ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ವನ ಸಂವರ್ಧನಾ ಕಾರ್ಯಕ್ರಮ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವತಿಯಿಂದ ಬೃಹತ್ ವನ ಸಂವರ್ಧನಾ ಕಾರ್ಯಕ್ರಮ ಜರಗಿತು. ಶ್ರೀ ಕ್ಷೇತ್ರದಲ್ಲಿ ಪರಿಸರ ಸಂರಕ್ಷಣೆ ಸಂಬಂಧವಾಗಿ ಪ್ರಸ್ತಾಪಿತ ರಸ್ತೆಗಳ 14 ವಿವಿಧ ಕಡೆಗಳಲ್ಲಿ ಏಕಕಾಲದಲ್ಲಿ ವಿವಿಧ ಸಸ್ಯಗಳನ್ನು ನೆಡುವ ಬೃಹತ್ ವನ ಸಂವರ್ಧನಾ ಕಾರ್ಯಕ್ರಮವನ್ನು ಶ್ರೀ ದೇವಳದ ಆಡಳಿತ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.ಈ ಸಂದರ್ಭ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ 14 ಕಡೆ ಏಕ ಕಾಲದಲ್ಲಿ ಗಿಡ ನೆಟ್ಟು ಎಲ್ಲಾ ಧಾರ್ಮಿಕ ಕೇಂದ್ರಗಳಿಗೆ ಮಾದರಿಯಾದ ಕಾರ್ಯವನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮಾಡಿದೆ ಎಂದರು.
ಸೇವಾ ಭಾರತಿ ಸುಳ್ಯ, ಕರ್ನಾಟಕ ಅರಣ್ಯ ಇಲಾಖೆ ಇವರ ಸಹಕಾರದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಕ್ತೇಶ್ವರಿ ಗುಡಿ ಎದುರಿನ ಆದಿಶೇಷ ವಸತಿಗೃಹ ರಸ್ತೆಯಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಚಾಲನೆಯನ್ನು ನೀಡಿದರು. ಆದಿಸುಬ್ರಹ್ಮಣ್ಯ ಬಳಿಯ ಸರ್ಪಸಂಸ್ಕಾರ ಯಾಗಶಾಲೆ ಬಳಿ ಸಚಿವ ಎಸ್.ಅಂಗಾರ, ಕೆ.ಎಸ್.ಆರ್.ಟಿ.ಸಿಯಿಂದ ಆದಿ ಜಂಕ್ಷನ್ ತನಕದ ರಸ್ತೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯಕ್, ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತೆ ರೋಹಿಣಿ ಸಿಂಧೂರಿ, ವಲ್ಲೀಶದಿಂದ ಕೆ.ಎಸ್.ಎಸ್ ತನಕದ ರಸ್ತೆಯಲ್ಲಿ ಗಿಡ ನೆಟ್ಟರು.
ಈ ಸಂದರ್ಭದಲ್ಲಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಕಶೆಕೋಡಿ ಸೂರ್ಯನಾರಾಯಣ ಭಟ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ರಾಜ್ಯ ಪರಿಷತ್ ಸದಸ್ಯ ಗೋವಿಂದ ಭಟ್, ಎ.ಸಿ.ಎಫ್. ಕಾರ್ಯಪ್ಪ, ದಾರ್ಮಿಕ ದತ್ತಿ ಇಲಾಖೆಯ ಅಭಿಜಿನ್, ಉದಯಕುಮಾರ್, ಸಹಾಯಕ ಉಪ ಆಯುಕ್ತ ಯತೀಶ್ ಉಳ್ಳಾಲ್, ಜಯಪ್ರಕಾಶ್ , ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರು, ಮಾಸ್ಟರ್ ಪ್ಲಾನ್ ಸದಸ್ಯರು, ಗ್ರಾ.ಪಂ ಅಧ್ಯಕ್ಷೆ, ಉಪಾಧ್ಯಕ್ಷೆ, ಸದಸ್ಯರು, ಸ್ಥಳೀಯ ಮುಖಂಡರು, ದೇವಸ್ಥಾನದ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.