜಿಪಿ ಪ್ರತಾಪ್ ರೆಡ್ಡಿ ಭೇಟಿ: ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ
ವಿಟ್ಲ: ಕೇರಳದಲ್ಲಿ ಕೋವಿಡ್ ಪ್ರಕರಣ ವ್ಯಾಪಕವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕೇರಳ- ಕರ್ನಾಟಕ ಗಡಿ ಪ್ರದೇಶವಾಗಿರುವ ವಿಟ್ಲ ಠಾಣಾ ವ್ಯಾಪ್ತಿಯ ಸಾಲೆತ್ತೂರು ಸಮೀಪದ ಕೊಡಂಗೆ ಚೆಕ್ ಪೋಸ್ಟ್ ಗೆ ಆಗಮಿಸಿ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡ ಕಾನೂನು ಸುವ್ಯವಸ್ಥೆ ಎಡಿಜಿಪಿ ಪ್ರತಾಪ್ ರೆಡ್ಡಿಯವರು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಆರಂಭದಲ್ಲಿ ಕೇರಳ- ಕರ್ನಾಟಕ ಗಡಿಪ್ರದೇಶವಾದ ತಲಪಾಡಿಯಲ್ಲಿ ತೆರೆಯಲಾಗಿರುವ ಚೆಕ್ ಪೋಸ್ಟ್ ಗೆ ಭೇಟಿ ನೀಡಿದರು. ಬಳಿಕ ಅಲ್ಲಿಂದ ವಿಟ್ಲ ಠಾಣಾ ವ್ಯಾಪ್ತಿಯ ಸಾಲೆತ್ತೂರು ಸಮೀಪದ ಕೊಡಂಗೆ ಚೆಕ್ ಪೋಸ್ಟ್ ಗೆ ಆಗಮಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ರಾಜ್ಯ ಸರಕಾರದ ಸೂಚನೆಯಂತೆ ಕೋವಿಡ್ ನೆಗೆಟಿವ್ ವರದಿ ಇಲ್ಲದೆ ರಾಜ್ಯದೊಳಗೆ ಪ್ರವೇಶ ನೀಡದಂತೆ ಕ್ರಮ ವಹಿಸುವಂತೆ ಅವರು ಈ ಸಂದರ್ಭ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೇವಲ ತುರ್ತು ಭೇಟಿ ಹಾಗೂ ಕೇರಳ ಭಾಗದ ವಿದ್ಯಾರ್ಥಿಗಳು ಪರೀಕ್ಷಾ ಹಾಲ್ ಟಿಕೆಟ್ ತೋರಿಸಿದರೆ ಅವಕಾಶ ನೀಡಲಾಗುತ್ತದೆ.
ಕಾಸರಗೋಡು ಭಾಗದಲ್ಲಿ ಕೊರೋನ ಸೋಂಕು ಹೆಚ್ಚಿರುವ ಹಿನ್ನೆಲೆಯಲ್ಲಿ ಈ ಬಿಗಿ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಕೇರಳದಿಂದ ರೈಲು ಮಾರ್ಗವಾಗಿ ಬರುವರಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಮಂಗಳೂರಿನ ಪುರಭವನದಲ್ಲಿ ಪರೀಕ್ಷಾ ಕೇಂದ್ರ ತೆರೆದಿರುವುದಾಗಿ ಪ್ರತಾಪ್ ರೆಡ್ಡಿ ಹೇಳಿದರು. ಕಾಸರಗೋಡು ಡಿಸಿ, ಎಸ್ಪಿ ಜತೆ ಜಿಲ್ಲೆಯ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ. ಹಾಗಾಗಿ ಉಭಯ ಜಿಲ್ಲೆಗಳ ನಡುವೆ ಯಾವುದೇ ಗೊಂದಲವಿಲ್ಲ ಎಂದು ಅವರು ಹೇಳಿದರು. ಗಡಿಯಲ್ಲಿ ಹೆಚ್ಚುವರಿ ಪೊಲೀಸ್ ಭದ್ರತೆ ಸೇರಿದಂತೆ ತಪಾಸಣೆ ಬಗ್ಗೆ ಅವರು ಈ ಸಂದರ್ಭ ಮಾಹಿತಿಯನ್ನು ಪಡೆದರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೊನಾವಣೆ, ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್.,ವಿಟ್ಲ ಠಾಣಾ ಇನ್ಸ್ ಪೆಕ್ಟರ್ ಹೆಚ್.ಇ. ನಾಗರಾಜ್ ಮೊದಲಾದವರು ಉಪಸ್ಥಿತರಿದ್ದರು.