ಶ್ರೀಯಕ್ಷದೇವ ಮಿತ್ರಕಲಾ ಮಂಡಳಿಯ 24ರ ಸಂಭಮ
ಮೂಡುಬಿದಿರೆ: ಬೆಳುವಾಯಿಯ ಶ್ರೀಯಕ್ಷದೇವ ಮಿತ್ರ ಕಲಾಮಂಡಳಿಯ 24ನೇ ವರ್ಷದ ಸಂಭಮ ಈ ಬಾರಿ ‘ಯಕ್ಷ ಕಲ್ಯಾಣೋತ್ಸವ’ ಶೀರ್ಷಿಕೆಯಡಿ ಸಮಾಜಮಂದಿರದಲ್ಲಿ ಕಲಾವಿದ ಮಿಜಾರು ದಿ. ಕೆ. ಸುಬ್ರಾಯ ಭಟ್ ಕಲಾವೇದಿಕೆಯಲ್ಲಿ ನ.13ರಂದು ದಿನಪೂರ್ತಿ ನಡೆಯಲಿದೆ ಎಂದು ಸಂಸ್ಥೆಯ ಸ್ಥಾಪಕ, ಕಾರ್ಯಾಧ್ಯಕ್ಷ ಎಂ.ದೇವಾನಂದ ಭಟ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಅವರು ಮೂಡುಬಿದರೆಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಸಭಾ ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ ರಾವ್ ಅವರಿಗೆ ಯಕ್ಷದೇವ ಪ್ರಶಸ್ತಿ 2021 ಪ್ರದಾನ ಮಾಡಲಾಗುವುದು. ಕಟೀಲು ಮೇಳದ ಕಲಾವಿದ ಸುರೇಶ್ ಬಳ್ಳಿ ಕುಪ್ಪೆಪದವು ಅವರಿಗೆ ಲಾಡಿ ಕೃಷ್ಣ ಶೆಟ್ಟಿ ಸಂಸ್ಮರಣ ವೇದಿಕೆ ಸನ್ಮಾನ, ಅರ್ಥಧಾರಿ, ನಿವೃತ್ತ ಶಿಕ್ಷಕಿ ಕೆ. ಜಯಲಕ್ಷ್ಮಿ ಕಾರಂತ ಅವರಿಗೆ ವನಜಾಕ್ಷಿ ಅಮ್ಮ ಸಂಸ್ಮರಣ ವೇದಿಕೆ ಸನ್ಮಾನ ಹಾಗೂಪ್ರಸಾದನ ಕಲಾವಿದ ಭುಜಂಗ ಶೆಟ್ಟಿಗಾರ್ ಕಿನ್ನಿಗೋಳಿ ಅವರಿಗೆ ದಾಮೋದರ ಶೆಟ್ಟಿಗಾರ್ ಸಂಸ್ಮರಣ ವೇದಿಕೆ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಶನಿವಾರ ಮುಂಜಾನೆ ಗಂ.8ರಿಂದ ಯುವಭಾಗವತರಿಂದ ಕಲ್ಯಾಣ ಪ್ರಸಂಗಗಳ ‘ಗಾನ ಸುಪ್ರಭಾತ’, 9.30 ಕ್ಕೆ ಶ್ರೀ ಕ್ಷೇತ್ರ ಕಟೀಲಿನ ಆಡಳಿತ ಮೊಕ್ತೇಸರ ಸನತ್ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು ಅವರಿಂದ ಕಾರ್ಯಕ್ರಮ ಉದ್ಘಾಟನೆ, 10.30ಕ್ಕೆ ಬೆಳುವಾಯಿ ಶ್ರೀಯಕ್ಷದೇವ ಸಾಧನ ಕೇಂದ್ರದ ವಿದ್ಯಾರ್ಥಿಗಳಿಂದ ‘ವಿದ್ಯುನ್ಮತಿ ಕಲ್ಯಾಣ’, ಮಧ್ಯಾಹ್ನ ಗಂ.2 ರಿಂದ ‘ರುಕ್ಮಿಣಿ ಕಲ್ಯಾಣ’ ವೃತ್ತಿಪರ ಕಲಾವಿದರಾದ ರಕ್ಷಿತ್ ಪಡ್ರೆ ಮತ್ತು ಹಾಸ್ಯಗಾರರಿಂದ ತುಳು ಯಕ್ಷಗಾನ, 6 ರಿಂದ ‘ಚಿತ್ರಾಕ್ಷಿ ಕಲ್ಯಾಣ’ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ಸಂಯೋಜಿಸಲಾಗಿದೆ ಎಂದು ವಿವರಿಸಿದರು. ಯಕ್ಷದೇವದ ಕಾರ್ಯದರ್ಶಿ ರವಿಪ್ರಸಾದ್ ಕೆ. ಶೆಟ್ಟಿ, ಸದಸ್ಯ ಸಂಜಿತ್ ಕನಡ ಉಪಸ್ಥಿತರಿದ್ದರು.