ಸಂಶೋಧಕನಿಗೆ ನೈತಿಕ ಜವಾಬ್ದಾರಿ ಮುಖ್ಯ – ಡಾ. ರವೀಂದ್ರನಾಥ್

ಉಡುಪಿ : ಶೈಕ್ಷಣಿಕ ಸಂಶೋಧನೆಯಲ್ಲಿ ಸಂಶೋಧಕನ ನೈತಿಕತೆ ಅತಿ ಮುಖ್ಯವಾಗುತ್ತದೆ. ಇದು ಸಂಶೋಧನೆಯಲ್ಲಿ ಸತ್ಯಶೋಧನೆಗೆ ದಾರಿಯಾಗುತ್ತದೆ. ಸಂಶೋಧಕನಲ್ಲಿ ಕರ್ತವ್ಯ ನಿಷ್ಠೆ ಇದ್ದಲ್ಲಿ ಕ್ಷೇತ್ರಕಾರ್ಯದ ಮೂಲಕ ಅಧ್ಯಯನ ಮಾಡಿ ಬೆಳಕಿಗೆ ಬಂದ ವಿಚಾರವನ್ನು ನಿರ್ಭೀತಿಯಿಂದ ಪ್ರಸ್ತುತಪಡಿಸಲು ಸಾಧ್ಯವಾಗುತ್ತದೆ. ಒಳ್ಳೆಯ ಸಂಶೋಧನಾ ವರದಿಯು ಸರಕಾರಕ್ಕೆ ಮುಂದಿನ ಯೋಜನೆಗಳನ್ನು ರೂಪಿಸಲು ದಾರಿದೀಪವಾಗುತ್ತದೆ ಎಂದು ಖ್ಯಾತ ಸಮಾಜಶಾಸ್ತ್ರಜ್ಞ, ನಿವೃತ್ತ ಪ್ರಾಂಶುಪಾಲ ಡಾ. ವೈ.ಕೆ. ರವೀಂದ್ರನಾಥ ಹೇಳಿದರು.

ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ಸಮಾಜಶಾಸ್ತ್ರ ವಿಭಾಗ ಮತ್ತು ಐ.ಕ್ಯೂ.ಎ.ಸಿ. ವತಿಯಿಂದ ನಡೆದ ಸಂಶೋಧನೆಯಲ್ಲಿ ನೈತಿಕ ಜವಾಬ್ದಾರಿ ಎಂಬ ಅಂತರ್ಜಾಲ ವಿಚಾರ ಸಂಕಿರಣದಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಮಾತನಾಡುತ್ತಿದ್ದರು.

ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಗಣನಾಥ ಶೆಟ್ಟಿ ಎಕ್ಕಾರು ಅವರು ತಂತ್ರಜ್ಞಾನದ ಸದ್ಬಳಕೆಯನ್ನು ಮಾಡಿಕೊಂಡರೆ ಸರಿಯಾದ ಸಮಯದೊಳಗೆ ಹಾಕಿಕೊಂಡ ಉದ್ದೇಶಕ್ಕನುಗುಣವಾಗಿ ಸಂಶೋಧನೆಮಾಡಲು ಸಾಧ್ಯ ಎಂದರು. ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥರಾದ ಪ್ರೊ. ರಾಘವ ನಾಯ್ಕ ಸ್ವಾಗತಿಸಿದರು. ಐ.ಕ್ಯೂ.ಎ.ಸಿ. ಸಂಚಾಲಕರಾದ ಡಾ. ಸುರೇಶ್ ರೈ ಕೆ., ಸಮಾಜಕಾರ್ಯ ವಿಭಾಗ ಮುಖ್ಯಸ್ಥ ಡಾ. ದುಗ್ಗಪ್ಪ ಕಜೆಕಾರ್, ಸಮಾಜಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಸುನೀತಾ ವಿ. ಉಪಸ್ಥಿತರಿದ್ದರು. ಪ್ರಾಧ್ಯಾಪಕಿ ಪ್ರೊ. ಶರ್ಮಿಳಾ ಹಾರಾಡಿ ಕಾರ್ಯಕ್ರಮ ನಿರೂಪಿಸಿದರೆ, ಸಹಾಯಕ ಪ್ರಾಧ್ಯಾಪಕಿ ಪ್ರೊ. ಸುಷ್ಮಾ ಟಿ. ವಂದಿಸಿದರು.

Related Posts

Leave a Reply

Your email address will not be published.