ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ : ಡಿ.ವಿ.ಸದಾನಂದಗೌಡ

ಬೆಂಗಳೂರು: ರಾಜ್ಯದ ಜನರ ಬೆಂಬಲ ಹಾಗೂ ಪ್ರಧಾನಿ ಭೇಟಿ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಅವರೊಂದಿಗಿನ ಸಾಮರಸ್ಯ ನೋಡಿದರೆ ಸದ್ಯಕ್ಕೆ ಬದಲಾವಣೆ ಇಲ್ಲ ಎಂದೆನಿಸುತ್ತದೆ. ಆದರೆ, ಮುಂದಿನದು ಬಿಜೆಪಿ ರಾಷ್ಟ್ರೀಯ ನಾಯಕರ ನಿರ್ಧಾರಕ್ಕೆ ಬಿಟ್ಟಿದ್ದು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣ ಎಂದರೆ ಹೀಗೆ ದಿನಕ್ಕೊಂದು ತಿರುವುಗಳು ಸಣ್ಣಪುಟ್ಟ ವ್ಯತ್ಯಾಸಗಳು ಆಗುತ್ತಿರುತ್ತವೆ. ನನಗೆ ತಿಳಿದ ಮಟ್ಟಿಗೆ ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ರಾಜ್ಯದ ವಿದ್ಯಮಾನಗಳನ್ನು ಸವಿವರವಾಗಿ ತಿಳಿಸಿದ್ದಾರೆ. ಕೋವಿಡ್ ವೇಳೆ ಸರ್ಕಾರ ಇಟ್ಟ ದಿಟ್ಟ ಹೆಜ್ಜೆ, ಅಭಿವೃದ್ದಿ ಕಾರ್ಯಗಳಲ್ಲಿ ನಿರತವಾಗಿದ್ದ ಬಗ್ಗೆ ಮೆಚ್ಚುಗೆಯೂ ವ್ಯಕ್ತವಾಗಿದೆ. ಹಾಗಾಗಿ ಸಿಎಂ ಬದಲಾವಣೆ ಯಂತಹ ಸಂದರ್ಭ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಿಎಂ ದೆಹಲಿಗೆ ಹೋಗಿ ಬಂದ ನಂತರ ಸಿಎಂಗೆ ಬೆಂಬಲ ವ್ಯಕ್ತವಾಗುತ್ತಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಒಳ್ಳೆ ಕೆಲಸ ಮಾಡಿದಾಗ ಮಠ-ಮಂದಿರ ಹಾಗೂ ಸಾರ್ವಜನಿಕರು ಬೆಂಬಲ ಕೊಟ್ಟೇ ಕೊಡುತ್ತಾರೆ. ಅದರ ಪ್ರತಿ ಫಲವೇ ಯಡಿಯೂರಪ್ಪ ಅವರ ಪರ ಬಂದಿರುವ ಸಹಾಯ ಹಸ್ತಗಳು ಎಂದು ಹೇಳಿದರು.

ನಳಿನ್ ಕುಮಾರ್ ಕಟೀಲ್ ಅವರ ಎನ್ನಲಾದ ಆಡಿಯೋ ವೈರಲ್ ಕುರಿತಂತೆ ಕೇಳಿದ ಪ್ರಶ್ನೆಗೆ ಸ್ವತಃ ಅವರೇ ಆ ಆಡಿಯೋ ನನ್ನದಲ್ಲ ಎಂದು ಹೇಳಿರುವಾಗ ವೃಥಾ ಚರ್ಚೆ ಏಕೆ ಎಂದರು. ಇಡಿ ರಾಜ್ಯದ ಜನರ ಬೆಂಬಲ ಹಾಗೂ ಪ್ರಧಾನಿಯವರ ಸಾಮರಸ್ಯ ನೋಡಿದರೆ ಬದಲಾವಣೆ ಇಲ್ಲ ಎಂದು ಅನ್ನಿಸುತ್ತದೆ ಎಂದರು.

ಯತ್ನಾಳ್ ಅವರು ಇದೇ 26ರ ವರೆಗೆ ಕಾದು ನೋಡಿ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿಲು ನಿರಾರಿಸಿದ ಅವರು, ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗುತ್ತದೆ ಎಂದು ಅನಿಸುತ್ತಿಲ್ಲ. ಉಳಿದಂತೆ ರಾಷ್ಟ್ರೀಯ ನಾಯಕರಿಗೆ ಬಿಟ್ಟ ವಿಚಾರ ಎಂದು ಹೇಳಿದರು.

Related Posts

Leave a Reply

Your email address will not be published.