ಸೊರ್ನಾಡು ಬಳಿ ಡೀಸೆಲ್ ಪೈಪ್ಲೈನ್ಗೆ ಕನ್ನ
ಬಂಟ್ವಾಳ: ಮಣ್ಣಡಿ ಹಾದು ಹೋಗಿರುವ ಪೈಪ್ ಲೈನ್ ಗೆ ಕನ್ನ ಕೊರೆದು ಡಿಸೇಲ್ ಕಳವು ನಡೆಸುತ್ತಿದ್ದ ಪ್ರಕರಣವೊಂದು ತಾಲೂಕಿನ ಅರಳ ಗ್ರಾಮದ ಸೊರ್ನಾಡು ಬಳಿ ಶುಕ್ರವಾರ ರಾತ್ರಿ ಬೆಳಕಿಗೆ ಬಂದಿದೆ.
ಇಲ್ಲಿನ ಅರ್ಬಿ ಎಂಬಲ್ಲಿ ಐವನ್ ಪಿಂಟೊ ಎಂಬರಿಗೆ ಸೇರಿದ ಖಾಸಗಿ ಜಮೀನಿನಲ್ಲಿ ಮಂಗಳೂರು- ಬೆಂಗಳೂರಿಗೆ ಹಾದು ಹೋಗಿರುವ ಎಚ್ ಪಿ.ಎಸ್ ಎಲ್ ಪೆಟ್ರೊನೆಟ್ ಸಂಸ್ಥೆಗೆ ಸೇರಿದ ಪೈಪ್ ಲೈನ್ ಗೆ ಕನ್ನ ಕೊರೆದು ಡಿಸೆಲ್ ಕಳವು ನಡೆಸಲಾಗಿರುವುದಾಗಿ ತಿಳಿದು ಬಂದಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಜಮೀನಿನ ಮಾಲಕ ಐವನ್ ಪಿಂಟೊ ತಲೆಮರೆಸಿಕೊಂಡಿದ್ದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಐವನ್ ಅವರಿಗೆ ಸೇರಿದ ಖಾಸಗಿ ಜಮೀನ ರಸ್ತೆಯಲ್ಲಿ ಸುಮಾರು ೧೫ ಅಡಿ ಆಳದಲ್ಲಿ ಹಾದು ಹೋಗಿರುವ ಪೈಪ್ ಲೈನ್ ಗೆ ಕನ್ನ ಕೊರೆದು ಅದಕ್ಕೆ ಇನ್ನೊಂದು ಪ್ರತ್ಯೇಕ ಪೈಪ್ ಅಳವಡಿಸಿ ಸುಮಾರು ಅರ್ಧ ಕಿ.ಮೀ.ದೂರದಲ್ಲಿ ಗೇಟ್ ವಾಲ್ ನಿರ್ಮಿಸಿ ಟ್ಯಾಪ್ ಮೂಲಕ ಡಿಸೇಲನ್ನು ಕಳವು ನಡೆಸಿ ಮಾರಾಟ ಮಾಡಲಾಗುತ್ತಿತ್ತು ಎನ್ನುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ಇನ್ನೊಂದು ಗೇಟ್ ವಾಲ್ ಐವನ್ ಅವರ ಅಡಿಕೆ ತೋಟದ ಬಳಿ ಪತ್ತೆಯಾಗಿದೆ.ಪೈಪ್ ಲೈನ್ ಮೂಲಕ ಪೂರೈಕೆಯಾದ ಡಿಸೇಲ್ ಅಳತೆಯಲ್ಲಿ ವ್ಯತ್ಯಾಸ ಕಂಡು ಬರುತ್ತಿದ್ದ ಹಿನ್ನಲೆಯಲ್ಲಿ ಕಂಪೆನಿ ಅಧಿಕಾರಿಗಳು ಮಂಗಳೂರು ಪೊಲೀಸ್ ಕಮಿಷನರಿಗೆ ದೂರು ನೀಡಿದ್ದರು. ಅಲ್ಲದೆ ಕಂಪೆನಿಯ ತಾಂತ್ರಿಕ ತಜ್ಞರ ಪರಿಶೀಲನೆಯ ವೇಳೆ ಇಲ್ಲಿ ಸೋರಿಕೆಯಿರುವುದು ತಿಳಿದು ಬಂದಿದೆ. ಅದರಂತೆ ಅರ್ಬಿಯ ಐವನ್ ಅವರ ಜಮೀನಿನಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸರ ಸಮಕ್ಷಮದಲ್ಲಿ ಹಿಟಾಚಿ ಮೂಲಕ ಹೊಂಡ ತೋಡಿದಾಗ ಪೈಪ್ ಲೈನ್ ಗೆ ಕನ್ನ ಕೊರೆದು ಡಿಸೆಲ್ ಕಳವು ಮಾಡುತ್ತಿರುವುದು ಪತ್ತೆಯಾಗಿದೆ. ಹಲವು ವರ್ಷಗಳಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಡಿಸೇಲ್ ಕಳವಾಗಿರಬಹುದು ಎಂದು ಶಂಕಿಸಲಾಗಿದ್ದು ತನಿಖೆ ಮುಂದುವರೆದಿದೆ.